ಬಹುಸಂಸ್ಕೃತಿಯ ನಮ್ಮ ದೇಶದ ಸಂವಿಧಾನ ಜನಜೀವನ ವಿಧಾನದ ರಕ್ಷಣೆ ಮತ್ತು ಅದರ ಬೆಳವಣಿಗೆ ಆಧಾರದಲ್ಲಿ ರೂಪಿತಗೊಂಡಿದೆ. ಕಾಲದ ಅಗತ್ಯಾನುಸಾರ ಕೆಲ ಪ್ರಗತಿ ಪರ ಮತ್ತು ಜೀವಪರ ಹೊಸತು ಅಂಶಗಳನ್ನು ತನ್ನೊಳಕ್ಕೆ ಸೇರಿಸಿಕೊಳ್ಳುವ ಶಕ್ತಿ ಕೂಡ ಅದಕ್ಕಿದೆ. ಹೀಗಾಗಿ ಹಲವು ಪ್ರಮುಖ ಸಂದರ್ಭದಲ್ಲಿ ಕಾಲದ ಅಗತ್ಯಾನುಸಾರ ತಿದ್ದುಪಡಿ ಕೂಡ ಸಾಧ್ಯವಾಗಿದೆ. ಎಲ್ಲದಕ್ಕೂ ಮುಖ್ಯವಾಗಿ ವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ ಮತ್ತು ವಿಚಾರ ಸ್ವಾತಂತ್ರ್ಯ ಸಂವಿಧಾನದ ಮೂಲ ಧರ್ಮ. ಹೀಗಾಗಿ ಸಂವಿಧಾನ ನಮ್ಮ ದೇಶದ ರಾಜಧರ್ಮವೇ ಆಗಿದೆ.
ಇದರ ಮೇಲೆ ದುರಾಕ್ರಮಣದ ನೀತಿಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸಂವಿಧಾನ ಬದಲಾವಣೆ ಮಾಡುವ ಮಾತುಗಳ ಹುನ್ನಾರದ ಹಿಂದಿರುವ ಮೂಲ ಪ್ರೇರಣಾ ಶಕ್ತಿ ನಿರಂಕುಶ ಪ್ರಭುತ್ವದ ಪ್ರತಿಷ್ಠಾನ ಮಾಡುವ ಸಂಕಲ್ಪ ತೊಟ್ಟ ಸಂಘ ಪರಿವಾರದ್ದು. ಅದರ ರಾಜಕೀಯ ಘಟಕ ಭಾಜಪ ಇದನ್ನು ಕಾರ್ಯರೂಪಕ್ಕೆ ತರಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ಸಂವಿಧಾನ ಕರಡು ಸಮಿತಿ ಅಧ್ಯಕ್ಷ, ಸಂವಿಧಾನ ಶಿಲ್ಪಿ ಎಂದೇ ಹೆಸರಾದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕೇಂದ್ರವಾಗಿ ಇಟ್ಟುಕೊಂಡು ಅವರ ಅವಮಾನಿಸುವ ಕೆಲಸ ನಡೆಯುತ್ತಿದೆ ಎಂದು ಟೂಡ ಶಶಿಧರ್ ತಿಪಟೂರು ಹೇಳಿದ್ದಾರೆ.
ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಸಂವಿಧಾನದ 75ನೇ ವರ್ಷಾಚರಣೆ ಪ್ರಯುಕ್ತ ನಡೆದ ಚರ್ಚೆಯ ದಿಕ್ಕು ತಪ್ಪಿಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಸದನದಲ್ಲಿ ಆಡಿದ “ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್… ಎನ್ನುತ್ತಿರುವುದು ಇತ್ತೀಚೆಗೆ ಇದೊಂದು ವ್ಯಸನದಂತಾಗಿದೆ” ಎನ್ನುವ ಮಾತು ಅತ್ಯಂತ ಖಂಡನೀಯ ಎಂದು ಅವರು ಹೇಳಿದರು.
ಇಂಥ ಅನರ್ಥದ ಮತ್ತು ದೇಶವನ್ನು ಆಂತರಿಕ ಗಂಡಾಂತರಕ್ಕೆ ಈಡು ಮಾಡುವ, ಸಾಮಾಜಿಕ ಮೌಲ್ಯಗಳನ್ನು ನಾಶಪಡಿಸುವ ದೇಶವಿರೋಧಿಯಾದ ಅಪಾಯಕಾರಿ ಮಾತುಗಳನ್ನು ಆಡಿದ ಗೃಹ ಸಚಿವ ಅಮಿತ್ ಷಾ ಅವರನ್ನು ಕೂಡಲೇ ಕೇಂದ್ರ ಸಂಪುಟದಿಂದ ಕೈಬಿಡಬೇಕು. ಇಲ್ಲವೇ ಷಾ ಅವರೇ ರಾಜೀನಾಮೆ ನೀಡಬೇಕು ಎಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ ಎಂದು ಶಶಿಧರ್ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಅತ್ಯುನ್ನತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕ್ರಮವಾಗಿ ರಾಜ್ಯಸಭಾ ಮತ್ತು ಲೋಕಸಭಾ ಎರಡೂ ಸದನಗಳಲ್ಲಿ ಕ್ರೋನೀ ಕ್ಯಾಪಿಟಲಿಸ್ಟ್ ಶಕ್ತಿಗಳ ವಿರುದ್ಧ ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದಾರೆ. ಕ್ರೋನಿ ಕ್ಯಾಪಿಟಲಿಸ್ಟ್ ಅದಾನಿ ಸಮೂಹ ಅಮೆರಿಕದಲ್ಲಿ ಕೂಡ ದೇಶದ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಅಲ್ಲಿನ ನ್ಯಾಯಾಲಯದಲ್ಲಿ ಇವರ ವಿರುದ್ಧ ದಾವೆಗಳು ನಡೆಯುತ್ತಿವೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆ. ಈ ಕ್ರೋನಿ ಕ್ಯಾಪಿಟಲಿಸ್ಟ್ ರ ರಕ್ಷಣೆ ಪ್ರಧಾನಿ ಮೋದಿ ಅವರಿಂದ ನಡೆಯುತ್ತಿದೆಯೇ ಎಂಬ ಅನುಮಾನಗಳು ಇರುವುದರಿಂದ ತನಿಖೆಗೆ ಮತ್ತು ಸ್ಪಷ್ಟನೆಗೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಕೇಂದ್ರವನ್ನು ಒತ್ತಾಯಿಸುತ್ತಿದೆ. ಇದರಿಂದ ಪ್ರಧಾನಿ ಮೋದಿ ದೊಡ್ಡ ಪೇಚಿಗೆ ಸಿಕ್ಕಿಕೊಂಡಿದ್ದಾರೆ. ಎನ್ ಡಿಎ ಸರ್ಕಾರ ತತ್ತರಿಸುವಂತಾಗಿದೆ ಎಂದು ಅವರು ಹೇಳಿದರು.
ಬೆಲೆ ಏರಿಕೆ, ಜಿಎಸ್ ಟಿ, ಜಾತಿ ಜನಗಣತಿ ಮತ್ತಿತರ ಜನಸಾಮಾನ್ಯರ ಪರ ಸಮಗ್ರ ಕಾಳಜಿಗಳನ್ನು ಸದನದಲ್ಲಿ ನಿರಂತರವಾಗಿ ಕಾಂಗ್ರೆಸ್ ಪಕ್ಷದ ನಾಯಕರು, ಸಂಸದರು ಎತ್ತುತ್ತಿರುವುದರಿಂದ ಕೇಂದ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಜನರ ದೃಷ್ಟಿಯಲ್ಲಿ ಕೇಂದ್ರದ ನೈತಿಕತೆ ಕುಸಿಯತೊಡಗಿದೆ. ಇವೆಲ್ಲದರಿಂದ ಬಚಾವಾಗಲು ಜನರ ಚಿತ್ತ ಚದುರಿಸುವ ಪ್ರಯತ್ನಗಳನ್ನು ಭಾಜಪ ಮಾಡುತ್ತಿದೆ ಎಂದು ಶಶಿಧರ್ ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳು ಇಂಥ ಜನವಿರೋಧಿ, ಕೋಮುವಾದಿ ಭಾಜಪ ನೇತೃತ್ವದ ಸರ್ಕಾರದ ಸಂವಿಧಾನ ವಿರೋಧಿ ನೀತಿಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕೂಡ ಈ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸಚಿವರು ಆದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಆಡಬಾರದ ಸ್ತ್ರೀ ನಿಂದನಾ ಪದಗಳನ್ನು ಬಳಸಿ ಅನಗತ್ಯ ವಿವಾದ ಸೃಷ್ಟಿಸಿದ ಭಾಜಪ ಎಂಎಲ್ಸಿ ಸಿ.ಟಿ.ರವಿ ಅವರ ನಡೆ ಅಕ್ಷಮ್ಯ ಎಂದು ಅವರು ಟೀಕಿಸಿದರು.
ಸ್ತ್ರೀ ಗೌರವ, ಸಮಾನತೆ ಮತ್ತು ಸದಾಚಾರ, ಸನ್ನಡೆಯ ಬಸವಾದಿ ಶರಣ ಪರಂಪರೆಯನ್ನು ಪ್ರಜ್ಞಾಪೂರ್ವಕವಾಗಿ ಅವಮಾನಿಸುವ, ಅದಕ್ಕೆ ಚ್ಯುತಿ ತರುವ ನಡೆ ಇದಾಗಿದೆ. ಶರಣ ಪರಂಪರೆಯ ಅಕ್ಕ ಮಹಾದೇವಿ, ಗಂಗಾಂಬಿಕೆ, ನೀಲಾಂಬಿಕೆ, ಸೂಳೆ ಸಂಕವ್ವೆ, ಆಧುನಿಕ ಯುಗದ ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಮತ್ತು ಚಾಂದ್ ಬೀಬಿ ಅವರಂಥ ಮಹಾ ವೀರವನಿತೆಯರ ನೆಲದಲ್ಲಿ ನಿಂತು ಮಹಿಳೆಯರ ಮಾನ, ಸಮ್ಮಾನಗಳ ಜನಸಂಸ್ಕೃತಿಗೆ ಅವಹೇಳನ ಮಾಡುವ ದುಷ್ಟ ಸಂಕಲ್ಪ ಇದಾಗಿದೆ. ಬಸವೇಶರ ಸಂಸ್ಕೃತಿ ಮತ್ತು ಲಿಂಗಾಯತ ನಂಬಿಕೆಗಳ ಮೇಲೆ ನಡೆದ ಹಲ್ಲೆ ಇದಾಗಿದೆ. ಇದು ಖಂಡನೀಯ ಎಂದು ಅವರು ಹೇಳಿದ್ದಾರೆ.
ಬಸವೇಶ್ವರ ಸಮಾನತೆ, ಸಕಲ ಜೀವಾತ್ಮರಿಗೆ ಲೇಸ ಬಯಸುವ ಆಶಯಗಳನ್ನು ಸಂವಿಧಾನದ ಆಶಯಗಳಿಗೆ ಉಸಿರಾಗಿಸಿದ ಅಂಬೇಡ್ಕರ್ ಆಧುನಿಕ ನಿಜ ಶರಣ. ಶರಣ ಸಂಸ್ಕೃತಿ ಎತ್ತಿಹಿಡಿಯುವ ಕೆಲಸವನ್ನು ಆಧುನಿಕ ಕಾಲದಲ್ಲಿ ಮಾಡಿದ ಅಂಬೇಡ್ಕರ್ ನಮ್ಮವರು. ನಮ್ಮ ಹಿರಿಕರು. ಅವರಿಗೆ ಮಾಡುವ ಅವಮಾನ ಶರಣ ಸಂಸ್ಕೃತಿಯ ಅವಮಾನ, ಸಹಬಾಳ್ವೆಯ ಸಾಮರಸ್ಯ ಜನಸಂಸ್ಕೃತಿಯ ಅವಮಾನ ಎನ್ನುವುದು ನನ್ನ ಭಾವನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx