ವರದಿ : ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ : ಇದು ಅಭಿವೃದ್ಧಿಯೋ ಅಥವಾ ಅವ್ಯವಸ್ಥೆಯ ಪರಮಾವಧಿಯೋ ? ಕೊರಟಗೆರೆ ಜನರಿಗೆ ವೈಟ್ ಟಾಪಿಂಗ್ ರಸ್ತೆ ಕನಸು ತೋರಿಸಿದ ಲೋಕೋಪಯೋಗಿ ಇಲಾಖೆ, ಕೊನೆಗೆ ಫುಟ್‌ಪಾತ್ ಇಲ್ಲದೆ ಅರ್ಧಂಬರ್ಧ ರಸ್ತೆ ಮಾಡಿ ಕೈ ತೊಳೆದುಕೊಂಡಿದೆ.
ಕಾಮಗಾರಿ ಆರಂಭ–ಮುಕ್ತಾಯದಲ್ಲಿ ಬೇಜವಾಬ್ದಾರಿ : ಜನವರಿ 27–2021 ರಲ್ಲಿ ಶುರುವಾದ ಕಾಮಗಾರಿಗೆ 11 ತಿಂಗಳು ಡೆಡ್ ಲೈನ್ ಇತ್ತು. ಕೋವಿಡ್ ನೆಪದಲ್ಲಿ 6 ತಿಂಗಳು ಎಕ್ಸ್ ಟೆನ್ಶನ್ ತೆಗೆದುಕೊಂಡರೂ ಕೆಲಸ ಮಾತ್ರ ಮುಗಿಯಲಿಲ್ಲ. 2022ಕ್ಕೆ ಮುಗಿಯಬೇಕಿದ್ದ ರಸ್ತೆ 2026ಕ್ಕೂ ಅರ್ಧಕ್ಕೆ ನಿಂತಿದೆ.
ಹಣ ಇದೆ, ಕೆಲಸ ಇಲ್ಲ: ಒಟ್ಟು 9.99 ಕೋಟಿ ಅನುದಾನದಲ್ಲಿ ಕೇವಲ 5.34 ಕೋಟಿ ಮಾತ್ರ ಖರ್ಚು ಮಾಡಿ, 3.56 ಕೋಟಿ ಹಣವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಹಣ ಇದ್ದರೂ ಕೆಲಸ ಮಾಡದಿರುವುದು ಇಲಾಖೆಯ ವೈಫಲ್ಯಕ್ಕೆ ಸಾಕ್ಷಿ.
1900 ಮೀಟರ್ ಗೆ ಸೀಮಿತವಾದ ‘ಅಭಿವೃದ್ಧಿ’: ಬೆಸ್ಕಾಂ ಕಚೇರಿಯಿಂದ ತಾಲ್ಲೂಕು ಕಚೇರಿವರೆಗೆ ಕೇವಲ 1900 ಮೀಟರ್ ರಸ್ತೆ ಮಾತ್ರ ವೈಟ್ ಟಾಪಿಂಗ್ ಆಗಿದೆ. ಫುಟ್ ಪಾತ್ ಮತ್ತು ಚರಂಡಿ ಇಲ್ಲದೆ ಮಾಡಿರುವುದರಿಂದ ಶಾಲಾ ಮಕ್ಕಳು, ವೃದ್ಧರು, ಮಹಿಳೆಯರು ಜೀವ ಕೈಯಲ್ಲಿ ಹಿಡಿದು ರಸ್ತೆಯಲ್ಲಿ ನಡೆಯುವಂತಾಗಿದೆ. ಒಂದು ಮಳೆ ಬಂದರೆ ರಸ್ತೆಯೇ ಕೆರೆಯಾಗಿ ನೀರು ನೇರವಾಗಿ ಅಂಗಡಿಗಳಿಗೆ ನುಗ್ಗುತ್ತಿದೆ.
ಗುತ್ತಿಗೆದಾರನ ಮೇಲೆ ಆರೋಪ ಹೊರಿಸಿ ಎಸ್ಕೇಪ್: ಕಾಮಗಾರಿ ಮುಗಿಯದಿದ್ದಾಗ ತಪ್ಪು ಒಪ್ಪಿಕೊಳ್ಳುವ ಬದಲು ಗುತ್ತಿಗೆದಾರನ ಮೇಲೆ ಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಮಧುಗಿರಿ ಇ ಇ ಕಚೇರಿ ಅಕ್ಟೋಬರ್ 17–2022 ರಲ್ಲೇ ಕೈ ತೊಳೆದು ಕೊಂಡಿದೆ. ಎರಡು ವರ್ಷವಾದರೂ ಆ ಪತ್ರದ ಮೇಲೆ ಯಾವ ಕ್ರಮವೂ ಇಲ್ಲ. ಇಲಾಖೆ ಮತ್ತು ಗುತ್ತಿಗೆದಾರನ ನಡುವೆ ಹೊಂದಾಣಿಕೆ ಇದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.
ಜನರ ತೆರಿಗೆ ಹಣದಲ್ಲಿ ಮಾಡುವ ಕಾಮಗಾರಿಯಲ್ಲಿ ಇಷ್ಟೊಂದು ನಿರ್ಲಕ್ಷ್ಯ ಸಲ್ಲದು. ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ, ಬಾಕಿ ಫುಟ್‌ಪಾತ್ ಕಾಮಗಾರಿ ಕೂಡಲೇ ಪೂರ್ಣಗೊಳಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
“ಬೆಸ್ಕಾಂ ಕಚೇರಿಯಿಂದ ತಾಲ್ಲೂಕು ಕಚೇರಿ ವರೆಗೆ 1900 ಮೀಟರ್ ವೈಟ್ ಟಾಪಿಂಗ್ ಪೂರ್ಣಗೊಂಡಿದೆ, ಫುಟ್ ಪಾತ್ ಬಾಕಿ ಇರುವುದು ನಿಜ. ಗುತ್ತಿಗೆದಾರ ಅರ್ಧಕ್ಕೆ ನಿಲ್ಲಿಸಿದ್ದರಿಂದ ಮಧುಗಿರಿ ಇ ಇ ಕಚೇರಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮತಿ ಬಂದ ತಕ್ಷಣ ಬಾಕಿ ಕಾಮಗಾರಿ ಪೂರ್ಣಗೊಳಿಸಲಾಗುವುದು”.
— ದೀಪಕ್ ಯಾದವ್, ಎನ್, ಲೋಕೋಪಯೋಗಿ ಇಲಾಖೆ, ಕೊರಟಗೆರೆ
“ಈ ವೈಟ್ ಟಾಪಿಂಗ್ ಕಾಮಗಾರಿ ಲೋಕೋಪಯೋಗಿ ಇಲಾಖೆ ವತಿಯಿಂದ ನಡೆದಿದೆ, ಪುರಸಭೆ ವತಿಯಿಂದ ಅಲ್ಲ. ಆದರೂ ಫುಟ್ ಪಾತ್ ಮತ್ತು ಚರಂಡಿ ಇಲ್ಲದೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದು ನಿಜ. ಈ ಬಗ್ಗೆ ನಾವು ಈಗಾಗಲೇ PWD ಇಲಾಖೆಗೆ ಪತ್ರ ಬರೆದಿದ್ದೇವೆ. ಪುರಸಭೆ ವತಿಯಿಂದ ಬಾಕಿ ಚರಂಡಿ ಸ್ವಚ್ಛತೆ ಮತ್ತು ತಾತ್ಕಾಲಿಕ ವ್ಯವಸ್ಥೆಗೆ ಕ್ರಮ ಕೈಗೊಳ್ಳುತ್ತೇವೆ”
— ಉಮೇಶ್ ಕೆ.ಎಸ್, ಮುಖ್ಯಾಧಿಕಾರಿ, ಪುರಸಭೆ, ಕೊರಟಗೆರೆ.
“ನಾನು ಪ.ಪಂ. ಸದಸ್ಯನಿದ್ದಾಗಲೇ ಈ ವೈಟ್ ಟಾಪಿಂಗ್ ಪ್ರಸ್ತಾವನೆ ಆಗಿತ್ತು. ಫುಟ್ ಪಾತ್ ಜೊತೆ ಮಾಡಬೇಕು ಅಂತ ಹೇಳಿದ್ದೆವು. ಈಗ 9.99 ಕೋಟಿಯಲ್ಲಿ ಅರ್ಧ ಕೆಲಸ ಮಾಡಿ ಬಿಟ್ಟಿದ್ದಾರೆ. ಇದು ಪಟ್ಟಣದ ಜನರಿಗೆ ಮಾಡಿದ ಮೋಸ. ಬಾಕಿ 3.56 ಕೋಟಿ ಹಣದಲ್ಲಿ ಕೂಡಲೇ ಫುಟ್ ಪಾತ್ ಮತ್ತು ಚರಂಡಿ ಮಾಡಬೇಕು”
— ಪ್ರದೀಪ್ ಕುಮಾರ್, ಮಾಜಿ ಪ.ಪಂ ಸದಸ್ಯರು ಕೊರಟಗೆರೆ.
“ಕೊರಟಗೆರೆಯ ಹೃದಯ ಭಾಗದ ವೈಟ್ ಟಾಪಿಂಗ್ ರಸ್ತೆಯಲ್ಲಿ ಫುಟ್‌ಪಾತ್ ಇಲ್ಲದಿರುವುದು ಪಾದಚಾರಿಗಳ ಜೀವದ ಜೊತೆ ಚೆಲ್ಲಾಟವಾಡಿದಂತೆ. ವಿದ್ಯಾರ್ಥಿಗಳು, ಮಹಿಳೆಯರು ರಸ್ತೆಯಲ್ಲೇ ನಡೆಯುವಂತಾಗಿದೆ. ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಂಡು ಕಾಮಗಾರಿ ಪೂರ್ಣಗೊಳಿಸಬೇಕು.”
— ನರಸಿಂಹರಾಜು, ತಾ. ಅಧ್ಯಕ್ಷ, ಕರವೇ (ಪ್ರವೀಣ್ ಶೆಟ್ಟಿ ಬಣ) ಕೊರಟಗೆರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
