ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮ ಹಾಗೂ ಮೋಜು–ಮಸ್ತಿನ ನಡುವೆ ಪಟಾಕಿ ಸಿಡಿಸುವಾಗ ಸಂಭವಿಸಿದ ಅನಾಹುತಗಳು ಸಿಲಿಕಾನ್ ಸಿಟಿಯಲ್ಲಿ ಆತಂಕ ಮೂಡಿಸಿವೆ. ಪಟಾಕಿ ಸಿಡಿಮದ್ದಿನ ಕಿಡಿ ಕಣ್ಣಿಗೆ ತಾಕಿ ಗಾಯಗೊಂಡ 100ಕ್ಕೂ ಅಧಿಕ ಮಂದಿ ನಗರದ ವಿವಿಧ ಹೆಸರಾಂತ ಕಣ್ಣಿನ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಗಾಯಾಳುಗಳಲ್ಲಿ ಹಸುಗೂಸುಗಳು ಹಾಗೂ ಅತಿಚಿಕ್ಕ ವಯಸ್ಸಿನ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಪೋಷಕರಲ್ಲಿ ತೀವ್ರ ಕಳವಳ ಮೂಡಿಸಿದೆ. ಕೆಲವರ ಕಣ್ಣಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವೂ ಎದುರಾಗಿದೆ. ವಿಶೇಷವೆಂದರೆ, ಪಟಾಕಿ ಸಿಡಿಸಿದವರಷ್ಟೇ ಅಲ್ಲದೆ, ಅಕ್ಕಪಕ್ಕದಲ್ಲಿ ನಿಂತು ಸಂಭ್ರಮ ನೋಡುತ್ತಿದ್ದ ನಿರಪರಾಧಿಗಳೂ ಸಹ ಗಾಯಗೊಂಡಿರುವುದು ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ನಾರಾಯಣ ನೇತ್ರಾಲಯ (ಒಟ್ಟು 70 ಪ್ರಕರಣಗಳು):
ನಗರದ ರಾಜಾಜಿನಗರದಲ್ಲಿರುವ ನಾರಾಯಣ ನೇತ್ರಾಲಯದ ಕೇಂದ್ರವೊಂದರಲ್ಲೇ ಬರೋಬ್ಬರಿ 41 ಕಣ್ಣಿನ ಗಾಯದ ಪ್ರಕರಣಗಳು ವರದಿಯಾಗಿವೆ. ಇನ್ನುಳಿದಂತೆ ಬೊಮ್ಮಸಂದ್ರ, ಬನ್ನೇರುಘಟ್ಟ ರಸ್ತೆ ಮತ್ತು ವೈಟ್ಫೀಲ್ಡ್ ಕೇಂದ್ರಗಳಲ್ಲಿ ಒಟ್ಟು 29 ಪ್ರಕರಣಗಳು ದಾಖಲಾಗಿವೆ. ರಾಜಾಜಿನಗರ ಕೇಂದ್ರದಲ್ಲಿ ಗಾಯಗೊಂಡ 41 ಮಂದಿಯಲ್ಲಿ 24 ಮಂದಿ 18 ವರ್ಷದೊಳಗಿನ ಅಪ್ರಾಪ್ತ ಮಕ್ಕಳು ಎಂಬುದು ಆಘಾತಕಾರಿ ಸಂಗತಿ. ಇವರಲ್ಲಿ 29 ಮಂದಿ ಸ್ವತಃ ತಾವೇ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದರೆ, 12 ಮಂದಿ ಪಕ್ಕದಲ್ಲಿ ನಿಂತು ವೀಕ್ಷಿಸುತ್ತಿದ್ದಾಗ ಗಾಯಗೊಂಡಿದ್ದಾರೆ. ಈ ಪೈಕಿ 40 ಮಂದಿಗೆ ಹೊರರೋಗಿಯಾಗಿ ಔಷಧೋಪಚಾರ ನೀಡಲಾಗಿದ್ದು, ಒಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಮಿಂಟೋ ನೇತ್ರ ಆಸ್ಪತ್ರೆ (14 ಪ್ರಕರಣಗಳು):
ಪ್ರಸಿದ್ಧ ಮಿಂಟೋ ಆಸ್ಪತ್ರೆಯಲ್ಲಿ ಒಟ್ಟು 14 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಬಲ್ಬ್ ಪಟಾಕಿ ಹಾಗೂ ಇತರೆ ಸ್ಪೋಟಕಗಳಿಂದ 10 ಮಂದಿಗೆ ಗಂಭೀರ ಗಾಯಗಳಾಗಿವೆ. ನಾಲ್ವರಿಗೆ ಸಾಮಾನ್ಯ ಗಾಯಗಳಾಗಿದ್ದು, ಒಟ್ಟು ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಇಬ್ಬರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಶಂಕರ ಕಣ್ಣಿನ ಆಸ್ಪತ್ರೆ (26 ಪ್ರಕರಣಗಳು):
ಈ ಆಸ್ಪತ್ರೆಯಲ್ಲಿ ಒಟ್ಟು 26 ಪ್ರಕರಣಗಳು ದಾಖಲಾಗಿವೆ. ಗಾಯಾಳುಗಳ ಪಟ್ಟಿಯಲ್ಲಿ ಕೇವಲ ಮೂರು ತಿಂಗಳ ಹಸುಗೂಸಿನಿಂದ ಹಿಡಿದು 46 ವರ್ಷದ ವಯಸ್ಕರವರೆಗೂ ಇದ್ದಾರೆ. ಕೇವಲ ಐದು ತಿಂಗಳ ಮಗುವಿಗೆ ಪಟಾಕಿಯ ಕಿಡಿ ತಾಗಿ ಗಾಯವಾಗಿರುವ ದಾರುಣ ಘಟನೆಯೂ ವರದಿಯಾಗಿದೆ.
ದೀಪಾವಳಿಯಂತಹ ಹಬ್ಬಗಳು ಸಂತೋಷ ತರಬೇಕೆಂಬುದರ ಬದಲು ಎಚ್ಚರಿಕೆ ವಹಿಸದಿದ್ದರೆ ಎಂಥಹುದೊಂದು ದುರಂತಕ್ಕೆ ದಾರಿ ಮಾಡಿಕೊಡುತ್ತವೆ ಎಂಬುದಕ್ಕೆ ಈ ಘಟನೆಗಳು ಸಾಕ್ಷಿಯಾಗಿವೆ. ಪಟಾಕಿ ಸಿಡಿಸುವಾಗ ಸಣ್ಣ ನಿರ್ಲಕ್ಷ್ಯವೂ ಜೀವಮಾನದ ದೃಷ್ಟಿಯನ್ನೇ ಕಸಿದುಕೊಳ್ಳಬಹುದು ಎಂಬುದನ್ನು ಈ ಕಣ್ಣ ತೆರೆಸುವ ಅಂಕಿ-ಅಂಶಗಳು ತೋರಿಸಿಕೊಟ್ಟಿವೆ. ಮುಂದಿನ ದಿನಗಳಲ್ಲಾದರೂ ಪೋಷಕರು ಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾದ ತುರ್ತು ಅವಶ್ಯಕತೆಯಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
