ಇಂಡೊನೇಶ್ಯಾದ ಪಶ್ಚಿಮ ಸುಮಾತ್ರಾ ಪ್ರಾಂತದಲ್ಲಿ ಕಳೆದ ವಾರಾಂತ್ಯದಿಂದ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ. ಘಟನೆಯಲ್ಲಿ ಇದುವರೆಗೂ 58 ಮಂದಿ ಮೃತಪಟ್ಟಿದ್ದು 35 ಜನರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ಪ್ರವಾಹದ ಸಮಸ್ಯೆ ಎದುರಾಗಿದೆ. ಭೂಕುಸಿತದಿಂದ ಕೆಸರು ಮಣ್ಣು ಹಾಗೂ ಪಶ್ಚಿಮ ಸುಮಾತ್ರಾದ ಮೂರು ಜಿಲ್ಲೆಗಳಲ್ಲಿ ಮರಾಪಿ ಪರ್ವತದಿಂದ ಸಿಡಿದ ಜ್ವಾಲಾಮುಖಿಯ ಬಿಸಿಬೂದಿ ಪ್ರವಾಹದ ನೀರಿನಲ್ಲಿ ಸೇರಿಕೊಂಡು ಪ್ರಮುಖ ರಸ್ತೆಗಳಲ್ಲಿ ತ್ಯಾಜ್ಯಗಳು ರಾಶಿ ಬಿದ್ದಿವೆ.
ತನಾಹ್ ದತಾರ್ ಜಿಲ್ಲೆಯಲ್ಲಿ ಹಲವು ಸೇತುವೆ, ಮನೆಗಳು ಕುಸಿದು ಬಿದ್ದಿದ್ದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ರಸ್ತೆಗಳಲ್ಲಿ ರಾಶಿಬಿದ್ದಿರುವ ಕಲ್ಲು ಮಣ್ಣು, ಮರಗಳು ಹಾಗೂ ತ್ಯಾಜ್ಯವನ್ನು ತೆರವುಗೊಳಿಸಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಪ್ರಮುಖ ಆದ್ಯತೆ ನೀಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಕನಿಷ್ಟ 249 ಮನೆಗಳು, 556 ಎಕರೆ ಕೃಷಿ ಪ್ರದೇಶ, 19 ಸೇತುವೆಗಳು ಹಾಗೂ ಪ್ರಮುಖ ರಸ್ತೆಗಳು ಹಾನಿಗೊಂಡಿವೆ. ಮುಂದಿನ ವಾರ ಪಶ್ಚಿಮ ಸುಮಾತ್ರಾ ಪ್ರಾಂತದಲ್ಲಿ ಮತ್ತೆ ಮಳೆಸುರಿಯಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296