ತುಮಕೂರು: ರಾಜ್ಯ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ U-14, U–17 ಹಾಗೂ U–19 ವಿಭಾಗಗಳ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ತುಮಕೂರು ಜಿಲ್ಲೆಯ ಯುವ ಕ್ರೀಡಾಪಟುಗಳನ್ನು ಗೃಹ ಸಚಿವ (ಹಾಗೂ ಉಪ ಮುಖ್ಯಮಂತ್ರಿ) ಡಾ. ಜಿ. ಪರಮೇಶ್ವರ್ ಅವರು ಅಭಿನಂದಿಸಿದರು.
ಗೊಲ್ಲಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಕ್ರೀಡಾಪಟುಗಳನ್ನು ಭೇಟಿಯಾಗಿ ಸನ್ಮಾನಿಸಿದ ಅವರು, ಗೋವಾ ಹಾಗೂ ಇಂದೋರ್ ನಲ್ಲಿ ನಡೆಯಲಿರುವ 70ನೇ ರಾಷ್ಟ್ರಮಟ್ಟದ ರೈಫಲ್ ಶೂಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿರುವ ಚಿಂತನ್, ಸಮರ, ವನಿತಾ, ಲಾಸ್ಯ ಪ್ರಿಯ, ಜಿತೇಶ್ ಹಾಗೂ ಫನಾನ್ ಅವರಿಗೆ ಶುಭ ಹಾರೈಸಿದರು. ಈ ಕ್ರೀಡಾಪಟುಗಳ ಸಾಧನೆ ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.




ಇದೇ ಸಂದರ್ಭದಲ್ಲಿ, 69ನೇ ರಾಷ್ಟ್ರಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು, ತೆಲಂಗಾಣದಲ್ಲಿ ನಡೆಯಲಿರುವ 8ನೇ ‘ಖೇಲೋ ಇಂಡಿಯಾ ಯೂತ್ ಗೇಮ್ಸ್’ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಅದಿತಿ ಜಿ. ಅವರನ್ನು ವಿಶೇಷವಾಗಿ ಅಭಿನಂದಿಸಿ, ಮುಂದಿನ ಪಂದ್ಯಾವಳಿಗಳಿಗೆ ಶುಭ ಕೋರಿದರು.
ಈ ಎಲ್ಲಾ ಕ್ರೀಡಾಪಟುಗಳು ತುಮಕೂರಿನ ವಿವೇಕಾನಂದ ರೈಫಲ್ ಶೂಟಿಂಗ್ ಸಂಸ್ಥೆಯಲ್ಲಿ ತರಬೇತಿ ಪಡೆದು ಈ ಮಹತ್ವದ ಸಾಧನೆ ಮಾಡಿದ್ದಾರೆ. “ಕ್ರೀಡಾಪಟುಗಳ ನಿರಂತರ ಪರಿಶ್ರಮ, ಶಿಸ್ತು, ಸಮರ್ಪಣಾ ಮನೋಭಾವ ಹಾಗೂ ತರಬೇತುದಾರರ ಸೂಕ್ತ ಮಾರ್ಗದರ್ಶನವೇ ಈ ಯಶಸ್ಸಿನ ಹಿಂದಿನ ಪ್ರಮುಖ ಶಕ್ತಿಗಳಾಗಿವೆ,” ಎಂದು ಪರಮೇಶ್ವರ್ ಅವರು ಶ್ಲಾಘಿಸಿದರು.
“ಯುವ ಕ್ರೀಡಾಪಟುಗಳ ಈ ಸಾಧನೆ ತುಮಕೂರು ಜಿಲ್ಲೆಯ ಕ್ರೀಡಾ ಕ್ಷೇತ್ರ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಮುಂಬರುವ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರಬೇಕು. ಕ್ರೀಡಾಪಟುಗಳ ಸಾಧನೆಗೆ ಅಗತ್ಯ ಪ್ರೋತ್ಸಾಹ ಮತ್ತು ಬೆಂಬಲ ಸದಾ ಇರಲಿದೆ,” ಎಂದು ಅವರು ಭರವಸೆ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
