ಬೆಂಗಳೂರು: ರಾಜ್ಯದಲ್ಲಿ ಹಾಲಿನ ದರ ಏರಿಕೆಯ ವಿಚಾರವಾಗಿ ಸದಾ ಸುದ್ದಿಯಲ್ಲಿರುವ ಕರ್ನಾಟಕ ಹಾಲು ಮಹಾಮಂಡಳಿಗೆ (KMF) ಈಗ ಮತ್ತೊಂದು ವಿವಾದ ಎದುರಾಗಿದೆ. ಅರ್ಧ ಲೀಟರ್ ನ ನಂದಿನಿ ಹಸುವಿನ ಹಾಲಿನ ಪ್ಯಾಕೆಟ್ ನಲ್ಲಿ ಸತ್ತ ಜೇಡ ಪತ್ತೆಯಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಮಹಿಳೆಯೊಬ್ಬರು ಕೆಎಂಎಫ್ ಗೆ ದೂರು ನೀಡಿರುವುದು ವರದಿಯಾಗಿದೆ. ಈ ಘಟನೆಯು ಹಾಲಿನ ಸಂಸ್ಕರಣಾ ಘಟಕಗಳಲ್ಲಿನ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣದ ಕುರಿತು ಗಂಭೀರ ಆತಂಕ ಮೂಡಿಸಿದೆ.
ಪಾತ್ರೆಗೆ ಹಾಲು ಸುರಿಯುತ್ತಿದ್ದಾಗ ಸತ್ತ ಜೇಡ ಪತ್ತೆ
ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸಂಬಂಧಿ ನಾಗೂರ್ ರೋಜಾ ಅವರು ಭಾನುವಾರ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ. ಫ್ರಿಡ್ಜ್ ನಲ್ಲಿಟ್ಟಿದ್ದ ಹಾಲಿನ ಪ್ಯಾಕೆಟ್ ತೆರೆದು, ಕುದಿಸಲು ಪಾತ್ರೆಗೆ ಹಾಲು ಸುರಿಯುತ್ತಿದ್ದಾಗ ಅದರೊಂದಿಗೆ ಸಣ್ಣ ಸತ್ತ ಜೇಡವೊಂದು ಹೊರಬಂದಿದೆ. ಇದನ್ನು ಕಂಡು ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ.
ಕಳೆದ ಸುಮಾರು ಎರಡು ದಶಕಗಳಿಂದ ತಮ್ಮ ಕುಟುಂಬ ನಂದಿನಿ ಹಾಲು ಮತ್ತು ಕೆಎಂಎಫ್ ನ ಇತರ ಉತ್ಪನ್ನಗಳನ್ನು ನಿರಂತರವಾಗಿ ಬಳಸುತ್ತಾ ಬಂದಿದೆ. ಸಾಮಾನ್ಯವಾಗಿ ಹಾಲಿನ ಪ್ಯಾಕೆಟ್ಗಳನ್ನು ಮಾರಾಟಗಾರರಿಂದ ಮುಚ್ಚಿದ ಬಾಕ್ಸ್ನಲ್ಲಿ ಪಡೆಯಲಾಗುತ್ತದೆ. ಬಳಿಕ ನೀರಿನಲ್ಲಿ ತೊಳೆದು ಫ್ರಿಡ್ಜ್ ನಲ್ಲಿ ಸಂಗ್ರಹಿಸಲಾಗುತ್ತದೆ. ಈ ಬಾರಿಯೂ ಅದೇ ಕ್ರಮ ಅನುಸರಿಸಿದ ನಂತರವೇ ಪ್ಯಾಕೆಟ್ ತೆರೆದಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಕೆಎಂಎಫ್ ಗೆ ಇಮೇಲ್ ಮೂಲಕ ದೂರು:
- ಹಾಲಿನಲ್ಲಿ ಜೇಡ ಪತ್ತೆಯಾದ ತಕ್ಷಣವೇ ರೋಜಾ ಅವರು ಅದರ ವಿಡಿಯೋ ಚಿತ್ರೀಕರಿಸಿ ಹಾಲಿನ ಮಾರಾಟಗಾರರಿಗೆ ಕಳುಹಿಸಿದರು.
- ಪ್ಯಾಕೆಟ್ ಅನ್ನು ಎಸೆಯುವಂತೆ ಮಾರಾಟಗಾರರು ಸಲಹೆ ನೀಡಿದರಾದರೂ, ಆಹಾರ ಉತ್ಪನ್ನದಲ್ಲಿ ಇಂತಹ ಕಶ್ಮಲ ಪತ್ತೆಯಾಗಿರುವುದು ಗಂಭೀರ ವಿಚಾರವಾಗಿರುವುದರಿಂದ ಅವರು ಪ್ಯಾಕೆಟ್ ಎಸೆಯಲು ನಿರಾಕರಿಸಿದರು.
- ಬಳಿಕ ಕೆಎಂಎಫ್ ನ ಘಟಕವಾದ ಮದರ್ ಡೇರಿಯ ಮಾರ್ಕೆಟಿಂಗ್ ಮ್ಯಾನೇಜರ್ ಗೆ ಇಮೇಲ್ ಮೂಲಕ ಅಧಿಕೃತ ದೂರು ಸಲ್ಲಿಸಿದರು.
- ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ–2006ರ ಸೆಕ್ಷನ್ 26, 27 ಮತ್ತು 54ರ ಅಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸೋಮವಾರ ಕೆಎಂಎಫ್ನ ಇಬ್ಬರು ಅಧಿಕಾರಿಗಳು ನಾಗೂರ್ ರೋಜಾ ಅವರ ಮನೆಗೆ ನೇರವಾಗಿ ಭೇಟಿ ನೀಡಿದ್ದಾರೆ. ಪರಿಶೀಲನೆಗಾಗಿ ಹಾಲಿನ ಮಾದರಿ ಹಾಗೂ ಪ್ಯಾಕೆಟ್ ಅನ್ನು ಸಂಗ್ರಹಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಕೂಲಂಕಷ ತನಿಖೆ ನಡೆಸಿ, ಯಾವ ಘಟಕದಲ್ಲಿ ಈ ಹಾಲನ್ನು ಪ್ಯಾಕಿಂಗ್ ಮಾಡಲಾಗಿದೆ ಎಂಬುದನ್ನು ಪತ್ತೆಹಚ್ಚುವುದಾಗಿ ಅಧಿಕಾರಿಗಳು ಭರವಸೆ ನೀಡಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
