ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಸಾಪ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಮುಖಂಡರಾದ ಸ್ವದೇಶಿ ವಿಶ್ವನಾಥ್, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಮಂಜೇಶ್, ತಾಲೂಕು ಅಧ್ಯಕ್ಷ ಕಟವೇಲ್ ರಂಗನಾಥ್, ಜಿಲ್ಲಾ ವಾದ್ಯಗಾರರ ಸಂಘದ ಅಧ್ಯಕ್ಷ ಗಂಗಾಧರ್, ಸತ್ಯನಾರಾಯಣ್, ಬಿಸ್ಟೆಕ್ಸ್ ರಾಮರಾಜು, ಸೀತಾರಾಮಯ್ಯ ಸೇರಿದಂತೆ ಸಮುದಾಯದ ಮುಖಂಡರು ಗಳ ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, 12ನೇ ಶತಮಾನದ ವಚನ ಚಳವಳಿಯ ನೇತೃತ್ವ ವಹಿಸಿದ್ದ ಹಲವು ಮಹನೀಯರು ಜಯಂತಿಗಳನ್ನು ಸರ್ಕಾರ ಆಚರಿಸುತ್ತಿದ್ದು, ಅವರಲ್ಲಿ ಬಸವಣ್ಣನವರ ಬಲಗೈ ಬಂಟನಂತಿದ್ದ ಶಿವಶರಣ ಹಡಪದ ಅಪ್ಪಣ್ಣನವರು ಒಬ್ಬರು. ಯಾರನ್ನು ಬೆಳಿಗ್ಗೆ ಎದ್ದು ನೋಡಬಾರದು ಎಂಬ ಮೌಢ್ಯ ಸಮಾಜದಲ್ಲಿ ತುಂಬಿತ್ತೋ, ಅದೇ ಸಮಾಜಕ್ಕೆ ಸೇರಿದ ಹಡಪದ ಅಪ್ಪಣ್ಣ ಅವರನ್ನು ತಮ್ಮ ಕಚೇರಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿಕೊಂಡಿದ್ದ ಬಸವಣ್ಣ, ತನ್ನನ್ನು ನೋಡುವ ಮೊದಲು ಹಡಪದ ಅಪ್ಪಣ್ಣ ಅವರ ಬಳಿ ಹೋಗಿ, ಒಪ್ಪಿಗೆ ಪಡೆದು ಬರುವಂತಹ ನೀತಿ ರೂಪಿಸಿದ್ದರು ಎಂದರು.
ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ವಚನ ಚಳವಳಿಯಲ್ಲಿದ್ದ ಬಹುತೇಕರು ಕಾಯಕ ಮತ್ತು ದಾಸೋಹ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರು ಎಂದರು.
ತುಮಕೂರು ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾದ ಕಟವೇಲ್ ರಂಗನಾಥ್ ಮಾತನಾಡಿ, ಜಿಲ್ಲಾಡಳಿತ ಹಡಪದ ಅಪ್ಪಣ್ಣ ಅವರ ಜಯಂತಿಯನ್ನು ಅದ್ದೂರಿಯಾಗಿ ಅಲ್ಲದಿದ್ದರೂ ಅತ್ಯಂತ ಸರಳ ಮತ್ತು ಅರ್ಥ ಪೂರ್ಣವಾಗಿ ಆಚರಿಸುತ್ತಿದೆ. ಸಮುದಾಯಗಳು ಒಂದಾಗಲು ಕಾರಣವಾಗಿದೆ. ಇದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಿಸ್ಟೆಕ್ಸ್ ರಾಮರಾಜು ಹಡಪದ ಅಪ್ಪಣ್ಣ ಅವರ ವಚನ ವಾಚಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶ್ ಕುಮಾರ್, ನಾಗೇಂದ್ರ, ಪಾರ್ಥಸಾರಥಿ, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
ನೆನೆಯ ಬಾರದವರು ಎಂಬ ಪರಿಕಲ್ಪನೆಯನ್ನೇ ತ್ಯಜಿಸಿ, ಹಡಪದ ಅಪ್ಪಣ್ಣ ಅವರನ್ನು ತಮ್ಮ ಅಂಗರಕ್ಷಕರಾಗಿ ನೇಮಿಸಿಕೊಂಡವರು ಬಸವಣ್ಣ. ಕೊಲೆಗಾರರ ಮನ ಪರಿವರ್ತನೆ ಮಾಡಿ, ಶಿವ ಶರಣರನ್ನಾಗಿ ಮಾಡಿದ ಕೀರ್ತಿ ಹಡಪದ ಅಪ್ಪಣ್ಣ ಅವರಿಗೆ ಸಲ್ಲುತ್ತದೆ.
— ಸ್ವದೇಶಿ ವಿಶ್ವನಾಥ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
