ಕಳ್ಳರ ಸಂಖ್ಯೆ ಮಿತಿ ಮೀರಿದೆ. ಎಲ್ಲಿ ಹೋದ್ರೂ ಕಳ್ಳರದ್ದೇ ಭಯ. ಯಾವುದೇ ಕಾರ್ಯಕ್ರಮಗಳಿರಲಿ ಅಥವಾ ಮನೆಯೇ ಆಗಿರಲಿ ಕಳ್ಳರ ಮೇಲೆ ಒಂದು ನಿಗಾ ಇಟ್ಟಿರಬೇಕಾಗುತ್ತದೆ. ಇದೀಗ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರ ಪತ್ನಿ ಮಲ್ಲಿಕಾ ನಡ್ಡಾ ಅವರ ಕಾರು ಕಳ್ಳತನವಾದ ಘಟನೆಯೊಂದು ವರದಿಯಾಗಿದೆ. ದೆಹಲಿಯ ಗೋವಿಂದಪುರಿಯ ಸೇವಾ ಕೇಂದ್ರದಿಂದ ಕಾರು ಕಳ್ಳತನಾಗಿದೆ ಎಂದು ಹೇಳಲಾಗುತ್ತಿದೆ.
ಮಲ್ಲಿಕಾ ನಡ್ಡಾ ಅವರು ಫಾರ್ಚೂನರ್ ಕಾರು ಬಳಸುತ್ತಿದ್ದರು. ಈ ಕಾರನ್ನು ಗೋವಿಂದಪುರಿಯ ಸರ್ವೀಸ್ ಸೆಂಟರ್ ನಲ್ಲಿ ಬಿಡಲಾಗಿತ್ತು. ಆದರೆ ಖದೀಮರು ಸರ್ವೀಸ್ ಸ್ಟೇಷನ್ ಬಳಿಯಿಂದಲೇ ಕಾರನ್ನು ಕದ್ದಿದ್ದಾರೆ ಎಂದು ತಿಳಿದುಬಂದಿದೆ. ಮಾರ್ಚ್ 19ರಂದು ಕಾರು ಕಳ್ಳತನವಾಗಿದೆ ಎಂದು ವರದಿಯಾಗಿದೆ. ಫಾರ್ಚೂನರ್ ಕಾರು ಕಳ್ಳತನ ಬಗ್ಗೆ ಡ್ರೈವರ್ ಜೋಗಿಂದರ್ ಸಿಂಗ್ ಅದೇ ದಿನ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಸದ್ಯ ಕಾರು ಪತ್ತೆಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.
ಕಾರು ಡ್ರೈವರ್ ಜೋಗಿಂದರ್ ಸಿಂಗ್ ಸರ್ವೀಸ್ ಸೆಂಟರ್ ಬಳಿ ಕಾರು ನಿಲ್ಲಿಸಿ ಬಳಿಕ ಊಟ ಮಾಡಿ ಮನೆಗೆ ಹೋಗಿದ್ದರು. ಆದರೆ ಹಿಂತಿರುಗಿ ಬರುವಾಗ ಕಾರು ಅಲ್ಲಿರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಹುಡುಕಾಡುತ್ತಿದ್ದಾರೆ. ಕಾರು ಕೊನೆಯದಾಗಿ ಗುರುಗ್ರಾಮ್ ಕಡೆಗೆ ತೆರಳಿರುವುದಾಗಿ ತಿಳಿದು ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296