ತುರುವೇಕೆರೆ: ಪಟ್ಟಣದ ಬಾಣಸಂದ್ರ ರಸ್ತೆಯಲ್ಲಿನ ಕೋಳಿ ಅಂಗಡಿಯ ಹಿಂಭಾಗ ಸರಿಸುಮಾರು 85ರ ಆಸುಪಾಸಿನ ವಯೋವೃದ್ದ ಅರೆ ಪ್ರಜ್ಞಾಸ್ಥಿತಿಯಲ್ಲಿ ಬಿದ್ದಿದ್ದು, ಈ ವೃದ್ಧನನ್ನು ತುರುವೇಕೆರೆ ಠಾಣೆಯ ಪೊಲೀಸರು ಚಿಕಿತ್ಸೆ ಕೊಡಿಸಿ ಮಗನ ಜೊತೆಗೆ ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ವೃದ್ಧ ಅರೆ ಪ್ರಜ್ಞಾಸ್ಥಿತಿಯಲ್ಲಿ ಬಿದ್ದಿದ್ದು, ಕೋಳಿ ಅಂಗಡಿಯ ಕೆಲಸಗಾರರು ತುರುವೇಕೆರೆ ಠಾಣೆಯ ಪೊಲೀಸರಿಗೆ ಕರೆಮಾಡಿ ಸುದ್ದಿ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ವೃತ್ತ ನಿರೀಕ್ಷಕರಾದ ಗೋಪಾಲ್ ನಾಯಕ್ ಹಾಗೂ ಠಾಣೆಯ ಪೊಲೀಸ್ ಪಿ.ಎಸ್ ಐ ಕೇಶವಮೂರ್ತಿ ಅವರ ಮಾರ್ಗದರ್ಶನದಲ್ಲಿ ಅಸ್ವಸ್ಥಗೊಂಡಿದ್ದ ವೃದ್ಧನನ್ನು ತುರುವೇಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಬಳಿಕ ವೃದ್ಧನ ವಿಳಾಸ ಪತ್ತೆ ಹಚ್ಚಿ ಮಗನ ಜೊತೆ ಕಳುಹಿಸಿಕೊಟ್ಟಿದ್ದಾರೆ.
ವೃದ್ದನು ತಿಪಟೂರಿನಲ್ಲಿರುವ ಮಗಳ ಮನೆಗೆಂದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹೊಸಳ್ಳಿ ಅಗ್ರಹಾರದಿಂದ ಪ್ರಯಾಣ ಬೆಳೆಸಿ ಬಂದು ತಿಪಟೂರು ಎಂದು ತುರುವೇಕೆರೆಯಲ್ಲಿಯೇ ಇಳಿದು ದಿಕ್ಕು ತೋಚದೆ ಬಾಣಸಂದ್ರ ರಸ್ತೆಯ ಕೋಳಿ ಅಂಗಡಿಯ ಬಳಿ ಅಸ್ವಸ್ಥಗೊಂಡು ಬಿದ್ದಿರುವುದಾಗಿ ವೃದ್ದನು ಹೇಳಿಕೆ ನೀಡಿದ್ದಾನೆ.
ತಂದೆ ಹಾಗೂ ಮಗನನ್ನು ಪತ್ತೆಮಾಡಿ ಊರು ಸೇರಿಸಿದ ತುರುವೇಕೆರೆ ಠಾಣೆಯ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ: ಸುರೇಶ್ ಬಾಬು ತುರುವೇಕೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz