ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ: ದೀಪಾವಳಿ ಎಂದರೆ ಕೇವಲ ದೀಪಗಳ ಹಬ್ಬವಲ್ಲ. ಅದು ಸಂಸ್ಕೃತಿ, ಸಂಪ್ರದಾಯ, ಪರಂಪರೆ ಮತ್ತು ಮಾನವೀಯ ಸಂಬಂಧಗಳನ್ನು ಬೆಸೆಯುವ ಸಂಭ್ರಮ. ಅದರಲ್ಲೂ ಲಂಬಾಣಿ ಸಮುದಾಯದ ಮೇರಾ– ದವಾಳಿ ಆಚರಣೆಯೇ ವಿಶಿಷ್ಟ ಸಾಂಸ್ಕೃತಿಕ ವೈಭವ. ಮನೆಮನೆಗೆ ದೀಪ ಬೆಳಗಿಸುವ ಮೂಲಕ ಹಿರಿಯರನ್ನು ಸ್ಮರಿಸುವುದು, ಪ್ರಕೃತಿಗೆ ಪೂಜೆ ಸಲ್ಲಿಸುವುದು ಹಾಗೂ ಸಾಮೂಹಿಕವಾಗಿ ಜಾನಪದ ನೃತ್ಯ ಮಾಡುವ ಮೂಲಕ ಸಮುದಾಯದ ಒಗ್ಗಟ್ಟನ್ನು ಸಾರುವುದು ಈ ಹಬ್ಬದ ವಿಶೇಷತೆ.
ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಹಾಗೂ ಬಿ.ಡಿ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದೇನಹಳ್ಳಿ, ಅರಸಾಪುರ ಮತ್ತು ಔದಾರನಹಳ್ಳಿ ಲಂಬಾಣಿ ತಾಂಡಗಳಲ್ಲಿ ಮೂರು ದಿನಗಳ ಕಾಲ ಮೇರಾ–ದವಾಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.
ಮನೆ ಮನೆಗೆ ಮೇರಾ ಹಿರಿಯರಿಗೆ ಗೌರವ!
ಅಮಾವಾಸ್ಯೆಯಂದು ಲಂಬಾಣಿ ಸಮುದಾಯದ ಮಹಿಳೆಯರು ಸಾಂಪ್ರದಾಯಿಕ ವರ್ಣರಂಜಿತ ಉಡುಗೆ ತೊಟ್ಟು, ಕೈಯಲ್ಲಿ ಹಣತೆ ಹಿಡಿದು ತಾಂಡದ ಪ್ರತಿಯೊಂದು ಮನೆಗೂ ಭೇಟಿ ನೀಡುತ್ತಾರೆ. ಹಿರಿಯರನ್ನು ಸ್ಮರಿಸಿ ಗೌರವ ಸಲ್ಲಿಸುವ ಈ ಆಚರಣೆಗೆ ಮೇರಾ ಎಂದು ಕರೆಯಲಾಗುತ್ತದೆ. ದೇವಾಲಯದ ಮುಂದೆ ಮಹಿಳೆಯರು ಸಾಮೂಹಿಕವಾಗಿ ಲಂಬಾಣಿ ಜಾನಪದ ಹಾಡುಗಳನ್ನು ಹಾಡಿ ನೃತ್ಯ ಮಾಡುವ ದೃಶ್ಯ ತಾಂಡದ ಸಾಂಸ್ಕೃತಿಕ ಸೊಬಗನ್ನು ಹೆಚ್ಚಿಸುತ್ತದೆ. ದೀಪಾವಳಿ ಪಾಡ್ಯದಂದು ಹಿರಿಯರು, ಜಾನುವಾರುಗಳು ಹಾಗೂ ಪ್ರಕೃತಿಯ ವಿವಿಧ ಶಕ್ತಿಗಳನ್ನು ಸ್ಮರಿಸಿ ಪೂಜೆ ಸಲ್ಲಿಸುವ ಸಂಪ್ರದಾಯವೂ ಲಂಬಾಣಿ ಸಮುದಾಯದಲ್ಲಿದೆ. ಗಾಳಿ, ಬೆಳಕು, ಚಂದ್ರ, ಸೂರ್ಯ ಸೇರಿದಂತೆ ಪ್ರಕೃತಿಯ ಮಹತ್ವವನ್ನು ಸಾರುವ ಈ ಆಚರಣೆ ಪರಂಪರೆಯ ಮೇಲಿನ ಸಮುದಾಯದ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.
ಜನರೊಂದಿಗೆ ಬೆರೆತ ಎಂಎನ್ ಜೆ ಮಂಜುನಾಥ್
ಮೇರಾ–ದವಾಳಿ ಸಂಭ್ರಮದಲ್ಲಿ ಭಾಗವಹಿಸಿದ ಸಮಾಜಸೇವಕ ಎಂಎನ್ ಜೆ ಮಂಜುನಾಥ್ ಮಾತನಾಡಿ, ಲಂಬಾಣಿ ಸಮುದಾಯದ ದೀಪಾವಳಿ ಆಚರಣೆಯಲ್ಲಿ ಹಿರಿಯರಿಗೆ ನೀಡುವ ಗೌರವ ಮತ್ತು ಮಹಿಳೆಯರು ಮನೆಮನೆಗೆ ತೆರಳಿ ದೀಪ ಬೆಳಗಿಸುವ ಸಂಪ್ರದಾಯ ನನಗೆ ಅತ್ಯಂತ ಮೆಚ್ಚುಗೆಯಾಗಿದೆ. ಇಂತಹ ಆಚರಣೆಗಳು ಸಮುದಾಯದ ಒಗ್ಗಟ್ಟು, ಸಂಸ್ಕೃತಿ ಮತ್ತು ಪರಂಪರೆಯನ್ನು ಜೀವಂತವಾಗಿರಿಸುತ್ತವೆ. ಬಂಜಾರ ಸಮುದಾಯದ ಈ ಮಹತ್ವದ ಹಬ್ಬವು ಮುಂದಿನ ಪೀಳಿಗೆಗೂ ಮಾದರಿಯಾಗುವಂತೆ ಇನ್ನಷ್ಟು ವೈಭವದಿಂದ ನಡೆಯಲಿ ಎಂದು ಹಾರೈಸಿದರು.
ಕೊರಟಗೆರೆ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಮುಂದೆಯೂ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು, ಬಡವರ ಪರವಾಗಿ ನಿಲ್ಲುವುದು ಮತ್ತು ಗ್ರಾಮೀಣ ಭಾಗದ ಅಭಿವೃದ್ಧಿಗೆ ಶ್ರಮಿಸುವುದೇ ತಮ್ಮ ಆಶಯವಾಗಿದೆ ಎಂದು ತಿಳಿಸಿದರು.
ಹಬ್ಬದ ಸಂಭ್ರಮಕ್ಕೆ ಮೂರು ದಿನಗಳ ಸಾಂಸ್ಕೃತಿಕ ಮೆರುಗು
ಮಾದೇನಹಳ್ಳಿ ತಾಂಡದ ಮುಖಂಡ ಹಾಗೂ ಗುತ್ತಿಗೆದಾರ ಕೃಷ್ಣಮೂರ್ತಿ ಮಾತನಾಡಿ, ಜಿಲ್ಲಾ ಪಂಚಾಯಿತಿ ಕ್ಷೇತ್ರದ ಆಕಾಂಕ್ಷಿಯಾಗಿರುವ ಎಂಎನ್ ಜೆ ಮಂಜುನಾಥ್ ಅವರು ಕಳೆದ ಹತ್ತು ವರ್ಷಗಳಿಂದ ಕೊರಟಗೆರೆ ಕ್ಷೇತ್ರದಲ್ಲಿ ಸಮಾಜಸೇವೆಯ ಮೂಲಕ ಜನರೊಂದಿಗೆ ಗುರುತಿಸಿಕೊಂಡಿದ್ದಾರೆ. ಬಡವರು ಮತ್ತು ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅವರ ಸೇವಾ ಮನೋಭಾವ ಮುಂದಿನ ದಿನಗಳಲ್ಲಿಯೂ ಜನರ ವಿಶ್ವಾಸಕ್ಕೆ ಪಾತ್ರವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಂಗಾಧರಯ್ಯ, ವೆಂಕಟರೆಡ್ಡಿ, ಮಂಜುನಾಥ್, ಕೃಷ್ಣಮೂರ್ತಿ, ರಾಮಕೃಷ್ಣನಾಯ್ಕ, ಜಯಣ್ಣ, ಸಿದ್ದಪ್ಪ, ರಾಯವಾರ ರಾಮಕೃಷ್ಣ, ವಿಜಯ್‌ಶಂಕರ್, ರಾಮಸ್ವಾಮಿ, ಗಂಗಾಧರ, ಚಂದ್ರುನಾಯ್ಕ, ಗೋಪಾಲನಾಯ್ಕ, ಜಯರಾಮ, ಗಂಗಾನಾಯ್ಕ, ಸುರೇಶನಾಯ್ಕ, ವೆಂಕಟೇಶನಾಯ್ಕ, ವಸಂತನಾಯ್ಕ ಸೇರಿದಂತೆ ಹಲವು ಮುಖಂಡರು ಹಾಗೂ ತಾಂಡದ ನಿವಾಸಿಗಳು ಭಾಗವಹಿಸಿದ್ದರು.
ಲಂಬಾಣಿ ಸಮುದಾಯದ ದೀಪಾವಳಿ ಹಬ್ಬಕ್ಕೆ ಎಂಟು ದಿನಗಳ ಮುಂಚಿತವಾಗಿ ತಾಂಡದ ನಾಯಕ, ಕಾರಭಾರಿ, ಡಾವ್, ಸಾಣ್ ಹಾಗೂ ಪ್ರಮುಖರು ಸಭೆ ಸೇರಿ ಹಬ್ಬದ ಸಿದ್ಧತೆಗಳ ಕುರಿತು ಚರ್ಚಿಸುತ್ತಾರೆ. ಮೂರು ದಿನಗಳ ಆಚರಣೆಯಲ್ಲಿ ಕಾಳಿಮಾಸ್, ಮೇರಾ ಸಂಭ್ರಮ ಹಾಗೂ ಧಬುಕಾರ್ ಕಾರ್ಯಕ್ರಮಗಳು ನಡೆಯುತ್ತವೆ. ಅಮಾವಾಸ್ಯೆಯಂದು ಮಹಿಳೆಯರು ಹಣತೆ ಹಿಡಿದು ಮನೆಮನೆಗೆ ತೆರಳಿ ಹಿರಿಯರನ್ನು ಸ್ಮರಿಸುತ್ತಾರೆ. ಪ್ರಕೃತಿಗೆ ಪೂಜೆ ಸಲ್ಲಿಸುವುದು ಈ ಹಬ್ಬದ ಪ್ರಮುಖ ವಿಶೇಷತೆ.
— ತಾವರನಾಯ್ಕ, ಹಿರಿಯ ನಾಯಕ, ಮಾದೇನಹಳ್ಳಿ ತಾಂಡ
ಜಿಲ್ಲಾ ಪಂಚಾಯಿತಿ ಕ್ಷೇತ್ರದ ಆಕಾಂಕ್ಷಿಯಾಗಿರುವ ಎಂಎನ್‌ಜೆ ಮಂಜುನಾಥ್ ಅವರು ಕಳೆದ ಹತ್ತು ವರ್ಷಗಳಿಂದ ಕೊರಟಗೆರೆ ಕ್ಷೇತ್ರದಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಡವರು ಮತ್ತು ಸಾಮಾನ್ಯ ಜನರ ಪರವಾಗಿ ನಡೆಸುತ್ತಿರುವ ಸೇವಾ ಕಾರ್ಯಗಳು ಅವರಿಗೆ ಜನರ ಬೆಂಬಲ ತಂದುಕೊಡಲಿವೆ.
— ಕೃಷ್ಣಮೂರ್ತಿ, ಮುಖಂಡರು, ಮಾದೇನಹಳ್ಳಿ ತಾಂಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
