ಬೆಂಗಳೂರು: ಭಾರಿ ದರ ಏರಿಕೆಯಿಂದ ಕಂಗೆಟ್ಟಿದ್ದ ರಾಜ್ಯದ ಜನತೆಗೆ ಕೊಂಚ ನಿರಾಳತೆ ಸಿಕ್ಕಿದ್ದು, ನವೆಂಬರ್ 29ರಿಂದ ಅನ್ವಯವಾಗುವಂತೆ ನಂದಿನಿ ಬ್ರ್ಯಾಂಡ್ ಮೊಸರಿನ ದರದಲ್ಲಿ ಇಳಿಕೆ ಮಾಡಲಾಗಿದೆ. ಪರಿಷ್ಕೃತ ದರದಂತೆ 1 ಲೀಟರ್ ಮೊಸರಿಗೆ ₹2 ಹಾಗೂ ಅರ್ಧ ಲೀಟರ್ ಮೊಸರಿಗೆ ₹1 ಕಡಿತಗೊಳಿಸಲಾಗಿದೆ.
ಪರಿಷ್ಕೃತ ದರ ವಿವರ:
• 1 ಲೀಟರ್ ಮೊಸರು: ₹68 ರಿಂದ ₹66 ಕ್ಕೆ ಇಳಿಕೆ (₹2 ಕಡಿತ)
• ಅರ್ಧ ಲೀಟರ್ ಮೊಸರು: ₹34 ರಿಂದ ₹33 ಕ್ಕೆ ಇಳಿಕೆ (₹1 ಕಡಿತ)
ಕಳೆದ ನವೆಂಬರ್ 1, 2026ರಂದು ನಂದಿನಿ ಮೊಸರಿನ ದರವನ್ನು ಲೀಟರ್ಗೆ ₹14 ಮತ್ತು ಅರ್ಧ ಲೀಟರ್ಗೆ ₹6 ಹೆಚ್ಚಿಸಲಾಗಿತ್ತು. ನಿತ್ಯ ಬಳಕೆಯ ಮೊಸರಿನ ದರವನ್ನು ಏಕಾಏಕಿ ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಮಾಡಿದ್ದಕ್ಕೆ ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು.
ಇದರ ಬೆನ್ನಲ್ಲೇ ಎಚ್ಚೆತ್ತ ಸಿಎಂ ಡಿ.ಕೆ. ಶಿವಕುಮಾರ್ ಅವರು, ಏರಿಕೆ ಮಾಡಲಾಗಿದ್ದ ಮೊಸರಿನ ಬೆಲೆಯಲ್ಲಿ ₹2 ಇಳಿಕೆ ಮಾಡಿ (ಲೀಟರ್ಗೆ ₹14ರ ಬದಲು ₹12 ಮಾತ್ರ ಹೆಚ್ಚಳ ಮಾಡುವಂತೆ) ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಭರವಸೆ ನೀಡಿ ತಿಂಗಳು ಕಳೆಯುತ್ತಾ ಬಂದರೂ ದರ ಕಡಿತವಾಗದ ಬಗ್ಗೆ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದರು. ಇದೀಗ ಸಿಎಂ ಸೂಚನೆಯಂತೆ ಮೊಸರಿನ ದರದಲ್ಲಿ ಇಳಿಕೆಯಾಗಿದ್ದು, ಇಂದಿನಿಂದಲೇ ಪರಿಷ್ಕೃತ ದರದಲ್ಲಿ ನಂದಿನಿ ಮೊಸರು ಗ್ರಾಹಕರ ಕೈಸೇರಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
