ಔರಾದ್ (ಬಿ): ಬೀದರ್ ಜಿಲ್ಲೆಯ ಔರಾದ ತಾಲೂಕಿನ ಬಾದಲಗಾಂವ ಗ್ರಾಮ ಪಂಚಾಯತ್ ವ್ಯಾಪ್ತಿಯ ಭವಾನಿ ನಗರ ತಾಂಡಾದಲ್ಲಿ ಕುಡಿಯುವ ನೀರಿಗಾಗಿ ಜನತೆ ನಡೆಸುತ್ತಿರುವ ಹೋರಾಟ ಅಕ್ಷರಶಃ ನರಕಯಾತನೆಯಾಗಿದೆ. ಹನಿ ನೀರಿಗಾಗಿ ಮಧ್ಯಾಹ್ನದ ಕೆಂಡ ಕಾರುವ ಬಿಸಿಲಿನಲ್ಲಿ ಮಹಿಳೆಯರು ಮತ್ತು ಮಕ್ಕಳು 2-3 ಕಿಲೋಮೀಟರ್ ದೂರದ ಕೊಳವೆ ಬಾವಿಗಳಿಗೆ ಅಲೆದಾಡುತ್ತಿರುವುದು ಪಂಚಾಯತ್ ಆಡಳಿತದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಇಒ (EO) ಸಾಹೇಬರೇ, ನಿದ್ದೆ ಸಾಕು ಮಾಡಿ!
ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿದರೂ ಸ್ಪಂದಿಸದ ಸ್ಥಳೀಯ ಅಧಿಕಾರಿಗಳ ವೈಫಲ್ಯದ ಹೊಣೆಯನ್ನು ಈಗ ತಾಲೂಕು ಪಂಚಾಯತ್ ಇಒ ವಹಿಸಿಕೊಳ್ಳಲೇಬೇಕು. ಕಚೇರಿಯಲ್ಲೇ ಕುಳಿತು ಎಸಿ ಗಾಳಿ ತಿನ್ನುವ ಅಧಿಕಾರಿಗಳಿಗೆ, ಬಿಸಿಲಿನಲ್ಲಿ ನೀರಿಗಾಗಿ ಕಿಲೋಮೀಟರ್‌ಗಟ್ಟಲೆ ಅಲೆಯುವ ಜನಸಾಮಾನ್ಯರ ನೋವು ಕಾಣುತ್ತಿಲ್ಲವೇ? ಇಒ ಅವರ ಮೌನ ಮತ್ತು ನಿರ್ಲಕ್ಷ್ಯವೇ ಈ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ ಎಂದು ಮಾಜಿ ಪಟ್ಟಣ ಪಂಚಾಯತ್ ಸದಸ್ಯ ಬಂಟಿ ದರ್ಬಾರೆ ಅವರು ನೇರವಾಗಿ ತಾಲೂಕು ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಜನರ ಅಳಲು ಕೇಳಿದ ಬಂಟಿ ದರ್ಬಾರೆ, “ಇಒ ಸಾಹೇಬರೇ, ಜನರ ತಾಳ್ಮೆ ಪರೀಕ್ಷಿಸಬೇಡಿ. ಕೂಡಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ. ಇಲ್ಲವಾದರೆ ಇನ್ನು ಮುಂದೆ ಪ್ರತಿಭಟನೆ ನಿಮ್ಮ ಕಚೇರಿಗೂ ಸೀಮಿತವಾಗುವುದಿಲ್ಲ, ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ,” ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ನೀರಿಗಾಗಿ ತಾಂಡಾದ ಜನರು ರೊಚ್ಚಿಗೆದ್ದಿದ್ದು, ಕೂಡಲೇ ಕ್ರಮ ಕೈಗೊಳ್ಳದಿದ್ದರೆ ತೀವ್ರ ಸ್ವರೂಪದ ಹೋರಾಟ ಖಚಿತ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


