ಗುತ್ತಿಗೆದಾರರ ಬಿಲ್ ಪಾವತಿಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅನುಸರಿಸುತ್ತಿರುವ ಪದ್ಧತಿ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮತ್ತು ಪದಾಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಒಂದು ಕೋಟಿ ರೂ. ಹಾಗೂ ಅದಕ್ಕಿಂತಲೂ ಕಡಿಮೆ ಮೊತ್ತದ ಸಣ್ಣ ಗುತ್ತಿಗೆದಾರರಿಗೆ ಹಿರಿತನದ ಮತ್ತು ಪ್ರೋರೇಟಾ ಸಮಾನಾಂತರ ಅನುಪಾತ ಆಧಾರದ ಮೇಲೆ ಬಿಲ್ ಪಾವತಿಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಗುತ್ತಿಗೆದಾರರ ಸಮಸ್ಯೆ ಕುರಿತಂತೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು, ಇನ್ನು ಮುಂದೆ ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡುವಂತೆ ಕೋರಿದ್ದಾರೆ.
ಜಲಸಂಪನ್ಮೂಲ, ಲೋಕೋಪಯೋಗಿ ಇಲಾಖೆಗಳಲ್ಲಿ ಆದ್ಯತೆ ಮೇರೆಗೆ ಬಿಲ್ ಪಾವತಿ ಆಗುತ್ತಿದ್ದು, ಸಣ್ಣ ಗುತ್ತಿಗೆದಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿದೆ. ಇದರಿಂದ ಸಣ್ಣ ಗುತ್ತಿಗೆದಾರರ ಬಾಕಿ ಮೊತ್ತದಲ್ಲಿ ಭಾರಿ ಪ್ರಮಾಣದ ಕಡಿತವಾಗಿದೆ. ತಾಲ್ಲೂಕು ಮಟ್ಟದ ಗುತ್ತಿಗೆಯನ್ನು ಜಿಲ್ಲಾ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿನ ಗುತ್ತಿಗೆಗಳನ್ನು ರಾಜ್ಯಮಟ್ಟದಲ್ಲಿ ನಿರ್ಧರಿಸುವ ಪದ್ಧತಿಯ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.
ಒಟ್ಟಾರೆ ಗುತ್ತಿಗೆದಾರರ ಬಾಕಿ ಬಿಲ್ ಸರಿಯಾದ ಸಮಯಕ್ಕೆ ಪಾವತಿಯಾಗುತ್ತಿದೆ. ಕಿರಿಕಿರಿ ಕಡಿಮೆಯಾಗಿದೆ. ಇದೇ ಪದ್ಧತಿ ಮುಂದುವರಿಸಿ ಎಂದು ಕೆಂಪಣ್ಣ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ವರದಿ ಆಂಟೋನಿ ಬೇಗೂರು