ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಗ್ಯಾರಘಟ್ಟ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಶುದ್ದ ಜಲ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮೊದಲಿಗೆ ಗ್ಯಾರಘಟ್ಟ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಊರಿನ ಮುಖಂಡರು ಹಾಗೂ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕರ್ತರಿಂದ ಗ್ರಾಮದ ಬೀದಿ,ಬೀದಿಗಳಲ್ಲಿ ಶುದ್ದಜಲದ ಜಾಥಾವನ್ನು ನಡೆಸಿ ಗ್ರಾಮಸ್ಥರಿಗೆ ಶುದ್ದ ಕುಡಿಯುವ ನೀರಿನ ಬಗ್ಗೆ ಅರಿವು ಮೂಡಿಸಲಾಯಿತು.
ನಂತರ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಆರೋಗ್ಯ ಇಲಾಖೆಯ ಅಧಿಕಾರಿಯಾದ ಶ್ರೀನಿವಾಸ್, ನಮ್ಮ ದೇಶದ ಸುಮಾರು ಗ್ರಾಮಗಳಲ್ಲಿ ಶುದ್ದ ನೀರಿನ ಬಗ್ಗೆ ಅರಿವಿಲ್ಲದೆ ಮೂಢನಂಬಿಕೆಗಳಿಂದ ಶುದ್ದೀಕರಿಸದ ಕೆರೆ ಕಟ್ಟೆ ಹಾಗೂ ಪ್ಲೋರೈಡ್ ಯುಕ್ತ ನೀರನ್ನು ಕುಡಿದು ಕಾಲಾರ, ಅತಿಸಾರ ಹಾಗೂ ಮಾರಾಣಾಂತಿಕ ವಿವಿಧ ಬಗೆಯ ಜ್ವರಗಳಿಗೆ ತುತ್ತಾಗಿ ಜನರು ತಮ್ಮ ಜೀವವನ್ನು ಚೆಲ್ಲುತ್ತಿದ್ದಾರೆ. ಆದ್ದರಿಂದ ದಯವಿಟ್ಟು ಸರ್ಕಾರದ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಗ್ರಾಮ ಮಟ್ಟದಲ್ಲಿ ತೆರೆದಿದ್ದು, ಸದರಿ ಘಟಕಗಳಿಂದ ಶುದ್ದೀಕರಿಸಿದ ನೀರನ್ನು ಕುಡಿದು ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು ಎಂಬ ತಿಳುವಳಿಕೆಯನ್ನು ನೆರೆದ ಜನತೆಗೆ ಮೂಡಿಸಿದರು.
ನಾವು ಕುಡಿಯುವ ನೀರಿನ TDS ಮಟ್ಟ 50 ರಿಂದ 250 ಇದ್ದರೆ ಅದು ಆರೋಗ್ಯಕರವಾದ ಹಾಗೂ ಕುಡಿಯಲು ಯೋಗ್ಯವಾದ ನೀರಾಗಿರುತ್ತದೆ ಎಂದು ತಿಳಿಸಿದರು.
ಜೊತೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಪ್ರತಿ ಕ್ಷೇತ್ರದಲ್ಲೂ ಮಾಡುತ್ತಿರುವ ಜನಸೇವೆಯನ್ನು ಶ್ಲಾಘಿಸಿದರು. ಬಳಿಕ ಗ್ಯಾರಘಟ್ಟ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಮೂರ್ತಿರವರು ಮಾತನಾಡಿ, ಪಂಚಭೂತಗಳಲ್ಲಿ ಬಹುಮುಖ್ಯ ಸ್ಥಾನವನ್ನು ಹೊಂದಿರುವ ನೀರಿನ ಬಗೆಗಿನ ಅರಿವು ಹಳ್ಳಿ ಜನಾಂಗಗಳಿಗೆ ಹಾಗೂ ಬುಡಕಟ್ಟು ಜನಾಂಗದವರಿಗೆ ಈಗಲೂ ಅರಿವಿಲ್ಲ, ಅದರ ಪರಿಣಾಮವಾಗಿ ಜನರು ಅನೇಕ ರೀತಿಯ ರೋಗರುಜನೆಗಳಿಂದ ಬಳಲುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸರಕಾರ ಅನೇಕ ಕಾರ್ಯಕ್ರಮಗಳನ್ನು ನಡೆಸಿದರೂ ಹೆಚ್ಚಿನ ಫಲ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಿಪಟೂರು ತಾಲ್ಲೂಕಿನ ಯೋಜನಾಧಿಕಾರಿಗಳಾದ ಉದಯ್ ಕೆ.ಮಾತನಾಡಿ, ಗ್ರಾಮಭಿವೃದ್ದಿ ಯೋಜನೆಯು ಸರಕಾರದ ಸಹಯೋಗದೊಂದಿಗೆ ರಾಜ್ಯಾದ್ಯಂತ ಇದುವರೆಗೂ 530 ಶುದ್ದ ನೀರಿನ ಘಟಕಗಳನ್ನು ಪ್ರಾರಂಭಿಸಿ ಗ್ರಾಮ ಮಟ್ಟದಲ್ಲಿರುವ ಮುಗ್ದ ಜನರ ಆರೋಗ್ಯದ ಕಾಳಜಿಗೆ ಅವಿರತ ಶ್ರಮಿಸುತ್ತಿದೆ, ಇಷ್ಟಲ್ಲದೆ ತುಮಕೂರು ಜಿಲ್ಲೆಯಲ್ಲಿ 94 ಶುದ್ದ ಗಂಗಾ ಘಟಕಗಳನ್ನು ಹಾಗೂ ತಿಪಟೂರು ತಾಲ್ಲೂಕಿನಲ್ಲಿ 25 ಶುದ್ದ ಗಂಗಾ ಘಟಕಗಳನ್ನು ಪ್ರಾರಂಭಿಸಿದ್ದು, ದಯವಿಟ್ಟು ಹಳ್ಳಿಯ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಯಾದ ಜಾಪರ್, ಗ್ಯಾರಘಟ್ಟ ಗ್ರಾಮ ಪಂಚಾಯತ್ ಸದಸ್ಯರಾದ ಮೋಹನ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಿಪಟೂರು ತಾಲ್ಲೂಕಿನ ಶುದ್ದಗಂಗಾ ಮೇಲ್ವಿಚಾರಕರಾದ ಲೋಕೇಶ್, ಕೃಷಿ ಮೇಲ್ವಿಚಾರಕರಾದ ಪ್ರಮೋದ್, ಹೊನ್ನವಳ್ಳಿ ವಲಯ ಮೇಲ್ವಿಚಾರಕರಾದ ಪರಶಿವಮೂರ್ತಿ, ವಲಯದ ಎಲ್ಲಾ ಸೇವಾಪ್ರತಿನಿಧಿಗಳು, CSC ಸೇವಾದರರು, ಸಂಘದ ಪಾಲುದಾರರು, ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx