ಕೊರಟಗೆರೆ: ಪಠ್ಯಪುಸ್ತಕಗಳ ಜ್ಞಾನದ ಜೊತೆಗೆ ಗ್ರಾಮೀಣ ಬದುಕು, ಕೃಷಿ ಪದ್ಧತಿ, ರೈತರ ಶ್ರಮ, ಪಶುಸಂಗೋಪನೆ ಹಾಗೂ ಪರಿಸರ ಸಂರಕ್ಷಣೆಯ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪರಿಚಯಿಸುವ ಉದ್ದೇಶದಿಂದ ಬೆಂಗಳೂರಿನ ವಿದ್ಯಾ ಪೂರ್ಣಪ್ರಜ್ಞಾ ಪದವಿ ಪೂರ್ವ ಕಾಲೇಜು ಹಮ್ಮಿಕೊಂಡಿದ್ದ ಎರಡು ದಿನಗಳ ‘ಗ್ರಾಮ ಸಂಪರ್ಕ’ ಕಾರ್ಯಕ್ರಮ ಗಮನ ಸೆಳೆಯಿತು.
ನವೆಂಬರ್ 12 ಮತ್ತು 13ರಂದು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿ ಹಾಗೂ ತುಮಕೂರು ಗ್ರಾಮಾಂತರ ತಾಲೂಕಿನ ಕೋರಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗ್ರಾಮೀಣ ಬದುಕಿನ ವಿವಿಧ ಆಯಾಮಗಳನ್ನು ನೇರವಾಗಿ ವೀಕ್ಷಿಸಿ, ರೈತರು, ಕೃಷಿಕರು ಹಾಗೂ ಸ್ಥಳೀಯ ಕಲಾವಿದರಿಂದ ಮಾಹಿತಿ ಪಡೆದುಕೊಂಡರು.
ಕಾರ್ಯಕ್ರಮದ ಮೊದಲ ದಿನ ಕೋರಾ ಹೋಬಳಿಯ ಮೆಳೆಹಳ್ಳಿ, ಬ್ರಹ್ಮಸಮುದ್ರ ಹಾಗೂ ಕೋರಾ ಗ್ರಾಮಗಳಿಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಕೃಷಿ ಚಟುವಟಿಕೆಗಳು, ಪಶುಪಾಲನೆ, ಸಮಗ್ರ ಕೃಷಿ ಮತ್ತು ಸಹಜ ಕೃಷಿ ಪದ್ಧತಿಗಳನ್ನು ವೀಕ್ಷಿಸಿದರು. ರೈತರೊಂದಿಗೆ ಸಂವಾದ ನಡೆಸಿ ಕೃಷಿ ನಿರ್ವಹಣೆ, ಬೆಳೆ ಪದ್ಧತಿ ಹಾಗೂ ಕೃಷಿಯಲ್ಲಿನ ಅನುಭವಗಳ ಕುರಿತು ಮಾಹಿತಿ ಪಡೆದರು.
ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ನೇಗಲಾಲ ಗ್ರಾಮದ ಪ್ರಗತಿಪರ ಕೃಷಿಕ ಕಾಮರಾಜು ಅವರ ತೋಟಕ್ಕೆ ಭೇಟಿ ನೀಡಿ ಅಡಿಕೆ, ಏಲಕ್ಕಿ ಹಾಗೂ ಕಾಳು ಮೆಣಸು ಬೆಳೆಗಳ ನಿರ್ವಹಣೆ ಮತ್ತು ತೋಟಗಾರಿಕಾ ಕೃಷಿ ಪದ್ಧತಿಗಳನ್ನು ವೀಕ್ಷಿಸಿದರು. ಹೊಲತಾಳು ಗ್ರಾಮದ ಮಾದರಿ ರೈತ ಹಾಗೂ ಮಹಿಳಾ ಹೈನುಗಾರ್ತಿ ರಾಜೇಶ್ವರಿ ಅವರ ಡೈರಿ ಫಾರಂಗೆ ಭೇಟಿ ನೀಡಿ ಹೈನುಗಾರಿಕೆ, ಹಾಲಿನ ಉತ್ಪಾದನೆ ಮತ್ತು ಪಶು ಸಂಗೋಪನೆಯ ಕುರಿತು ತಿಳಿದುಕೊಂಡರು.
ಪರಿಸರ ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ಕೋರಾ ಹೋಬಳಿಯ ಅಜ್ಜಗೊಂಡನಹಳ್ಳಿಯ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ಕಸ ವಿಂಗಡಣೆ, ಸಂಗ್ರಹಣೆ ಹಾಗೂ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಯ ಕುರಿತು ಮಾಹಿತಿ ಪಡೆದರು. ಕೋರಾದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೂ ಭೇಟಿ ನೀಡಿ ಅಲ್ಲಿನ ಕಾರ್ಯ ಚಟುವಟಿಕೆಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ತಿಳಿದುಕೊಂಡರು.
ಗ್ರಾಮೀಣ ಕಲೆ ಮತ್ತು ಸಂಸ್ಕೃತಿಯ ಪರಿಚಯವೂ ಕಾರ್ಯಕ್ರಮದ ಪ್ರಮುಖ ಭಾಗವಾಗಿತ್ತು. ಮೆಳೆಹಳ್ಳಿಯ ಡಮರುಗ ರಂಗ ಸಂಪನ್ಮೂಲ ಕೇಂದ್ರದಲ್ಲಿ ಆಯೋಜಿಸಿದ್ದ ‘ಲವಕುಶ’ ಬಯಲಾಟವನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ನಾಟಕದ ಮೂಲಕ ವ್ಯಕ್ತವಾದ ಪರಿಸರ ಪ್ರೇಮ, ಪ್ರಕೃತಿ ಸಂರಕ್ಷಣೆ ಹಾಗೂ ಮಾನವೀಯ ಮೌಲ್ಯಗಳ ಸಂದೇಶ ವಿದ್ಯಾರ್ಥಿಗಳ ಗಮನ ಸೆಳೆಯಿತು.
ರಂಗಭೂಮಿ ಕಲಾವಿದರು ಹಾಗೂ ನಿರ್ದೇಶಕರಾದ ಮೆಳೆಹಳ್ಳಿ ದೇವರಾಜು ಮತ್ತು ಡಮರುಗ ಉಮೇಶ್ ಅವರು ರಂಗಭೂಮಿಯ ಮಹತ್ವ, ಜಾನಪದ ಕಲಾ ಪ್ರಕಾರಗಳು ಹಾಗೂ ರಂಗ ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಕರ್ನಾಟಕ ಬ್ಯಾಂಕ್ ವತಿಯಿಂದ ಗ್ರಾಮೀಣ ಬ್ಯಾಂಕಿಂಗ್ ವ್ಯವಸ್ಥೆ, ಬ್ಯಾಂಕಿಂಗ್ ಸೇವೆಗಳು ಹಾಗೂ ಆರ್ಥಿಕ ವ್ಯವಹಾರಗಳ ಬಗ್ಗೆಯೂ ಅರಿವು ಮೂಡಿಸಲಾಯಿತು.
ಇದರ ಜತೆಗೆ ವಿದ್ಯಾರ್ಥಿಗಳು ಸಿದ್ದರಬೆಟ್ಟದ ಶ್ರೀ ಸಿದ್ದೇಶ್ವರ ಸ್ವಾಮಿ ಹಾಗೂ ಕುರಂಕೋಟೆಯ ದೊಡ್ಡಕಾಯಪ್ಪನ ದರ್ಶನ ಪಡೆದು ಸ್ಥಳೀಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಪರಿಚಯ ಮಾಡಿಕೊಂಡರು.
ಸ್ಥಳೀಯರ ಸಹಕಾರಕ್ಕೆ ಮೆಚ್ಚುಗೆ
ಎರಡು ದಿನಗಳ ಗ್ರಾಮ ಸಂಪರ್ಕ ಕಾರ್ಯಕ್ರಮ ಯಶಸ್ವಿಯಾಗಲು ಸ್ಥಳೀಯ ರೈತರು, ಕಲಾವಿದರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರ ಸಹಕಾರ ಮಹತ್ವದ ಪಾತ್ರ ವಹಿಸಿತು. ಡಮರುಗ ರಂಗ ಸಂಪನ್ಮೂಲ ಕೇಂದ್ರದ ಕಲಾವಿದ ಡಮರುಗ ಉಮೇಶ್, ನೇಗಲಾಲದ ಮಹೇಶ್ ಹಾಗೂ ಪತ್ರಕರ್ತರಾದ ಮಂಜುಸ್ವಾಮಿ ಎಂ ಎನ್ ಅವರು ಕಾರ್ಯಕ್ರಮಕ್ಕೆ ಅಗತ್ಯ ಸಹಕಾರ ನೀಡಿದರು.
ವಿದ್ಯಾರ್ಥಿಗಳಿಗೆ ಸಿದ್ದರಬೆಟ್ಟದಲ್ಲಿ ರಾತ್ರಿ ವಾಸ್ತವ್ಯ, ಊಟ ಹಾಗೂ ಬೆಳಗಿನ ಉಪಾಹಾರದ ವ್ಯವಸ್ಥೆ ಕಲ್ಪಿಸಿದ ಪರಮಪೂಜ್ಯ ಶ್ರೀಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳ ಸಹಕಾರವನ್ನು ಕಾಲೇಜಿನ ವತಿಯಿಂದ ಕೃತಜ್ಞತೆಯಿಂದ ಸ್ಮರಿಸಲಾಯಿತು.
ಗ್ರಾಮೀಣ ಪ್ರದೇಶದ ಕೃಷಿ, ರೈತರ ಬದುಕು, ಪರಿಸರ, ಜಾನಪದ ಕಲೆ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ನೇರವಾಗಿ ಪರಿಚಯಿಸುವ ಮೂಲಕ ‘ಗ್ರಾಮ ಸಂಪರ್ಕ’ ಕಾರ್ಯಕ್ರಮವು ಪಠ್ಯೇತರ ಕಲಿಕೆಗೆ ಉತ್ತಮ ವೇದಿಕೆಯಾಯಿತು. ಇಂತಹ ಕಾರ್ಯಕ್ರಮಗಳು ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲೂ ನಡೆಯುವ ಮೂಲಕ ವಿದ್ಯಾರ್ಥಿಗಳಲ್ಲಿ ಕೃಷಿ, ರೈತರು, ಮಣ್ಣು, ಪರಿಸರ ಹಾಗೂ ಗ್ರಾಮೀಣ ಸಂಸ್ಕೃತಿಯ ಬಗ್ಗೆ ಗೌರವ ಮತ್ತು ಜಾಗೃತಿ ಮೂಡಬೇಕು ಎಂಬ ಆಶಯ ವ್ಯಕ್ತವಾಯಿತು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
