ತುಮಕೂರು: ನಗರದ ಶ್ರೀ ಶಿವಕುಮಾರ ಮಹಾಸ್ವಾಮೀಜಿ ವೃತ್ತದಲ್ಲಿ ತುಮಕೂರು ಮಹಾನಗರ ಪಾಲಿಕೆ ಹಾಗೂ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಬೃಹತ್ ಎಲ್ಇಡಿ (LED) ಪರದೆಯನ್ನು ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಲೋಕಾರ್ಪಣೆಗೊಳಿಸಿದರು.
ಮಕ್ಕಳ ದಿನಾಚರಣೆಯ (ನವೆಂಬರ್ 14) ವಿಶೇಷ ಸಂದರ್ಭದಲ್ಲಿ ನಗರದ ಮಕ್ಕಳಿಗೆ ಹಾಗೂ ನಾಗರಿಕರಿಗೆ ಈ ವಿನೂತನ ಡಿಜಿಟಲ್ ಡಿಸ್ಪ್ಲೇ ವ್ಯವಸ್ಥೆಯನ್ನು ಸಮರ್ಪಿಸಲಾಯಿತು.
ಉದ್ಘಾಟನೆಯ ಬಳಿಕ ಮಾತನಾಡಿದ ಡಿಸಿಎಂ ಪರಮೇಶ್ವರ್, “ದೇಶದ ಯಾವುದೇ ಜಿಲ್ಲಾ ಕೇಂದ್ರದಲ್ಲಿ ಇಂತಹ ಬೃಹತ್ ಡಿಜಿಟಲ್ ಡಿಸ್ಪ್ಲೇ ವ್ಯವಸ್ಥೆ ಇಲ್ಲ. ವಿದೇಶಗಳ ಪ್ರಮುಖ ನಗರಗಳ ಮಾದರಿಯಲ್ಲಿ ತುಮಕೂರಿನಲ್ಲೂ ಒಂದು ಆಕರ್ಷಣೆಯ ಕೇಂದ್ರ ಇರಬೇಕೆಂಬ ಬಹುದಿನಗಳ ಕನಸು ಇಂದು ನನಸಾಗಿದೆ. ಕನ್ನಡ ರಾಜ್ಯೋತ್ಸವದಂದೇ ಇದನ್ನು ಉದ್ಘಾಟಿಸಲು ಉದ್ದೇಶಿಸಲಾಗಿತ್ತು, ಆದರೆ ದೆಹಲಿಯಿಂದ ತಾಂತ್ರಿಕ ಪರಿಕರಗಳು ಬರಲು ವಿಳಂಬವಾದ ಕಾರಣ ಮಕ್ಕಳ ದಿನಾಚರಣೆಯಂದು ಲೋಕಾರ್ಪಣೆ ಮಾಡಲಾಗಿದೆ. ಇದು ತುಮಕೂರನ್ನು ಮತ್ತಷ್ಟು ಸ್ಮಾರ್ಟ್ ಸಿಟಿಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ” ಎಂದರು.
ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಹಗಲಿರುಳು ಶ್ರಮಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಮಹಾನಗರ ಪಾಲಿಕೆ ಆಯುಕ್ತೆ ಶುಭ ಅವರ ತಂಡವನ್ನು ಡಿಸಿಎಂ ಮುಕ್ತಕಂಠದಿಂದ ಶ್ಲಾಘಿಸಿದರು. “ಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳು ಬೆಳಗಿನ ಜಾವ 3-4 ಗಂಟೆಯವರೆಗೂ ಸ್ಥಳದಲ್ಲೇ ಇದ್ದು ಕಾಮಗಾರಿ ನಿರ್ವಹಿಸಿ, ನಿರಂತರವಾಗಿ ಫೋಟೋಗಳನ್ನು ಕಳುಹಿಸುತ್ತಿದ್ದರು” ಎಂದು ಸ್ಮರಿಸಿದರು.
“ಸಿದ್ಧಗಂಗಾ ಮಠವು ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧ ಹೊಂದಿರುವ ಸಂಸ್ಥೆ. ನಾನು 10-12 ವರ್ಷದ ಬಾಲಕನಾಗಿದ್ದಾಗ ನಡೆದಾಡುವ ದೇವರು ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳು ನಮ್ಮ ಊರಿಗೆ ಬಂದು ನನ್ನನ್ನು ಆಶೀರ್ವದಿಸಿದ್ದರು. ನಮ್ಮ ಅಣ್ಣ ಡಾ. ಶಿವಪ್ರಸಾದ್ ಅವರು ಸಿದ್ಧಗಂಗಾ ಹೈಸ್ಕೂಲ್ನಲ್ಲೇ ವ್ಯಾಸಂಗ ಮಾಡಿದವರು. ಶ್ರೀಮಠದ ಬಗ್ಗೆ ನಮ್ಮ ಕುಟುಂಬಕ್ಕಿರುವ ಭಕ್ತಿ ಮತ್ತು ಗೌರವದ ಕುರಿತು ಯಾವುದೇ ತಪ್ಪು ಕಲ್ಪನೆಗಳಿಗೆ ಅವಕಾಶವಿಲ್ಲ” ಎಂದು ಸ್ಪಷ್ಟಪಡಿಸಿದರು.





ವಸಂತನರಸಾಪುರದಲ್ಲಿ ಸುಮಾರು 20 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಏಷ್ಯಾದಲ್ಲೇ ಅತಿದೊಡ್ಡ ಕೈಗಾರಿಕಾ ಹಬ್ ನಿರ್ಮಿಸಲಾಗುತ್ತಿದೆ. ಇತ್ತೀಚೆಗೆ ಗ್ರೀನ್ ಹೈಡ್ರೋಜನ್ ಘಟಕ ಹಾಗೂ ಡೇಟಾ ಸೆಂಟರ್ ಸ್ಥಾಪನೆಗೆ ₹80 ಸಾವಿರ ಕೋಟಿ ಹೂಡಿಕೆ ಮಾಡುವ ಪ್ರಸ್ತಾವನೆ ಬಂದಿದ್ದು, ಇದರಿಂದ ಸುಮಾರು 30 ಸಾವಿರ ಜನರಿಗೆ ಉದ್ಯೋಗ ದೊರೆಯಲಿದೆ.
ಬೆಂಗಳೂರಿನ ಭಾಗವಾಗಿ ಬೆಳವಣಿಗೆ: ತುಮಕೂರು ಇನ್ನು ಮುಂದೆ ಸಣ್ಣ ನಗರವಲ್ಲ. ರಸ್ತೆ ಸಂಪರ್ಕ ಸುಧಾರಣೆಯಿಂದಾಗಿ ಬೆಂಗಳೂರಿನ ಭಾಗವಾಗಿ ವೇಗವಾಗಿ ಬೆಳೆಯುತ್ತಿದೆ.
ದಸರಾ ಮತ್ತು ಪೊಲೀಸ್ ಸುಧಾರಣೆ: ಕಳೆದ ಮೂರು ವರ್ಷಗಳಿಂದ ಅದ್ಧೂರಿಯಾಗಿ ನಡೆಯುತ್ತಿರುವ ತುಮಕೂರು ದಸರಾವನ್ನು ಈ ಬಾರಿ 20 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಅಂತೆಯೇ, ಗೃಹ ಸಚಿವನಾಗಿ ಪೊಲೀಸರ ಅನುಕೂಲಕ್ಕಾಗಿ ಹಳೆಯ ಭಾರವಾದ ಕ್ಯಾಪ್ ಬದಲಿಸಿ ಆಧುನಿಕ ಕ್ಯಾಪ್ ಪರಿಚಯಿಸಿರುವುದನ್ನು ಅವರು ಉಲ್ಲೇಖಿಸಿದರು.
ಕಾರ್ಯಕ್ರಮದಲ್ಲಿ ತುಮಕೂರು ನಗರ ಶಾಸಕ ಜಿ.ಬಿ. ಜ್ಯೋತಿಗಣೇಶ್, ಪಾವಗಡ ಶಾಸಕ ಹೆಚ್.ವಿ. ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್, ಪಾಲಿಕೆ ಆಯುಕ್ತೆ ಶುಭ, ಟೂಡಾ (TUDA) ಆಯುಕ್ತ ಉಮೇಶ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ್ಗೌಡ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
