ಬೆಂಗಳೂರು ಮೇ 27: ಕುಟುಂಬ ರಾಜಕಾರಣದ ನೆಪವೊಡ್ಡಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ತಂತ್ರ ಫಲಿಸದು. ಭಾರತವೆಂದರೆ; ಬಿಜೆಪಿಯಷ್ಟೇ ಅಲ್ಲ, 140 ಕೋಟಿಗೂ ಹೆಚ್ಚು ಭಾರತೀಯರು ಸೇರಿದರೆ ಮಾತ್ರ ಭಾರತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಕಿಡಿಕಾರಿದ್ದಾರೆ.
ಪ್ರಧಾನಿ ಅವರ ಹೇಳಿಕೆ ಕರ್ನಾಟಕದಲ್ಲಿ ಬಿಜೆಪಿ ನಡೆಸಿದ ಆಪರೇಷನ್ ಕಮಲ, ಹಣಕ್ಕಾಗಿ ಮುಖ್ಯಮಂತ್ರಿ ಪದವಿ ಸೇಲ್ ವಿಚಾರ, ಭ್ರಷ್ಟಾಚಾರ, ಭಾವುಕ ವಿಷಯಗಳಿಂದ ಸಮಾಜದಲ್ಲಿ ಒಡಕು ಉಂಟು ಮಾಡುವ ವಿಷಯಗಳನ್ನು ಇಟ್ಟುಕೊಂಡು ತಿರುಗೇಟು ನೀಡಿದ್ದಾರೆ.
“ಕುಟುಂಬ ಆಧರಿತ ಪಕ್ಷಗಳು ದೇಶಕ್ಕೆ ಮತ್ತು ಯುವಜನರ ಪಾಲಿಗೆ ದೊಡ್ಡ ಶತ್ರು. ಇದು ರಾಜಕಾರಣದ ದೊಡ್ಡ ಸಮಸ್ಯೆಯೂ ಹೌದು.” ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಉಪದೇಶವಿದು. ವಾಸ್ತವ ಗುರುತಿಸಿ, ಬಿಜೆಪಿ ಬೆಳವಣಿಗೆಯ ಹಿನ್ನೆಲೆ ಅರಿತು ಅವರು ಭಾಷಣ ಮಾಡಬೇಕಿತ್ತು. ಕೇವಲ ಚುನಾವಣಾ ಪ್ರಚಾರ ಶೈಲಿಯ ಭಾಷಣ ಮಾಡಿದ್ದಾರಷ್ಟೇ.
ಕಾಂಗ್ರೆಸ್ ನೆಲಕಚ್ಚಿದ ಮೇಲೆ ಬಿಜೆಪಿಗೆ ಪ್ರತಿರಾಜ್ಯದಲ್ಲಿ ಎದುರಾಗುತ್ತಿರುವ ರಾಜಕೀಯ ವೈರಿಗಳೆಂದರೆ ಪ್ರಾದೇಶಿಕ ಪಕ್ಷಗಳೇ. ಇಂಥ ಬಲಿಷ್ಠ ಪಕ್ಷಗಳನ್ನು ಮುಗಿಸಲು ಬಿಜೆಪಿ ಸಂಚುಮಾಡುತ್ತಿದೆ. ದೇಶಕ್ಕೆ ಅಪಾಯ ಇರುವುದು ʼಕುಟುಂಬವಾದಿ ಪಕ್ಷಗಳಿಂದಲ್ಲ, ಬಿಜೆಪಿಯಂಥ ಕೋಮುವಾದಿ ಪಕ್ಷದಿಂದ.ʼ ಭಾವನಾತ್ಮಕವಾಗಿ ಜನರನ್ನು ಜಗಳಕ್ಕಿಳಿಸಿ ಜಾಗ ಹಿಡಿಯುವ ಪರಿಪಾಠ ಪ್ರಜಾಪ್ರಭುತ್ವದ ನಿಜವಾದ ದೊಡ್ಡ ಶತ್ರು. ಸಂವಿಧಾನಕ್ಕೆ ಗಂಡಾಂತರಕಾರಿ. ಮಾನ್ಯ ಮೋದಿ ಅವರಿಗೆ ಈ ವಿಷಯ ಗೊತ್ತಿಲ್ಲವೆಂದು ನಾನು ಭಾವಿಸುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB