ಬೆಂಗಳೂರು: ಮುಂದಿನ 10–15 ವರ್ಷಗಳಲ್ಲಿ ತರಗತಿಗಳಿಗೆ ಶಿಕ್ಷಕರ ಅಗತ್ಯವೇ ಇಲ್ಲದಂತೆ ಕೃತಕ ಬುದ್ಧಿಮತ್ತೆಯ ಬೋಧನೆ ಜಾರಿಯಾಗುವ ಸಾಧ್ಯತೆಯಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದ ನೆಹರೂ ತಾರಾಲಯ ನೂತನವಾಗಿ ನಿರ್ಮಿಸಿರುವ ಪ್ರೊಫೆಸರ್ ಯು.ಆರ್.ರಾವ್ ಭವನ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ತಾವು ಸೌದಿ ಅರೇಬಿಯಾಕ್ಕೆ ತೆರಳಿದ್ದು ಅಲ್ಲಿ ಉಪನ್ಯಾಸಕರೊಬ್ಬರ ಜೊತೆ ಮಾತನಾಡುವಾಗ ಮುಂದಿನ 15 ವರ್ಷಗಳಲ್ಲಿ ಮಾನವ ಶಿಕ್ಷಕರ ಅಗತ್ಯವೇ ಇರುವುದಿಲ್ಲ. ಎಲ್ಲವೂ ತಂತ್ರಜ್ಞಾನ ಆಧರಿತ ಎಐ ಅನುಸಾರ ನಡೆಯಲಿದೆ ಎಂದು ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಲು ಮಾಹಿತಿ ನೀಡುವಂತೆ ನಾನು ಅಧಿಕಾರಿಗಳನ್ನು ಕೇಳಿದ್ದೆ. ನನ್ನ ಮಕ್ಕಳು ನಿಮಗೆ ಆಪ್ತ ಸಹಾಯಕರು, ಅಧಿಕಾರಿಗಳಲ್ಲ, ಏಕೆ ಬೇಕು. ಚಾರ್ಟ್ ಜಿಬಿಟಿ ಬಳಸಿ ಎಂದು ಸಲಹೆ ನೀಡಿದರು. ಅದರಲ್ಲಿ ಮಾಹಿತಿ ಕೇಳುತ್ತಿದ್ದಂತೆ ನಿಮಿಷದ ಒಳಗೆ ಎಲ್ಲವೂ ದೊರೆತುಹೋಯಿತು. ಇಂದಿನ ತಂತ್ರಜ್ಞಾನ ಇಷ್ಟರ ಮಟ್ಟಿಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
ನಮ್ಮ ಕಾಲದಲ್ಲಿ ಪೋನ್ ಇರಲಿಲ್ಲ. ಲೆಕ್ಕ ಮಾಡಲು ಕ್ಯಾಲ್ಕುಲೇಟರ್ ಪಡೆಯಲು ಸ್ಪರ್ಧೆ ಮಾಡಬೇಕಿತ್ತು. ಈಗ ಕಂಪ್ಯೂಟರ್, ಮೊಬೈಲ್ ನಂತಹ ಹಲವಾರು ಸಲಕರಣೆಗಳು ವಿದ್ಯಾರ್ಥಿಗಳ ಕೈಯಲ್ಲಿದೆ. ನಮ್ಮ ತಲೆಮಾರಿಗೆ ವಯಸ್ಸಾಗಿದೆ. ಈಗಿನ ತಲೆಮಾರಿಗೆ ಸಾಕಷ್ಟು ಸಮಯವಿದೆ. ಗ್ರಾಮೀಣ ಪ್ರದೇಶದವರು ಎಂಬ ಕೀಳರಿಮೆ ಬೆಳೆಸಿಕೊಳ್ಳದೆ ಆತ್ಮವಿಶ್ವಾಸದಿಂದ ಗುರಿಯತ್ತ ಸಾಗಿ ಎಂದು ಸಲಹೆ ನೀಡಿದರು.
ಪ್ರೊಫೆಸರ್ ಯು.ಆರ್.ರಾವ್, ಸಿ.ವಿ.ರಾಮನ್, ಕಿರಣ್ ಕುಮಾರ್ ರಂತಹ ವಿಜ್ಞಾನಿಗಳು ಈ ನಾಡಿನವರು. ಕರ್ನಾಟಕ ಪ್ರತಿಭೆಗಳ ತವರೂರು. ಅದಕ್ಕಾಗಿಯೇ ಪ್ರಧಾನಿ ಜವಾಹರಲಾಲ್ ನೆಹರೂ ಬೆಂಗಳೂರಿನಲ್ಲಿ ಎಚ್ ಎಎಲ್, ಬಿಎಚ್ ಇಎಲ್, ಐಟಿಐ, ಎಚ್.ಎಂಟಿ ಸೇರಿದಂತೆ ಹಲವಾರು ಉದ್ಯಮಗಳನ್ನು ಸ್ಥಾಪಿಸಿದ್ದರು ಎಂದು ಹೇಳಿದರು.
ಇಸ್ರೋದ ಮಾಜಿ ಅಧ್ಯಕ್ಷ ಪದ್ಮಶ್ರೀ ಕಿರಣ್ ಕುಮಾರ್, ಶಾಸಕ ರಿಜ್ವಾನ್ ಹರ್ಷದ್ ಮಾತನಾಡಿದರು. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಎನ್.ಎಸ್.ಬೋಸರಾಜ್, ಕೃಷ್ಣಭೈರೇಗೌಡ, ಪ್ರಿಯಾಂಕ ಖರ್ಗೆ, ಡಾ.ಎಂ.ಸಿ.ಸುಧಾಕರ್, ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, ಶಾಸಕರಾದ ರಿಜ್ವಾನ್ ಹರ್ಷದ್, ಸಲೀಂ ಅಹಮ್ಮದ್, ಹಿರಿಯ ಅಧಿಕಾರಿಗಳಾದ ಉಮಾಶಂಕರ್, ಏಕರೂಪ್ ಕೌರ್, ತುಷಾರ್ ಗಿರಿನಾಥ್ ಮತ್ತಿತರರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4