ಬೀದರ್: ಕೊಡಗು, ಹಾಸನ, ಚಿಕ್ಕಮಗಳೂರು ಸುತ್ತಮುತ್ತ ಕಾಡಿನಿಂದ ಹೊರಬಂದು ಗುಂಪಾಗಿ ಸಂಚರಿಸುವ ಕೆಲವು ಆನೆಗಳಿಂದ ಸಮಸ್ಯೆ ಹೆಚ್ಚಾಗಿದ್ದು, 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭದ್ರಾ ಅಭಯಾರಣ್ಯದಲ್ಲಿ ಆನೆ ಧಾಮ ನಿರ್ಮಿಸಲು ಯೋಜಿಸಲಾಗಿದೆ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.
ಆನೆ ಧಾಮದಲ್ಲಿ ಆನೆಗಳಿಗೆ ಅಗತ್ಯ ಆಹಾರ, ನೀರು ಲಭ್ಯವಾಗುವಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಕಾಡಿನ ಹೊರಗೆ ಓಡಾಡುವ 150ಕ್ಕೂ ಹೆಚ್ಚು ಆನೆಗಳನ್ನು ಗುರುತಿಸಲಾಗಿದ್ದು, ಮಿನಿ ಖೆಡ್ಡಾ ಕಾರ್ಯಾಚರಣೆ ರೂಪದಲ್ಲಿ ಆನೆಗಳನ್ನು ಧಾಮಕ್ಕೆ ಕಳುಹಿಸಬೇಕಾಗುತ್ತದೆ. ಆದರೆ ಇದಕ್ಕೆ ಕಾಲಾವಕಾಶ ಬೇಕಾಗುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿನ್ನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನಲ್ಲಿ ಒಬ್ಬ ಯುವಕ ಮತ್ತು ಇಂದು ಕೋಲಾರ ಜಿಲ್ಲೆ ಕಾನಸಮುದ್ರದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ತೀವ್ರ ನೋವು ತಂದಿದೆ. ಮೃತರ ಕುಟುಂಬದೊಂದಿಗೆ ಸರ್ಕಾರ ಇದೆ. ಅವರ ನೋವಿನಲ್ಲಿ ನಾವೂ ಭಾಗಿಯಾಗಿದ್ದೇವೆ ಎಂದು ಹೇಳಿದ್ದಾರೆ.
ಮೃತರ ಹತ್ತಿರದ ಸಂಬಂಧಿಕರಿಗೆ ಕೂಡಲೇ ಪರಿಹಾರದ ಮೊತ್ತ ನೀಡಲು ಸೂಚಿಸಲಾಗಿದೆ. ಈ ಎಲ್ಲ ದುರ್ಘಟನೆಗಳು ಬೆಳಗಿನ ಮತ್ತು ಸಂಜೆಯ ವೇಳೆ ಸಂಭವಿಸುತ್ತಿವೆ. ಕಾಡಿನಂಚಿನ ಜನರು ಅರಣ್ಯ ಇಲಾಖೆಯು ಆನೆಗಳ ಚಲನವಲನದ ಬಗ್ಗೆ ನೀಡುವ ಸಂದೇಶಕ್ಕೆ ಸ್ಪಂದಿಸಿ, ಜಾಗರೂಕರಾಗಿರಬೇಕು ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4