ಉಡುಪಿ: ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣೆಯ PSI ಮತ್ತು ಸಿಬ್ಬಂದಿಗಳಿಂದ ದಲಿತ ಯುವಕ ಭಾಸ್ಕರ್ ಗಿಳಿಯಾರ್ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾರ್ಯನಿರತ ಪತ್ರಕರ್ತರ, ಸಂಪಾದಕರ ಹಾಗೂ ವರದಿಗಾರರ ಸಂಘ ಹಾಗೂ ಭೀಮವಾದ ದಲಿತ ಸಂಘರ್ಷ ಸಮಿತಿ ರಾಜ್ಯ ಸಮಿತಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆಯ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ದಲಿತ ಸಮುದಾಯದ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚುತ್ತಿದ್ದು, ಇತ್ತೀಚೆಗೆ ನಡೆದ ಘಟನೆ ಗಂಭೀರ ಸ್ವರೂಪವನ್ನು ಹೊಂದಿದೆ. 23.01.2025 ರಂದು, ಬೆಳ್ಳಂಪಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಭಾಸ್ಕರ್ ಗಿಳಿಯಾರ್, ದಲಿತ ಯುವಕ, ಯಾವುದೇ ತಪ್ಪು ಮಾಡಿದಿಲ್ಲದಿದ್ದರೂ, ಹಿರಿಯಡ್ಕ ಪೊಲೀಸ್ ಠಾಣೆಯ PSI ಮತ್ತು ಸಿಬ್ಬಂದಿಗಳಿಂದ ಹಲ್ಲೆಗೆ ಒಳಗಾದ ಘಟನೆ ನಡೆದಿದೆ. ಈ ಕೃತ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಸಂಘಟನೆಗಳು ತಿಳಿಸಿವೆ.
ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲು ಮತ್ತು ಭಾಸ್ಕರ್ ಗಿಳಿಯಾರ್ ಅವರಿಗೆ ನ್ಯಾಯ ಒದಗಿಸಲು ನೀವು ತಕ್ಷಣವೇ ಕ್ರಮ ಕೈಗೊಳ್ಳಬೇಕಾಗಿ ವಿನಂತಿಸುತ್ತೇವೆ. ಇದು ದಲಿತ ಸಮುದಾಯದ ನ್ಯಾಯ, ಹಕ್ಕು ಮತ್ತು ಗೌರವವನ್ನು ಹಾಳುಮಾಡುವ ಮತ್ತೊಂದು ಘಟನೆ ಎಂದು ನಾವು ಪರಿಗಣಿಸುತ್ತೇವೆ, ಇದನ್ನು ಗಮನದಲ್ಲಿಟ್ಟುಕೊಂಡು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಸಮಾಜ ಕಲ್ಯಾಣ ಆಯುಕ್ತರು ಈ ಪ್ರಕರಣವನ್ನು ಸೂಕ್ತ ಮಟ್ಟದಲ್ಲಿ ಪರಿಶೀಲಿಸಿ, ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಾವು ಮನವಿ ಮಾಡುತ್ತೇವೆ ಎಂದು ಸಂಘಟನೆಯ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.
ಇಲ್ಲದೆ, ನಮ್ಮ ಕಾರ್ಯನಿರತ ಪತ್ರಕರ್ತರ, ಸಂಪಾದಕರ ಹಾಗೂ ವರದಿಗಾರರ ಸಂಘದ ವತಿಯಿಂದ ಈ ವಿಷಯವನ್ನು ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ. ಮಹದೇವಪ್ಪ ಅವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ವೇಳೆ ರಾಜ್ಯದ ಅಧ್ಯಕ್ಷ ಶಶಿಕಾಂತ್ ಕಾಂಬ್ಳೆ, ಬೆಂಗಳೂರು ನಗರದ ಗೌರವ ಅಧ್ಯಕ್ಷ ಯಶಶ್ವಿನಿ ಬಿ, ಸಲಹಾ ಸಮಿತಿ ಅಧ್ಯಕ್ಷ ಸಂಜಯ್ ಸಾವಂತ್, ಬೆಂಗಳೂರು ವಿಭಾಗೀಯ ಅಧ್ಯಕ್ಷ ವಿಜಯ್, ಮೈಸೂರು ಜಿಲ್ಲಾ ಅಧ್ಯಕ್ಷ ಕೀರ್ತಿಕೇಶ್ವರ, ರಾಮನಗರ ಜಿಲ್ಲಾ ಅಧ್ಯಕ್ಷ ಅಭಿಲಾಷ್, ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.
ನೀವು ತ್ವರಿತ ಕ್ರಮ ಕೈಗೊಂಡು ದಲಿತ ಸಮುದಾಯದ ಹಕ್ಕುಗಳ ಪರ ತೀರ್ಮಾನ ತೆಗೆದುಕೊಳ್ಳುವಂತೆ ನಮ್ಮ ಸಂಘದ ಪರವಾಗಿ ವಿನಂತಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx