ಬೆಂಗಳೂರು: ಸಾಂಕ್ರಾಮಿಕ ರೋಗ ಕೋವಿಡ್– 19 ಮಾರಕ ಕಾಯಿಲೆಯಿಂದ ಮುಖ್ಯವಾಗಿ ನಮ್ಮ ರಾಜ್ಯದಲ್ಲಿ ಸಾವಿರಾರು ಸಾವುಗಳು ಸಂಭವಿಸಿದ್ದು, ಈ ರೋಗದಿಂದ ರಾಜ್ಯದ ನಾಗರಿಕರು ತತ್ತರಿಸಿ ಜೀವನ್ಮರಣದ ಹೋರಾಟ ನಡೆಸುವ ಸಂದರ್ಭದಲ್ಲಿ ನಾಗರಿಕರನ್ನು ರಕ್ಷಿಸಲು ಹೊಣೆ ಹೊತ್ತಿರುವ ಗುರುತರ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಮುಖ್ಯಮಂತ್ರಿ, ಸಚಿವರು ಮತ್ತು ಉನ್ನತ ಮಟ್ಟದ ಅಧಿಕಾರಿಗಳು ವ್ಯಾಪಕ ಭ್ರಷ್ಟಾಚಾರ ಮಾಡಿರುವುದು ನ್ಯಾಯಮೂರ್ತಿ ಮೈಕೆಲ್ ಡಿ ಕುನ್ನರವರ ನೇತೃತ್ವದ ಆಯೋಗ ವರದಿಯಲ್ಲಿ ಉಲ್ಲೇಖವಾಗಿದ್ದು ನಾಗರೀಕರ ಜೀವದ ಜೊತೆ ಚೆಲ್ಲಾಟವಾಡಿರುವ ಮತ್ತು ಈ ಸಾಂಕ್ರಾಮಿಕ ರೋಗದಿಂದಲೇ ಹಣ ಗಳಿಸುವ ಉದ್ದೇಶದಿಂದ ಹಲವಾರು ಕಂಪನಿಗಳ ಜೊತೆ ಕೈಜೋಡಿಸಿ ವೈದ್ಯಕೀಯ ಸಾಮಗ್ರಿ, ಉಪಕರಣಗಳನ್ನು ಕೊಂಡುಕೊಳ್ಳಲು ಮಾಡಿರುವ ವ್ಯವಹಾರದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ನ್ಯಾಯಮೂರ್ತಿ ಮೈಕಲ್ ಡಿ ಕುನ್ನ ಅವರು ತಮ್ಮ ತನಿಖಾ ವರದಿಯಲ್ಲಿ ಬೆಳಕನ್ನು ಚೆಲ್ಲಿದ್ದಾರೆ. ಈ ವರದಿಯ ಬಗ್ಗೆ ಮಾಧ್ಯಮಗಳು ವ್ಯಾಪಕವಾಗಿ ಪ್ರಸಾರ ಮಾಡುತ್ತಿರುವ ಹಿನ್ನೆಲೆಯಲ್ಲಿ ನೈಜ ಹೋರಾಟಗಾರರ ವೇದಿಕೆ ಸರ್ಕಾರಕ್ಕೆ ಇಮೇಲ್ ಮೂಲಕ ವಿಶೇಷ ಮನವಿ ಸಲ್ಲಿಸಿದೆ.
ಬಹಳ ಮುಖ್ಯವಾಗಿ ಕೋವಿಡ್ 19 ಸಂಕ್ರಾಮಿಕ ರೋಗ ಹರಡುತ್ತಿರುವ ಸಂದರ್ಭದಲ್ಲಿಯೇ ಸರ್ಕಾರದ ಉನ್ನತ ಅಧಿಕಾರಿಗಳು ವೈದ್ಯಕೀಯ ಉಪಕರಣಗಳು ಮತ್ತು ಸಾಮಗ್ರಿಗಳ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸುತ್ತಿರುವ ಬಗ್ಗೆ ದಿ ಫೈಲ್ ವರದಿ ಮಾಡಿದ್ದು, ಆ ಸಂದರ್ಭದಲ್ಲಿ ಯಾರೂ ಕೂಡ ಈ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ದೇಶ ಸ್ವಾತಂತ್ರ ಗಳಿಸಿದ ನಂತರ ಇಲ್ಲಿಯವರೆಗೆ ನಮ್ಮನ್ನು ಆಳಿದ ವಿವಿಧ ರಾಜಕೀಯ ಪಕ್ಷಗಳ ಸರ್ಕಾರಗಳು ನಡೆಸುವ ಭ್ರಷ್ಟಾಚಾರಗಳನ್ನು ಈವರೆಗೂ ನಾಗರೀಕರು ಒಂದಲ್ಲ ಒಂದು ರೀತಿ ಸಹಿಸಿಕೊಂಡು ಬಂದಿದ್ದಾರೆ. ಆದರೆ ಸಾಂಕ್ರಾಮಿಕ ರೋಗ ಕೋವಿಡ್ 19 ರಾಜ್ಯದ ನಾಗರಿಕರು ತಮ್ಮ ತಮ್ಮ ಕುಟುಂಬದ ಸದಸ್ಯರನ್ನು ಆಪ್ತರನ್ನು ಕಳೆದುಕೊಂಡ ನೋವಿನಲ್ಲಿ ತಾವು ಕೂಡ ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿರುವ ಸಂದರ್ಭದಲ್ಲಿ ನಡೆದ ಅವ್ಯವಹಾರ, ಭ್ರಷ್ಟಾಚಾರವನ್ನು ಸಹಿಸಲು ಸಾಧ್ಯವೇ ಇಲ್ಲ. ಇಂತಹ ರಾಕ್ಷಸಿ ಮನಸ್ಥಿತಿಯುಳ್ಳ, ಭ್ರಷ್ಟಾಚಾರವೆಸಗಿದ ಜನಪ್ರತಿನಿಧಿಗಳು, ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಇನ್ನಿತರ ಸರ್ಕಾರದ ಅಧಿಕಾರಿಗಳು ಯಾರೇ ಆಗಲಿ ಅವರು ಶಿಕ್ಷೆಗೆ ಅರ್ಹರಾಗಿದ್ದು, ಈ ಪ್ರಕರಣದ ಆರೋಪಿ ಸ್ಥಾನದಲ್ಲಿರುವವರನ್ನು ಗುರುತಿಸಿ ಕಂಬಿ ಹಿಂದೆ ಕಳಿಸುವ ಗುರುತರ ಜವಾಬ್ದಾರಿ ಈಗ ಸರ್ಕಾರದ ಮೇಲಿದೆ. ಈ ಅಕ್ರಮದಲ್ಲಿ ಭಾಗಿ ಆಗಿರುವ ಐಎಎಸ್, ಕೆ ಎ ಎಸ್ ಸೇರಿ ಎಲ್ಲಾ ವೃಂದ ದ ಅಧಿಕಾರಿ, ನೌಕರರನ್ನು ತಕ್ಷಣ ವೇ ಅಮಾನತು ಗೊಳಿಸಬೇಕು ಎಂದು ನೈಜ ಹೋರಾಟಗಾರರ ವೇದಿಕೆ ಆಗ್ರಹಿಸಿದೆ.
ಸಾಂಕ್ರಾಮಿಕ ರೋಗದಿಂದ ಕುಟುಂಬ ಕುಟುಂಬಗಳು ತತ್ತರಿಸಿ ಹೋಗುತ್ತಿರುವ ಸಂದರ್ಭದಲ್ಲಿ ಈ ಸಾಂಕ್ರಾಮಿಕ ರೋಗವನ್ನೇ ಹಣಗಳಿಸುವ ದಂದೆಯನ್ನಾಗಿ ಮಾಡಿಕೊಂಡ ನಯವಂಚಕ, ಗೋಮುಖ ವ್ಯಾಘ್ರ ಆರೋಪಿಗಳನ್ನು ಯಾವುದೇ ರಾಜಕೀಯ ಪಕ್ಷ, ಜಾತಿ, ಧರ್ಮ, ಪ್ರಭಾವಿಎಂದು ಗುರುತಿಸದೆ ಆರೋಪಿಗಳನ್ನು ಆರೋಪಿಗಳಾಗಿ ಗುರುತಿಸಬೇಕಾಗಿದೆ. ಇಂತಹ ಆರೋಪಿಗಳು ಈ ಸಮಾಜದಲ್ಲಿ ನಾಗರೀಕರ ಜೊತೆ ಬದುಕಲು ಅರ್ಹರ? ಎಂಬ ಪ್ರಶ್ನೆ ಈಗ ನೈಜ ಹೋರಾಟಗಾರರನ್ನು ಕಾಡುತ್ತಿದೆ.
ಈ ವಿಶೇಷ ತನಿಖಾ ತಂಡಕ್ಕೆ ಕಾಲಮಿತಿಯನ್ನು ನಿಗದಿಪಡಿಸಿ ತ್ವರಿತ ವಿಚಾರಣೆಗಾಗಿ ಫಾಸ್ಟ್ ಟ್ರ್ಯಾಕ್ ಕೋರ್ಟ್ಅನ್ನು ರಚಿಸಿ ವಿಚಾರಣೆಯನ್ನು ನಡೆಸಬೇಕು. ಮತ್ತು ಆರೋಪಿಗಳಿಗೆ ಜಾಮೀನುಗಳು ದೊರಕದಂತೆ ಮತ್ತು ಹೆಚ್ಚಿನ ಕಾಲಾವಕಾಶಗಳು ಸಿಗದಂತೆ ಕಾಲಮಿತಿಯೊಳಗೆ ಈ ಪ್ರಕರಣವನ್ನು ಇತ್ಯರ್ಥ ಗೊಳಿಸಿ ರಾಜ್ಯದ ನಾಗರೀಕರ ನೋವಿಗೆ ಸ್ಪಂದಿಸಬೇಕಾಗಿದೆ. ಇಲ್ಲದೇ ಇದ್ದಲ್ಲಿ ಈ ಪ್ರಕರಣವೂ ಸಹ ರಾಜ್ಯದ ಸಂಪನ್ಮೂಲವನ್ನು ಲೂಟಿ ಮಾಡಿದ ಗಣಿಗಾರಿಕೆ ತನಿಖೆಗೆ ಕರ್ನಾಟಕ ಲೋಕಾಯುಕ್ತವು ನೇಮಿಸಿದ ವಿಶೇಷ ತನಿಖಾ ತಂಡದಂತೆ ಆದರೆ ನ್ಯಾಯ ಸಿಗುವುದು ಮರೀಚಿಕೆಯಾಗಬಹುದು.
ಈ ಸಾಂಕ್ರಾಮಿಕ ರೋಗ ಕೋವಿಡ್ 19 ವೈದ್ಯಕೀಯ ಉಪಕರಣಗಳು ಮತ್ತು ಸಾಮಗ್ರಿಗಳ ಖರೀದಿಯಲ್ಲಿ ನಡೆಸಿದ ಭ್ರಷ್ಟಾಚಾರವನ್ನು ತನಿಖೆ ನಡೆಸಿ ಬಯಲಿಗೆಳೆದು ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಲು ಕರ್ನಾಟಕ ಉಚ್ಚ ನ್ಯಾಯಾಲಯದ ಹಾಲಿ ನ್ಯಾಯಮೂರ್ತಿಗಳ ಕಣ್ಗಾವಲಿನಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಬೇಕೆಂದು ಹಾಗೂ ಪ್ರಥಮ ವರ್ತಮಾನ ವರದಿಯನ್ನು ಆರೋಪಿಗಳು ತಪ್ಪಿಸಿಕೊಳ್ಳದ ರೀತಿಯಲ್ಲಿ ಮತ್ತು ತನಿಖೆ ನಡೆಸಿದ ನಂತರ ದೋಷಾರೋಪಣ ಪಟ್ಟಿಯನ್ನು ಕೂಡ ಯಾವುದೇ ಕಾನೂನಿನ ಅಡಿಯಲ್ಲಿ ಆರೋಪಿಗಳು ತಪ್ಪಿಸಿಕೊಳ್ಳದ ರೀತಿಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಸಾಕ್ಷಿಗಳ ಮತ್ತು ದಾಖಲೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿ ಆರೋಪಿಗಳು ಶಿಕ್ಷೆ ವಿಧಿಸುವಲ್ಲಿ ಸರ್ಕಾರವು ಮುಖ್ಯ ಪಾತ್ರ ವಹಿಸಬೇಕೆಂದು ಹಿರಿಯ ಸಾಮಾಜಿಕ ಹೋರಾಟಗಾರ, ನೈಜ್ಯ ಹೋರಾಟಗಾರರ ವೇದಿಕೆಯ ಹೆಚ್.ಎಂ.ವೆಂಕಟೇಶ್ ಇ—ಮೇಲ್ ಮೂಲಕ ಮಾಡಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಹೆಚ್.ಎಂ.ವೆಂಕಟೇಶ್ ಅವರಿಗೆ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಕುಣಿಗಲ್ ನರಸಿಂಹಮೂರ್ತಿ , ರಾಜ್ಯ ಮಾಹಿತಿ ಹಕ್ಕು ವೇದಿಕೆಯ ಎಚ್.ಎಸ್.ಸ್ವಾಮಿ, ಮಾಹಿತಿ ಅಧ್ಯಯನ ಕೇಂದ್ರದ ಮಲ್ಲಿಕಾರ್ಜುನ್ ಎಲ್.ಎಸ್ . ಹಾಗೂ ಕಾಳಜಿ ಫೌಂಡೇಶನ್ ನ ಜಿ.ಎಲ್. ನಟರಾಜ್ ಅವರು ಸಾಥ್ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q