ತುಮಕೂರು: ಪ್ರತಿನಿತ್ಯ ದೈಹಿಕ ಚಟುವಟಿಕೆಗಳನ್ನು ರೂಢಿಸಿಕೊಳ್ಳುವುದರಿಂದ ಮಧುಮೇಹ ರೋಗವನ್ನು ನಿಯಂತ್ರಣ ಮಾಡಲು ಸಾಧ್ಯವೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ತಿಳಿಸಿದರು.
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ವತಿಯಿಂದ “ವಿಶ್ವ ಮಧುಮೇಹ ದಿನಾಚರಣೆ” ಅಂಗವಾಗಿ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸೈಕಲ್ ಜಾಥಾ ಹಾಗೂ ತಂಬಾಕು ಮುಕ್ತ ಅಭಿಯಾನ 2.0 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಧುಮೇಹ ಒಮ್ಮೆ ಬಂದರೆ ಜೀವನ ಪರ್ಯಂತ ಹೆಣಗಬೇಕಾದ ಗುಣವಾಗದ ಖಾಯಿಲೆ. ನಿಯಮಿತ ಧ್ಯಾನ, ವ್ಯಾಯಾಮ, ಒತ್ತಡ ರಹಿತ ಜೀವನ, ಆಹಾರ ಪದ್ಧತಿ, ಜೀವನಶೈಲಿ ಬದಲಾವಣೆಯಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಸುಮಾರು 30–40 ವರ್ಷಗಳ ಹಿಂದೆ ಕಡಿಮೆ ಪ್ರಮಾಣದಲ್ಲಿ ಕಂಡು ಬರುತ್ತಿದ್ದ ಮಧುಮೇಹ ರೋಗವು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಎಲ್ಲಾ ಕೆಲಸಗಳಿಗೂ ಯಂತ್ರಗಳ ಬಳಕೆ, ದೈಹಿಕ ಶ್ರಮವಿಲ್ಲದ ಕೆಲಸಗಳಿಂದ ಮಧುಮೇಹಗಳ ಸಂಖ್ಯೆ ಹೆಚ್ಚಾಗಲು ಕಾರಣ. ಹೊರಗಡೆ ಲವಲವಿಕೆಯಿಂದ ಆಡಬೇಕಾದ ಮಕ್ಕಳು ಮನೆಯಲ್ಲೇ ಕುಳಿತು ಮೊಬೈಲ್, ಕಂಪ್ಯೂಟರ್, ಟಿವಿ ನೋಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಆಟೋಟದಲ್ಲಿ ಮಕ್ಕಳ ಪಾಲ್ಗೊಳ್ಳುವಿಕೆ ಕಡಿಮೆಯಾಗುತ್ತಿದೆ. ದೇಹ ದಂಡನೆಯಿಲ್ಲದ ಜೀವನ ಶೈಲಿ ರೋಗಗಳಿಗೆ ಆಹ್ವಾನ ನೀಡಿದಂತೆ. ಬಾಲ್ಯದಲ್ಲಿಯೇ ಮಕ್ಕಳಿಗೆ ವ್ಯಾಯಾಮ, ಧ್ಯಾನ, ಕ್ರೀಡಾಸಕ್ತಿಯನ್ನು ಬೆಳೆಸುವುದರಿಂದ ಭವಿಷ್ಯದಲ್ಲಿ ರೋಗ ಮುಕ್ತ ಜೀವನ ಅವರದಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ರಾಮೇಗೌಡ ಮಾತನಾಡಿ, ದೇಶದಲ್ಲಿ ಸಕ್ಕರೆ ಖಾಯಿಲೆ ಪೀಡಿತರ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೋಗವನ್ನು ನಿಯಂತ್ರಿಸಲು ಜನಜಾಗೃತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುವ ಸ್ಥಿತಿಯೇ ಸಕ್ಕರೆ ಖಾಯಿಲೆ/ಡಯಾಬಿಟೀಸ್/ಮಧುಮೇಹ ರೋಗ. ದೇಹದಲ್ಲಿನ ಸಕ್ಕರೆ ಅಂಶವನ್ನು ದೇಹ ಉಪಯೋಗಿಸಿಕೊಳ್ಳಲು ಇನ್ಸುಲಿನ್ ಅವಶ್ಯ. ಆದರೆ ದೇಹ ಸಾಕಷ್ಟು ಇನ್ಸುಲಿನ್ ತಯಾರಿಸದಿದ್ದಾಗ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ ಸಕ್ಕರೆ ಖಾಯಿಲೆ ಬರುತ್ತದೆ ಎಂದು ಹೇಳಿದರು.
ಜಿಲ್ಲಾ ಶಸ್ತçಚಿಕಿತ್ಸಕ ಡಾ: ಅಸ್ಗರ್ ಬೇಗ್ ಮಾತನಾಡಿ, 1921ರಲ್ಲಿ ಕೆನಡಾದ ಮೂಳೆ ಶಸ್ತ್ರ ಚಿಕಿತ್ಸಕ ಡಾ.ಫ್ರೆಡೆರಿಕ್ ಜಿ. ಬ್ಯಾಂಟಿಂಗ್ ಅವರು ಇನ್ಸುಲಿನ್ ಅನ್ನು ಸಂಶೋಧನೆ ಮಾಡಿ ಮಧುಮೇಹ ಕಾಯಿಲೆಗೆ ಕೊಡುಗೆ ನೀಡಿದ್ದಾರೆ. ಇನ್ಸುಲಿನ್ ಔಷಧಿಯಿಂದ ಹಲವಾರು ಮಧುಮೇಹ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಜನ್ಮ ದಿನದ ಅಂಗವಾಗಿ ಮಧುಮೇಹ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಹೇಳಿದರು.
2030ರ ಹೊತ್ತಿಗೆ ವಿಶ್ವದ ಸುಮಾರು 70-80 ಕೋಟಿ ಜನರು ಈ ಖಾಯಿಲೆಯಿಂದ ಬಳಲುತ್ತಾರೆ ಎಂದು ಅಂದಾಜಿಸಲಾಗಿದೆ. ಜನರಲ್ಲಿ ಅರಿವು ಮೂಡಿಸಿ ಈಗಾಲೇ ಎಚ್ಚರಿಕೆ ತೆಗೆದುಕೊಂಡು ಕಾಯಿಲೆಗೆ ಕಡಿವಾಣ ಹಾಕಬೇಕು ಎಂದರು.
ಜಾಥಾ ಕಾರ್ಯಕ್ರಮವನ್ನು “Diabetes and well–being” ಎಂಬ ಘೋಷವಾಕ್ಯದೊಂದಿಗೆ ನಗರದ ಜಿಲ್ಲಾ ಆಸ್ಪತ್ರೆ ಆವರಣದಿಂದ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದವರೆಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಶೇಖರ್, ಸ್ಥಾನಿಕ ವೈದ್ಯಾಧಿಕಾರಿ ಡಾ.ಚೇತನ್, ತಾಲೂಕು ಆರೋಗ್ಯ ಅಧಿಕಾರಿ ಡಾ: ಲಕ್ಷ್ಮೀಕಾಂತ್, ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಹೆಚ್. ಬಿ. ಪ್ರಕಾಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಚಿದಾನಂದಪ್ಪ, ಎನ್‌ಸಿಸಿ, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296