ಬಹಳ ಹಿಂದೆ ಸುರಪುರವೆಂಬ ಊರಿನಲ್ಲಿ ಶಂಭು ಎಂಬ ಬಡವನಿದ್ದ. ಇವನು ಮಹಾನ್ ದೈವ ಭಕ್ತ. ಪ್ರತಿದಿನ ದೇವರನ್ನು ಪ್ರಾರ್ಥಿಸದೆ ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಇವನ ಭಕ್ತಿಗೆ ದೇವರೂ ಕೂಡ ಸಂಪ್ರೀತನಾಗಿದ್ದನು. ಶಂಭು ಮೇಕೆಗಳನ್ನು ಸಾಕಿದ್ದ, ಪ್ರತಿದಿನ ಕಾಡಿನ ಸಮೀಪ ಕರೆದುಕೊಂಡು ಹೋಗಿ ಮೇಯಿಸಿಕೊಂಡು, ಹೊಳೆಯಲ್ಲಿ ನೀರು ಕುಡಿಸಿಕೊಂಡು ಬರುತ್ತಿದ್ದ. ಇವನ ಬಳಿ ಮೇಕೆಕೊಳ್ಳಲು ಅಕ್ಕಪಕ್ಕದ ಜನರು ಬರುತ್ತಿದ್ದರು ವ್ಯಾಪಾರದಿಂದ ಬರುವ ಹಣದಿಂದ ತಕ್ಕಮಟ್ಟಿನ ಜೀವನ ನಡೆಸುತ್ತಿದ್ದ.
ಹೀಗೆಯೇ ಹಲವು ದಿನಗಳು ಕಳೆದವು. ಶಂಭುವಿನ ಹಣೆಬರಹದಂತೆ ಕೆಟ್ಟದಿನಗಳು ಬರಲು ಪ್ರಾರಂಭವಾದವು. ಆಗ ವೈಕುಂಠದಲ್ಲಿ ದೇವಿ ದೇವನಲ್ಲಿ ಕೇಳುತ್ತಾಳೆ ಹೇ ದೇವ ಶಂಭು ನಿಮ್ಮ ಪರಮ ಭಕ್ತ ಅವನಿಗೆ ಕಷ್ಟಗಳನ್ನು ಎದುರಿಸುವ ಶಕ್ತಿ ಇಲ್ಲ, ಅವನನ್ನು ಕಾಪಾಡುವ ಹೊಣೆ ನಿಮ್ಮದಲ್ಲವೇ ಎಂದಾಗ ದೇವನು ಹೌದು ದೇವಿ ನೀನು ಹೇಳುವುದು ಸರಿಯಾಗಿದೆ. ಆದರೆ ಅವನ ಹಣೆ ಬರಹ ಅವನು ಅನುಭವಿಸಲೇ ಬೇಕು ಅಲ್ಲವೇ ಎಂದಾಗ, ದೇವಿಯು ಆದರೂ ಕಡೆಯಪಕ್ಷ ಅವನಿಗೆ ಸಹಾಯ ಮಾಡಬಹುದಲ್ಲವೇ ಎಂದಾಗ ದೇವನು ಹಾಗಾದರೆ ಅವನಿಗೆ ಸಹಾಯ ಮಾಡುತ್ತೇನೆ, ಆದರೆ ಅದರ ಮುಂದಿನ ಘಟನೆಗಳನ್ನು ನೋಡುತ್ತಿರು ಅದು ನಿನಗೇ ತಿಳಿಯುವುದು ಎಂದಾಗ ದೇವಿ ಆಶ್ಚರ್ಯದಿಂದ ನೋಡುತ್ತಾಳೆ.
ಇತ್ತ ಸುರಪುರಕ್ಕೆ ಪಕ್ಕದ ಹಳ್ಳಿಯಂದ ದೊಡ್ಡ ದೊಡ್ಡ ಸಾಹುಕಾರರು ಬಂದು ಹಳ್ಳಿಯ ಜಾತ್ರೆಯ ನಿಮಿತ್ತ ಶಂಭುವಿನ ಬಳಿ ಇದ್ದ ಎಲ್ಲಾ ಮೇಕೆಗಳನ್ನು ಕೊಂಡುಕೊಂಡು ಹೋಗಿಬಿಟ್ಟರು. ಇದರಿಂದ ಶಂಭುವಿಗೆ ಪರಮಾಶ್ಚರ್ಯವಾಯಿತು. ಹೇ ದೇವ ಎಲ್ಲಿಯೋ ಒಂದೊಂದು ವ್ಯಾಪಾರವಾಗುತ್ತಿದ್ದ ನನಗೆ ನಿನ್ನ ಕರುಣೆಯಿಂದ ನನ್ನ ಬಳಿ ಇದ್ದ ಎಲ್ಲಾ ಮೇಕೆಗಳು ಒಟ್ಟಿಗೆ ವ್ಯಾಪಾರವಾದವು ನಿನಗೆ ಅನಂತ ಕೋಟಿ ನಮನಗಳು ಎಂದು ನಮಿಸುತ್ತಾ ಅತ್ಯಧಿಕ ಲಾಭ ಬಂದ ಸಂತೋಷದಲ್ಲಿ ಮತ್ತಷ್ಟು ಮೇಕೆಮರಿಗಳನ್ನು ಕೊಂಡುಕೊಳ್ಳಲು ಪಟ್ಟಣದ ಸಂತೆಗೆ ಹೋದನು. ಅಲ್ಲಿ ಸಾಕಷ್ಟು ಮೇಕೆಮರಿಗಳನ್ನು ಕೊಂಡುಕೊಂಡು ಊರಿಗೆ ಬಂದನು. ಅವನ ದುರಾದೃಷ್ಟವಶಾತ್ ಕೆಲವೇ ದಿನಗಳಲ್ಲಿ ಮೇಕೆ ಮರಿಗಳಿಗೆ ವಿಚಿತ್ರ ಖಾಯಿಲೆ ಬಂದು ಒಂದೊಂದೇ ಒಂದೊಂದೆ ಪ್ರಾಣ ಬಿಡಲು ಪ್ರಾರಂಭಿಸಿದವು. ಹೀಗೆಯೇ ಅವನು ತಂದಿದ್ದ ಎಲ್ಲಾ ಮರಿಗಳು ಪ್ರಾಣಬಿಟ್ಟವು. ಇದರಿಂದ ದುಃಖಿತನಾದ ಶಂಭು ಊರ ಹೊರವಲದ ದೇವಾಲಯದ ಮೆಟ್ಟಿಲಮೇಲೆ ಕುಳಿತು ಹೇ ದೇವ ನಾನೇನು ಪಾಪ ಮಾಡಿದ್ದೆ, ಒಳ್ಳೆಯ ವ್ಯಾಪಾರ ಆಗಿತ್ತು, ಆದರೆ ಎಲ್ಲವೂ ಹೋಯಿತು, ಹೀಗೆ ಕೊಟ್ಟೆ ಹಾಗೆ ಕಸಿದುಕೊಂಡೆ, ನನಗೆ ಮಾತ್ರ ಹೀಗೇನಾ? ಚೆನ್ನಾಗಿರುವವರು ಚೆನ್ನಾಗಿಯೇ ಇದ್ದಾರೆ ನನಗೆ ಮಾತ್ರ ಏಕೆ ಹೀಗೆ, ನಾನು ನಿನ್ನ ಭಕ್ತ ನನಗೇಕೆ ಹೀಗೆ ಮಾಡಿದೆ; ಎಂದು ರೋದಿಸುತ್ತಿರುವಾಗ ಇತ್ತ ದೇವಿಯು ಹೌದು ಪ್ರಭು ಅವನು ಹೇಳುತ್ತಿರುವುದು ಸರಿಯಾಗಿಯೇ ಇದೆ ಹೀಗೆ ಕೊಟ್ಟು ಹಾಗೆ ಏಕೆ ಕಸಿದುಕೊಂಡಿರಿ ಎಂದಾಗ ದೇವನು ಮುಗುಳ್ನಕ್ಕು ನೋಡು ದೇವಿ ನೀನು ಹೇಳಿದಂತೆ ನಾನು ಅವನಿಗೆ ಸಹಾಯ ಮಾಡಿರುವೆನು. ಮುಂದಿನ ಕಷ್ಟ ಎದುರಿಸಲು ನಾನು ಅವನಿಗೆ ಮೊದಲೇ ಸಾಕಷ್ಟು ಹಣ ಸಿಗುವ ಹಾಗೆ ಮಾಡಿದೆ.
ಎಲ್ಲವೂ ಒಟ್ಟಿಗೆ ವ್ಯಾಪಾರ ಆಗುವಂತೆ ಮಾಡಿ ಅವನಿಗೆ ಅತ್ಯಧಿಕ ಹಣ ದೊರಕುವಹಾಗೆ ಮಾಡಿದೆ. ಆದರೆ ಅವನ ಹಣೆಬರಹ ಅನುಭವಿಸಬೇಕಾಗಿತ್ತು ಅದಕ್ಕಾಗೆ ಅವನಿಗೆ ಎರಡನೇ ಬಾರಿ ಮರಿಗಳಿಗೆ ಖಾಯಿಲೆ ಬಂದು ನಷ್ಟವಾಯಿತು. ಆದರೂ ಕೆಲದಿನಗಳವರೆಗೆ ಅವನು ಜೀವನ ನಡೆಸುಷ್ಟು ಹಣ ಅವನಿಗೆ ನೀಡಿರುವೆನು. ಈ ಮೊದಲು ಅವನಿಗೆ ವ್ಯಾಪಾರದಲ್ಲಿ ಲಾಭ ಬರುವ ಹಾಗೆ ಮಾಡದೇ ಕೇವಲ ಅವನ ಬಳಿ ಇದ್ದ ಮೇಕೆಗಳಿಗೆ ಖಾಯಿಲೆ ಬಂದಿದ್ದರೆ, ಅವನಿಗೆ ಮತ್ತಷ್ಟು ಕಷ್ಟಗಳು ಬರುತ್ತಿದ್ದವು, ಜೀವನ ನಡೆಸುವುದೇ ದುಸ್ತರವಾಗುತ್ತಿತ್ತು. ಆದರೆ ಅವನು ಮಾನವ; ಕೇವಲ ನಾನು ಕೊಟ್ಟು ಕಿತ್ತುಕೊಂಡೆ ಎಂದಷ್ಟೇ ಯೋಚಿಸುತ್ತಿದ್ದಾನೆ. ನಾನು ಮೊದಲು ಕೊಡದೇ ಇರುವುದನ್ನೇ ಕಿತ್ತುಕೊಂಡಿದ್ದರೆ ಆಗ ಏನಾಗುತ್ತಿತ್ತು ನೀನೇ ಯೋಚಿಸು ದೇವಿ ಎಂದಾಗ ದೇವಿಗೆ ಎಲ್ಲವೂ ಅರ್ಥವಾಗಿ ಹೌದು ದೇವ ನೀವು ಸರಿಯಾಗಿ ಹೇಳಿದಿರಿ ಎಂದಳು.

ಪ್ರಿಯ ಓದುಗರೆ,
ಜೀವನದಲ್ಲಿ ಎದುರಾಗುವ ಪ್ರತಿಯೊಂದು ಕ್ಷಣವೂ ದೇವರ ಲೆಕ್ಕಾಚಾರದ ಒಂದು ಭಾಗ. ಯಶಸ್ಸು ಹಾಗೂ ವಿಫಲತೆಗಳ ನಡುವೆ ನಂಬಿಕೆ ಮತ್ತು ಧೈರ್ಯವನ್ನು ಕಳೆದುಕೊಳ್ಳದೇ ಮುಂದೆ ಸಾಗುವುದು ತುಂಬಾ ಮುಖ್ಯ. ಸಂಕಷ್ಟಗಳು ನಮ್ಮನ್ನು ಮತ್ತಷ್ಟು ಬಲಿಷ್ಠರನ್ನಾಗಿಸಲು ಬರುವುದೇ ಹೊರತು, ಕುಗ್ಗಿಸಲೆಲ್ಲ.
ನಮ್ಮ ಜೀವನದಲ್ಲಿ ಏನೇ ಆಗಲಿ, ದೇವರು ನಮ್ಮ ಹಿತಕಾಯಿತಕ್ಕಾಗಿ ಯೋಜನೆಗಳನ್ನು ಹೊಂದಿದ್ದಾನೆ ಎಂಬ ನಂಬಿಕೆಯನ್ನು ಪೋಷಿಸೋಣ. ಪ್ರತಿಯೊಂದು ಸವಾಲು ಕೂಡ ಒಂದು ಹೊಸ ಅವಕಾಶವಾಗಿದೆ ಎಂಬ ದೃಢ ನಿಲುವು ಹೊಂದೋಣ.
ನಂಬಿಕೆಯಿಂದ ಸಾಗಿದರೆ ಜೀವನ ಸಾರ್ಥಕವಾಗುತ್ತದೆ.
ನಮ್ಮ ಕಥೆ ಓದಿ ಪ್ರೇರಣೆಯನ್ನು ಪಡೆದು, ಮುನ್ನಡೆಯಿರಿ!
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx