ಬಹಳ ಹಿಂದೆ ಚಂದ್ರಪ್ರಭ ಎಂಬ ಬಡವನಿದ್ದ, ಅವನು ಯಾವಾಗಲೂ ಸುಖಾಸುಮ್ಮನೆ ಇನ್ನೊಬ್ಬರಿಗೆ ಸಹಾಯ ಮಾಡುವ ಗುಣವಿದ್ದಿತು. ಯಾರು ಕರೆಯದಿದ್ದರೂ ತಾನೇ ಹೋಗಿ ತನ್ನ ಕೈಲಾದ ಸಹಾಯ ಮಾಡುತ್ತಿದ್ದ. ಅವನನ್ನು ಕೆಲಸದವರು ನೀನು ಯಾರಿಗೆ ಎಷ್ಟೇ ಸಹಾಯ ಮಾಡಿದರೂ, ನಿನ್ನನ್ನು ಯಾರೂ ಜ್ಞಾಪಿಸಿಕೊಳ್ಳುವುದಿಲ್ಲ. ಸುಮ್ಮನೆ ಏಕೆ ಎಲ್ಲರ ವಿಷಯದಲ್ಲಿ ಮೂಗು ತೂರಿಸುತ್ತೀಯ ನೀನು ಬಡವ ದೇವರು ಇಟ್ಟ ಹಾಗೆ ಇರಬೇಕು ಎಂದು ಹೇಳುತ್ತಿದ್ದರು.
ಆಗ ಅಂತಹವರಿಗೆ ಅದು ಅವರ ಗುಣ ಇದು ನನ್ನ ಗುಣ ನಾನು ಜನ ಮೆಚ್ಚಲೆಂದು ಸಹಾಯ ಮಾಡುತ್ತಿಲ್ಲ ಎಂದು ಹೇಳುತ್ತಿದ್ದ. ಹೀಗೆಯೇ ಒಮ್ಮೆ ಅದೇ ಊರಿನ ಒಬ್ಬರು ಚಂದ್ರಪ್ರಭನಲ್ಲಿಗೆ ಬಂದು ಬಾವಿಗೆ ಹಗ್ಗ ಬಿದ್ದು ಹೋಗಿದೆ ಬಂದು ಸಹಾಯ ಮಾಡು ಸಂಭಾವನೆ ನೀಡುತ್ತೇವೆ ಎಂದಾಗ ಆಗಲೆಂದು ಬಂದು ಪಾತಾಳಗರಡಿಯ ಸಹಾಯದಿಂದ ಹಗ್ಗ ತೆಗೆದು ಕೊಟ್ಟು ಸಂಭಾವನೆ ಕೇಳಿದಾಗ ಅವರು ನೀನು ಎಷ್ಟೋ ಜನರಿಗೆ ಸಹಾಯಗಳನ್ನು ಉಚಿತವಾಗಿ ಮಾಡಿದ್ದೀಯ ಇದನ್ನೂ ಹಾಗೆ ಅಂದುಕೋ ಎಂದಾಗ ಸ್ವಲ್ಪ ಬೇಸರಗೊಂಡ ಚಂದ್ರಪ್ರಭ ಮರು ಮಾತನಾಡದೆ ಹಿಂತಿರುಗಿದ. ಮಾರನೆಯ ದಿನ ಬೀದಿಯಲ್ಲಿ ಏನೋ ಚಿಂತಿಸುತ್ತಾ ನಡೆದು ಹೋಗುವಾಗ ಒಬ್ಬ ವ್ಯಾಪಾರಿ ಬಾಳೇ ಹಣ್ಣುಗಳ ಗೊನೆ ತುಂಬಿದ್ದ ತಳ್ಳುವ ಗಾಡಿಯನ್ನು ರಸ್ತೆ ಮೇಲಿನಿಂದ ಇಳಿಜಾರಿದ್ದ ಕಾರಣ ಬಹಳ ಕಷ್ಟ ಪಟ್ಟು ಮುಂದೆ ತಳ್ಳುತ್ತಿದ್ದ, ಅದನ್ನು ನೋಡಿದ ಚಂದ್ರಪಭ ಅವನಿಗೆ ಸಹಾಯ ಮಾಡಲು ತಾನೂ ತನ್ನ ಕೈಗಳಿಂದ ತಳ್ಳಲು ಮುಂದಾದ ಇದನ್ನು ನೋಡಿದ ವ್ಯಾಪಾರಿ ಏ ನಿನ್ನನ್ನು ಯಾರು ಕರೆದಿದ್ದು, ಇದು ನನ್ನ ಕೆಲಸ ನಾನು ಮಾಡಿಕೊಳ್ಳುತ್ತೇನೆ, ನಿನ್ನ ಅವಶ್ಯಕತೆ ಇಲ್ಲ ಎಂದು ಅವನನ್ನು ತಳ್ಳಿದ. ಅರೆ ಇದು ಏಕೆ ಹೀಗೆ ಆಗುತ್ತಿದೆ ಅಂದುಕೊಳ್ಳುತ್ತಾ ಮುಂದೆ ನಡೆದ.
ಮುಂದೆ ದಾವಖಾನೆಯಲ್ಲಿ ತನ್ನ ಸ್ವೇಹಿತ ಚಿಕಿತ್ಸೆಗೆಂದು ಬಂದಿದ್ದ ಅವನನ್ನು ನೋಡುತ್ತಲೇ ಚಂದ್ರಪ್ರಭ ಹತ್ತಿರಹೋಗಿ ವಿಚಾರಿಸಿ ಹಿಂತಿರುಗುವಾಗ ಸ್ನೇಹಿತನ ಕೈಗೆ ಸ್ವಲ್ಪ ಹಣಕೊಟ್ಟು ಹಿಂತಿರುಗಿದ. ಕೆಲವು ದಿನಗಳ ಬಳಿಕ ಚಂದ್ರಪ್ರಭ ಹುಷಾರು ತಪ್ಪಿದ ಮತ್ತು ಅವನ ಬಳಿ ಚಿಕಿತ್ಸೆ ಪಡೆಯಲು ಹಣವಿರಲಿಲ್ಲ, ನಂತರ ತನ್ನ ಸ್ನೇಹಿತನ ಮನೆಗೆ ಹೋಗಿ ತನಗೆ ಹುಷಾರು ತಪ್ಪಿದೆ ಎಂದು ಚಿಕಿತ್ಸೆಗೆ ಸ್ವಲ್ಪ ಹಣಬೇಕೆಂದೂ ಕೇಳಿದಾಗ, ಸ್ನೇಹಿತ ನನಗೆ ಗೊತ್ತಿತ್ತು ನೀನು ಬಂದೇ ಬರುತ್ತೀಯ ಎಂದು ನಿನ್ನನ್ನು ಆವತ್ತು ದಾವಖಾನೆಗೆ ಕರೆದಿದ್ದು ಯಾರು, ನಾನೇನಾದರೂ ನಿನ್ನಲ್ಲಿ ಚಿಕಿತ್ಸೆಗೆ ಹಣ ಬೇಕೆಂದು ಕೇಳಿದ್ದೇನಾ, ನೀನಾಗೆ ಕೊಟ್ಟೆ ನಾನು ತೆಗೆದುಕೊಂಡೆ ಅಷ್ಟೇ, ಹಣನೂ ಇಲ್ಲ ಏನೂ ಇಲ್ಲ ಹೊರಟುಹೋಗು ಎಂದು ಬೈದು ಕಳುಹಿಸಿದ.
ಕೆಲದಿನಗಳ ಬಳಿಕ ಬೀದಿಯಲ್ಲಿ ನಡೆದು ಬರುವಾಗ ಅದೇ ಬಾಳೆಹಣ್ಣಿನ ವ್ಯಾಪಾರಿ ಇಳಿಜಾರಿನ ಕಡೆಯಿಂದ ಗಾಡಿ ಇಳಿಸುವಾಗ ತೂಕಕ್ಕೆ ಗಾಡಿ ರಭಸದಿಂದ ಅವನ್ನನ್ನು ಎಳೆದುಕೊಂಡು ಹೋಗುತ್ತಿತ್ತು, ಚಂದ್ರಪ್ರಭನನ್ನು ನೋಡಿದ ವ್ಯಾಪಾರಿ ಅಯ್ಯೋ ಸಹಾಯಮಾಡಿ ಅಂದು ನಾನು ನಿಮ್ಮನ್ನು ಬೈಯಬಾರದಿತ್ತು ಎಂದಾಗ, ಚಂದ್ರಪ್ರಭ ಇದು ನನ್ನ ಕೆಲಸವಲ್ಲ, ಇದು ನಿಮ್ಮ ಕೆಲಸ ನಿಮ್ಮ ಕೆಲಸ ನೀವೇ ಮಾಡಿಕೊಳ್ಳಿ ಎಂದು ಸೀದಾ ನಡೆದ, ಗಾಡಿ ಬಿದ್ದು ಹೋಗಿ ಹಣ್ಣೆಲ್ಲಾ ನೆಲದಪಾಲಾಯಿತು, ವ್ಯಾಪಾರಿಗೂ ಸ್ವಲ್ಪ ಏಟಾಯಿತು. ಮುಂದೆ ಅದೇ ಬಾವಿಯಲ್ಲಿ ರಾಟೆಗೆ ಹಗ್ಗ ಹಾಕಲಾಗಿತ್ತು, ಅದನ್ನು ತೆಗೆದ ಚಂದ್ರಪ್ರಭ ಬಾವಿಯೊಳಗೆ ಎಸದ. ಅದನ್ನು ನೋಡಿದ ಮಾಲಿಕ ಏಕೆ ಹಗ್ಗವನ್ನು ಬಾವಿಯೊಳಗೆ ಎಸೆದೆ ಅಂದಾಗ ಅಂದು ನನಗೆ ಸಂಭಾವನೆ ಕೊಡಲಿಲ್ಲ ಅಲ್ಲವೇ ಇಂದು ಬೇರೆಯವರಿಗೆ ಸಂಭಾವನೆ ಕೊಟ್ಟು ನಿಮ್ಮ ಹಗ್ಗ ತೆಗೆಸಿಕೊಳ್ಳಿ ಎಂದು ಅಲ್ಲಿಂದ ಸೀದಾ ಮನೆಗೆ ಬಂದ. ಮನೆಗೆಬರುವಷ್ಟರಲ್ಲಿ ಅವನ ಸ್ನೇಹಿತ ಮನೆಯ ಬಾಗಿಲ್ಲಿ ಕುಳಿತು ಚಂದ್ರಪ್ರಭನನ್ನು ನೋಡಿ, ಅಂದು ನಿನ್ನ ಹಣ ನಾನು ಹಿಂತಿರುಗಿಸಿ ಕೊಡಬೇಕಿತ್ತು. ಬಾಯಿಗೆ ಬಂದಂತೆ ಬೈದೆ, ನನ್ನನು ಕ್ಷಮಿಸು, ನನಗೆ ಮತ್ತೆ ಹುಷಾರು ತಪ್ಪಿದೆ ಸ್ವಲ್ಪ ಹಣವಿದ್ದರೆ ಕೊಡು, ನಾನು ಚಿಕಿತ್ಸೆ ಪಡೆದು ಗುಣವಾದ ನಂತರ ಅಂದು ನೀ ಕೊಟ್ಟ ಹಣದ ಜೊತೆಗೆ ಇಂದು ಪಡೆದ ಹಣವನ್ನು ಸೇರಿಸಿ ಬಡ್ಡಿ ಸಮೇತ ವಾಪಸ್ಸು ಕೊಡುತ್ತೇನೆ ಇಲ್ಲ ಅನ್ನಬೇಡ ಅಂದಾಗ ಚಂದ್ರಪ್ರಭ ಈಗ ನನ್ನ ಬಳಿ ಹಣವಿದೆ. ಆದರೆ ಈ ಹಿಂದೆ ಇದ್ದ ಗುಣವಿಲ್ಲ, ಈಗ ನಾನು ನಿನಗೆ ಒಂದು ಬಿಡಿಗಾಸು ಕೊಡುವುದಿಲ್ಲ ಹೊರಟುಹೋಗು ಇಲ್ಲಿಂದ ಎಂದು ಬಾಗಿಲು ಎಳೆದುಕೊಂಡು ಒಳ ನಡೆದ.

ನೀತಿ: ಕೆಲವೊಮ್ಮೆ ಸಂದರ್ಭಗಳು ಒಳ್ಳೆಯವರನ್ನು ಕೆಟ್ಟವರನ್ನಾಗಿಯೂ, ಕೆಟ್ಟವರನ್ನು ಒಳ್ಳೆಯವರನ್ನಾಗಿಯೂ ಬದಲಾಯಿಸುತ್ತವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx