ತಿಪಟೂರು: ಮದುವೆ ಸಂಭ್ರಮ ಮುಗಿಸಿಕೊಂಡು ಮನೆಗೆ ವಾಪಸ್ಸಾಗುತ್ತಿದ್ದ ಇಬ್ಬರು ಯುವಕರು ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿರುವ ಹೃದಯವಿದ್ರಾವಕ ಘಟನೆ ತಿಪಟೂರು–ಅರಸೀಕೆರೆ ರಾಷ್ಟ್ರೀಯ ಹೆದ್ದಾರಿಯ ಮಾದಿಹಳ್ಳಿ ಬಳಿಯ ಬಾಲಾಜಿ ಚೌಲ್ಟ್ರಿ ಮುಂಭಾಗ ನಡೆದಿದೆ.
ಬೈರನಾಯಕನಹಳ್ಳಿ ಗ್ರಾಮದ ಆನಂದ್ ಕುಮಾರ್ ಅವರ ಪುತ್ರ ಹಾಗೂ ಗೆದ್ದಲೇಹಳ್ಳಿ ಗ್ರಾಮದ ದಿನೇಶ್ ಅವರ ಚಿಕ್ಕಪ್ಪನ ಮೊಮ್ಮಗನಾದ ಸಂಜು (23) ಮತ್ತು ಬೈರನಾಯಕನಹಳ್ಳಿ ಗ್ರಾಮದ ಉಮೇಶ್ ಅವರ ಪುತ್ರ ಹರ್ಷ (23) ಮೃತ ದುರ್ದೈವಿಗಳು. ಮೃತ ಹರ್ಷ ಎಂ.ಬಿ.ಎ. ಪದವಿ ಪೂರೈಸಿ ‘ಏಷ್ಯನ್’ ಕಂಪನಿಯ ಅಕೌಂಟ್ಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಬಾಲಾಜಿ ಚೌಲ್ಟ್ರಿಯಲ್ಲಿ ನಡೆದ ತಮ್ಮ ಸಂಬಂಧಿಕರ (ಆನಂದ್ ಕುಮಾರ್ ಹಾಗೂ ಉಮೇಶ್ ಅವರ ಚಿಕ್ಕಪ್ಪನ ಮಗನ) ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಜು ಮತ್ತು ಹರ್ಷ, ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿದ್ದರು. ಈ ವೇಳೆ ಚೌಲ್ಟ್ರಿ ಮುಂಭಾಗದ ಯು—ಟರ್ನ್ ನಲ್ಲಿ ವಾಹನ ತಿರುಗಿಸುತ್ತಿದ್ದಾಗ ಅರಸೀಕೆರೆ ಕಡೆಯಿಂದ ವೇಗವಾಗಿ ಬಂದ ಕೆಎಸ್ ಆರ್ಟಿಸಿ (KSRTC) ಬಸ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಗಂಭೀರವಾಗಿ ಗಾಯಗೊಂಡ ಇಬ್ಬರೂ ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಉನ್ನತ ವಿದ್ಯಾಭ್ಯಾಸ ಪಡೆದು, ಉಜ್ವಲ ಭವಿಷ್ಯದ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದ ಇಬ್ಬರು ಯುವಕರ ಅಕಾಲಿಕ ನಿಧನದಿಂದ ಕುಟುಂಬಸ್ಥರು, ಬಂಧುಗಳು ಹಾಗೂ ಗ್ರಾಮಸ್ಥರಲ್ಲಿ ತೀವ್ರ ಶೋಕ ಮಡುಗಟ್ಟಿದೆ.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
