ತುಮಕೂರು: ಹುಲಿಯೂರು ದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಆಕೆ ಗರ್ಭಾವತಿಯಾಗಲು ಕಾರಣನಾದ ಮತ್ತು ಬಾಲಕಿಯನ್ನು ಬಾಲ್ಯವಿವಾಹ ಮಾಡಿಕೊಂಡ ಅಪರಾಧಿಗೆ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಎಫ್ ಟಿಎಸ್ ಸಿ (ಪೋಕ್ಸೋ) 20 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 2.50 ಲಕ್ಷ ರೂ. ದಂಡ ವಿಧಿಸಿದೆ.
ಶಶಿಕುಮಾರ್ ಎಂಬಾತ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದು, ಬಾಲಕಿಯನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ಪುಸಲಾಯಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ನಂತರ ಆಕೆಯನ್ನು ಬಲವಂತವಾಗಿ ಬಾಲ್ಯವಿವಾಹ ಮಾಡಿಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದು, ಪರಿಣಾಮವಾಗಿ ಆಕೆ ಗರ್ಭಿಣಿಯಾಗಿದ್ದಾಳೆ ಎಂದು ತನಿಖಾಧಿಕಾರಿ ಕುಣಿಗಲ್ ನ ಸಿಪಿಐ ವಿ.ಎಂ.ಗುರುನಾಥ್ ಘನ ನ್ಯಾಯಾಲಯಕ್ಕೆ ದೋಷಾರೋಪಣಾಪಟ್ಟಿಯನ್ನು ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಅಭಿಯೋಜನೆಯ ಪರ ವಿಚಾರಣೆ ಮಾಡಲಾದ ಸಾಕ್ಷಿಗಳಿಂದ ಆರೋಪಿ ಶಶಿಕುಮಾರ್ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆ 20 ವರ್ಷಗಳ ಜೈಲು ಶಿಕ್ಷೆ ಮತ್ತು 2.50 ಲಕ್ಷ ದಂಡವನ್ನು ವಿಧಿಸಿದ್ದು, ದಂಡದ ಮೊತ್ತದಲ್ಲಿ ನೊಂದ ಬಾಲಕಿಗೆ 2.50 ಲಕ್ಷ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 4 ಲಕ್ಷ ಸೇರಿದಂತೆ ಒಟ್ಟು 6.50 ಲಕ್ಷ ರೂ. ಪರಿಹಾರವಾಗಿ ನೀಡಬೇಕು ಎಂದು ನ್ಯಾಯಾಧೀಶರು ತೀರ್ಪು ನೀಡಿದರು.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಆಶಾ ಕೆ.ಎಸ್. ವಾದ ಮಂಡಿಸಿದರು.
ವರದಿ: ಶಿವಕುಮಾರ್ ಮೇಷ್ಟ್ರುಮನೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW