ತುಮಕೂರು: ಡಿಜಿಟಲ್ ಕೌಶಲ್ಯಗಳನ್ನು ಹೆಚ್ಚಾಗಿ ರೂಢಿಸಿಕೊಂಡರೆ ಮಾಧ್ಯಮರಂಗದಲ್ಲಿ ಉತ್ತಮ ಭವಿಷ್ಯವಿದೆ. ಇದರೊಂದಿಗೆ ಪ್ರಚಲಿತ ವಿದ್ಯಮಾನಗಳ ತಿಳುವಳಿಕೆ, ಉತ್ತಮ ಭಾಷಾಜ್ಞಾನಕೂಡ ಮುಖ್ಯ ಎಂದು ದೂರದರ್ಶನ ಕೇಂದ್ರದ ಹಿರಿಯ ವಾರ್ತಾವಾಚಕಿ ಚೇತನಾ ರಾಜೇಂದ್ರ ತಿಳಿಸಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ‘ಮಾಧ್ಯಮರಂಗದ ಉದ್ಯೋಗಾವಕಾಶಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಡಿಜಿಟಲ್ ಸಾಧ್ಯತೆಗಳಿಂದಾಗಿ ಮಾಧ್ಯಮರಂಗ ವಿಸ್ತಾರವಾಗಿ ಬೆಳೆದಿದೆ; ಆದರೆ ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಬದಲಾಗಬೇಕಿದೆ ಎಂದರು.
ಮಾಧ್ಯಮದ ವ್ಯಾಪ್ತಿ ಮತ್ತು ಪರಿಭಾಷೆ ಬದಲಾಗಿದೆ. ಸಾಂಪ್ರದಾಯಿಕ ಪತ್ರಿಕೋದ್ಯಮ ಬದಲಾವಣೆ ಹೊಂದಿಡಿಜಿಟಲ್ ನ ವಿವಿಧ ಆಯಾಮಗಳು ಬದುಕನ್ನು ಆವರಿಸಿಕೊಂಡಿದೆ. ಜಾಹೀರಾತು, ಸಾರ್ವಜನಿಕ ಸಂಪರ್ಕ, ಕಾರ್ಪೋರೇಟ್ ಸಂವಹನ, ಗ್ರಾಫಿಕ್ಸ್ ಮತ್ತು ಅನಿಮೇಶನ್, ಡಿಜಿಟಲ್ ಮಾರ್ಕೆಟಿಂಗ್,ಈವೆಂಟ್ ಮ್ಯಾನೇಜ್ಮೆಂಟ್, ಮೀಡಿಯಾ ಪ್ಲಾನಿಂಗ್, ಬ್ರಾಂಡಿಂಗ್, ಕಂಟೆಂಟ್ ರೈಟಿಂಗ್ ನಂತಹ ಕ್ಷೇತ್ರಗಳತ್ತ ಯುವಕರು ಗಮನ ಹರಿಸಬೇಕು ಎಂದರು.
ಭಾಷೆ ಎಲ್ಲದಕ್ಕೂ ಜೀವಾಳ. ಉತ್ತಮ ಪುಸ್ತಕಗಳು ಹಾಗೂ ದಿನಪತ್ರಿಕೆಗಳನ್ನು ಪ್ರತಿದಿನ ಓದುವುದರಿಂದ ಭಾಷಾಕೌಶಲ್ಯ ಬೆಳೆಯುತ್ತದೆ, ತಿಳುವಳಿಕೆ ವಿಸ್ತಾರವಾಗುತ್ತದೆ. ರಾಷ್ಟ್ರೀಯ,ಅಂತಾರಾಷ್ಟ್ರೀಯ ಮಟ್ಟದ ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ವಿದ್ಯಮಾನಗಳನ್ನು ತಿಳಿದುಕೊಂಡರೆ ಮಾತ್ರ ಉತ್ತಮ ಪತ್ರಕರ್ತರಾಗಿ ಬೆಳೆಯಬಹುದು ಎಂದರು.
ಹೊಸ ತಂತ್ರಜ್ಞಾನಗಳನ್ನು ಕಲಿತುಕೊಳ್ಳುವುದರಲ್ಲಿ, ಜತೆಜತೆಗೆ ಸಾಂಪ್ರದಾಯಿಕ ಮೌಲ್ಯಗಳಾದ ನಿಖರತೆ, ನ್ಯಾಯಪರತೆ ಹಾಗೂ ಪ್ರಾಮಾಣಿಕತೆಗಳನ್ನು ಎತ್ತಿಹಿಡಿಯುವುದರಲ್ಲಿ ಮಾಧ್ಯಮರಂಗದ ಭವಿಷ್ಯ ನಿಂತಿದೆ ಎಂದರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಸಿಬಂತಿ ಪದ್ಮನಾಭ ಕೆ.ವಿ. ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಸಿದ್ಧಪಡಿಸಿದ ಭಿತ್ತಿಪತ್ರಿಕೆಗಳನ್ನು ಅನಾವರಣಗೊಳಿಸಲಾಯಿತು. ಉಪನ್ಯಾಸಕರಾದ ಕೋಕಿಲ ಎಂ.ಎಸ್., ಹರೀಶ್ ಕುಮಾರ್ ಬಿ.ಸಿ., ಮನೋಜಕುಮಾರಿ ಬಿ., ವಿಶಾಲ್ ಮಯೂರ್ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q