ಮೈಸೂರು / ಬೆಂಗಳೂರು: ರಾಜ್ಯದಲ್ಲಿ ನನ್ನನ್ನು ಕೊಂಡುಕೊಳ್ಳುವವರು ಅಥವಾ ನನ್ನ ಧ್ವನಿಯನ್ನು ಅಡಗಿಸುವವರು ಇನ್ನೂ ಹುಟ್ಟಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರಕ್ಕೆ ಖಾರವಾಗಿ ತಿರುಗೇಟು ನೀಡಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಯೋಜನೆಗಳು ಹಾಗೂ ಭ್ರಷ್ಟಾಚಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ರಾಜ್ಯ ಸರ್ಕಾರ ಹಣ ಲೂಟಿ ಮಾಡಲು ಹೊರಟಿದೆ. ಬಿಡದಿ ಭೂಮಿ ಫಲವತ್ತಾದ ಭೂಮಿ ಎಂದು ಕಾಂಗ್ರೆಸ್‌ನ ಸದನ ಸಮಿತಿ ವರದಿಯಲ್ಲೇ ಇದೆ. ಬಿಡದಿ ಟೌನ್ ಶಿಪ್ ಯೋಜನೆ ಯಾವುದೇ ಕಾರಣಕ್ಕೂ ಜಾರಿಯಾಗಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಡಿಎಲ್ ಎಫ್ (DLF) ಕಂಪನಿಯಿಂದ ಕಿಕ್ ಬ್ಯಾಕ್ ಪಡೆದಿರುವ ಆರೋಪಕ್ಕೆ ಪ್ರತಿಕ್ರಿಯಿಸಿ, “ಕೇರಳದ ಕಾಂಗ್ರೆಸ್ ನಾಯಕರಿಗೂ, ದೆಹಲಿಯ ವ್ಯಕ್ತಿಗೂ ಮತ್ತು ಡಿಎಲ್ ಎಫ್ ಗೂ ಏನು ಸಂಬಂಧ ಎಂಬುದನ್ನು ಬಹಿರಂಗಪಡಿಸಲಿ. ರಾಜ್ಯದಲ್ಲಿ ಸರ್ಕಾರ ನಿಮ್ಮದೇ ಇದೆಯಲ್ಲವೇ, ಧೈರ್ಯವಿದ್ದರೆ ತನಿಖೆ ಮಾಡಿಸಿ” ಎಂದು ಸವಾಲೆಸೆದರು.
ನೈಸ್ ರಸ್ತೆಯಲ್ಲಿ ಟೋಲ್ ಕಟ್ಟಬೇಡಿ:
ನೈಸ್ (NICE) ರಸ್ತೆಯಲ್ಲಿ ಅಕ್ರಮವಾಗಿ 2,000 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಲಾಗುತ್ತಿದೆ. ಇದು ಸ್ವತಃ ರಾಜ್ಯ ಸರ್ಕಾರದ ವಕೀಲರೇ ಹೇಳಿರುವ ವಿಚಾರ. ಹೀಗಾಗಿ ಸಾರ್ವಜನಿಕರು ಹಾಗೂ ರೈತರು ನೈಸ್ ರಸ್ತೆಯಲ್ಲಿ ಟೋಲ್ ಪಾವತಿಸಬೇಡಿ ಎಂದು ಕರೆ ನೀಡಿದರು.
ಅಧಿಕಾರದ ಮದದಿಂದ ವಿಪಕ್ಷಗಳಿಗೆ ಗೌರವ ನೀಡುತ್ತಿಲ್ಲ. ಇನ್ನು ಒಂದೂವರೆ ವರ್ಷ ಮಾತ್ರ ಅಧಿಕಾರ ಬಾಕಿ ಇದ್ದು, ಜನರಿಗೆ ದ್ರೋಹ ಬಗೆಯುತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ಸಫಾಯಿಯಾಗಲಿದ್ದೀರಿ ಎಂದು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದರು.
ಬಿಡದಿ ಟೌನ್ ಶಿಪ್ ಯೋಜನೆ ವಿರೋಧಿಸಿ ಜೆಡಿಎಸ್–ಬಿಜೆಪಿ ಜಂಟಿಯಾಗಿ ಪಾದಯಾತ್ರೆ ಆರಂಭಿಸಿದ್ದು, ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದು ಕುಮಾರಸ್ವಾಮಿ ಅವರು ಚಳವಳಿಗೆ ಚಾಲನೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
