ಡಾ.ವಡ್ಡಗೆರೆ ನಾಗರಾಜಯ್ಯ
8722724174
ಸಾವಿರಾರು ವರ್ಷಗಳಿಂದ ಅಸ್ಪೃಶ್ಯತೆ ಆಚರಿಸುತ್ತಾ, ಮಹಿಳೆಯರ ವಿರುದ್ಧ ಕ್ರೌರ್ಯ ಎಸಗುತ್ತಾ, ‘ವಸುದೈವ ಕುಟುಂಬಂ’ ‘ಸರ್ವೇಜನ ಸುಖಿನೋ ಭವಂತು’, ‘ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಃ’ ಎಂದು ಬರಿದೇ ಪುಂಖಾನುಪುಂಖವಾಗಿ ಮಾತನಾಡುವ ನೀವು, ಜಾತಿ ಕ್ರೌರ್ಯಕ್ಕೆ ಸಿಲುಕಿ ದಲಿತರ ಹೆಣಗಳು ಉರುಳಿದಾಗ ಅಂತಹ ಅಮಾನವೀಯ ರಾಕ್ಷಸೀ ಕೃತ್ಯ ನಡೆಸಿದವರ ವಿರುದ್ಧ ಒಂದಕ್ಷರವನ್ನೂ ಮಾತಾಡುವುದಿಲ್ಲ.
ಕೆಳಜಾತಿಗಳಿಗೆ ಕೊಡಲಾಗುತ್ತಿದ್ದ ಮೀಸಲಾತಿ ಸೌಲಭ್ಯದ ವಿರುದ್ಧ ಬೊಬ್ಬಿಡುತ್ತಿದ್ದ ನೀವು, ಆರ್ಥಿಕ ಹಿಂದುಳಿದಿರುವಿಕೆಯ ಕಾರಣವನ್ನು ಮುಂದೊಡ್ಡಿ ಸಂವಿಧಾನದ ಆಶಯದ ವಿರುದ್ಧ ಕೇವಲ 4% ಜನ 10% ಮೀಸಲಾತಿ ಕಬಳಿಸಿರುವ ಸಾಮಾಜಿಕ ಅನ್ಯಾಯದ ವಿರುದ್ಧ ತುಟಿ ಪಿಟಿಕ್ ಎನ್ನುವುದಿಲ್ಲ.
ಶೂದ್ರ ಗೊಲ್ಲನಾದ ಕೃಷ್ಣನಿಗೆ ಗುಡಿ ಕಟ್ಟಿ ಗರ್ಭಗುಡಿಯಲ್ಲಿ ನೀವು ನಿಂತು ಶೂದ್ರರನ್ನು ಆಚೆಗಿರಿಸಿರುವ ಬಗ್ಗೆಯಾಗಲೀ ಪಂಕ್ತಿಭೇದದ ವಿರುದ್ಧವಾಗಲೀ ಮಾತಾಡಲು ನಿಮಗೆ ಬಾಯಿಲ್ಲ.
ಮಾಂಸಾಹಾರಿ ಶೂದ್ರರ ಬೆವರ ದುಡಿಮೆಯ ಕಾಣಿಕೆಗಳಿಂದಲೇ ಮಠಮಾನ್ಯ ಗುಡಿಗುಂಡಾರಗಳ ಸಾಮ್ರಾಜ್ಯವನ್ನು ಕಟ್ಟಿಕೊಂಡಿದ್ದೀರಿ. ಮಾಂಸಾಹಾರ ಸಂಸ್ಕೃತಿಯ ಜನರನ್ನು ಹೀನಾಯಿಸಿ ಮಾತಾಡುವ ನೀವು ಮಾಂಸಾಹಾರಿ ಶಿವನನ್ನೇಕೆ ಪೂಜಿಸುವಿರಿ? ಮಾಂಸಾಹಾರಿ ಗೊಲ್ಲರ ಕೃಷ್ಣನನ್ನೇಕೆ ಆರಾಧಿಸುವಿರಿ? ಮಾಂಸಾಹಾರಿ ಕುರುಬ ಜನಾಂಗದಲ್ಲಿ ಹುಟ್ಟಿದ ಸಂತಕವಿ ಕನಕದಾಸರ ಹೆಸರಿನಲ್ಲಿ ಕಿಂಡಿ ಕೊರೆದು ಕಿಂಡಿಕಾಸು ತಟ್ಟೆಕಾಸು ಯಾಕಾಗಿ ಪಡೆಯುವಿರಿ?
ಬ್ರಾಹ್ಮಣ್ಯದ ಅಮಲನ್ನು ಶೂದ್ರರಿಗೂ ಏರಿಸಿ ಧರ್ಮದ ವ್ಯಸನಿಗಳನ್ನು ಸೃಷ್ಟಿಸಿ ವೈದಿಕಾರ್ಯರ ಕೋಟೆ ಕಾಯಲು ತ್ರಿಶೂಲ ದೀಕ್ಷೆ ಕೊಡುತ್ತಿರುವ ಹೇಯಕೃತ್ಯವು ಅಂಬೇಡ್ಕರ್ ಅವರ ಕಲ್ಪನೆಯ ಜಾತ್ಯತೀತ ನೆಲದಲ್ಲಿ ನಿಮ್ಮಿಂದಾಗಿ ತಾಂಡವವಾಡುತ್ತಿದೆ. ಅತ್ತ ಮುಸ್ಲಿಮರ ವಿರುದ್ಧ ಇತ್ತ ಕ್ರಿಶ್ಚಿಯನ್ನರ ವಿರುದ್ಧ ಶೂದ್ರರನ್ನು ನಿಲ್ಲಿಸಿ ಕೋಮು ಧ್ವೇಷದ ಬಿಸಿ ರಕ್ತವನ್ನು ಕುಡಿಯುತ್ತಿದ್ದೀರಿ. ಸಹಜವಾದ ಮತಾಂತರವನ್ನು ನೋಡಿ ಕೆರಳುವ ನಿಮಗೆ ಇಲ್ಲಿಯ ಅಸ್ಪೃಶ್ಯತೆ, ಸ್ತ್ರೀ ಶೋಷಣೆ, ಅಲೆಮಾರಿಗಳ ಬದುಕಿನ ಗೋಳಿನ ಪಾಡು ಕಾಣಿಸುವುದಿಲ್ಲ ಯಾಕೆ?
ಮಾಂಸಾಹಾರ ಸಂಸ್ಕೃತಿಯ ಬುಡಕಟ್ಟು ಮತ್ತು ಕೆಳಜಾತಿಗಳ ದ್ರಾವಿಡ ದೇವರುಗಳಾದ ಶಿವ, ಚಾಮುಂಡಿ, ಕೃಷ್ಣ ಮುಂತಾದವರನ್ನು ಆರಾಧಿಸುವುದನ್ನು ನಿಮಗೆ ವರ್ಜಿಸಲು ಸಾಧ್ಯವಿಲ್ಲವೇ? ಮಾಂಸಾಹಾರಿ ದೇವರುಗಳನ್ನು ಮಾತ್ರ ನಿಮಗೆ ಬೇಕಾದ ಗುಡಿಗುಂಡಾರ ಮಠಮಾನ್ಯ ಕಟ್ಟಿಕೊಳ್ಳಲು ಸ್ವೀಕರಿಸಿರುವ ನೀವು ಹಾಗೂ ಮಾಂಸಾಹಾರಿಗಳು ಕೊಡುವ ಕಾಣಿಕೆಗಳನ್ನು ಸ್ವೀಕರಿಸುವ ನೀವು, ಮಾಂಸಾಹಾರಿಗಳನ್ನು ನಿಮ್ಮೊಳಕ್ಕೆ ಸ್ವೀಕರಿಸದಿರುವುದು ಯಾವ ನ್ಯಾಯ? ಮಾಂಸಾಹಾರಿ ದೇವರು ಮತ್ತು ಮಾಂಸಾಹಾರಿಗಳ ದುಡಿಮೆಯನ್ನು ಹಾಗೆ ವರ್ಜಿಸಲು ನಿಮಗೆ ಸಾಧ್ಯವಿಲ್ಲವೆಂದ ಮೇಲೆ ಮಾಂಸಾಹಾರದ ಸಂಗತಿಯನ್ನು ಕುರಿತು ಇದೇ ದೇವರುಗಳ ಅಸಲಿ ವಾರಸುದಾರರು ಮಾತಾಡುವುದರಲ್ಲಾಗಲೀ ಅಥವಾ ನಿಮಗೆ ಒಗ್ಗುವುದಾದರೆ ಮಾಂಸಾಹಾರ ಸೇವಿಸಿರೆಂದು ಕೇಳುವುದರಲ್ಲಾಗಲೀ ತಪ್ಪೇನಿದೆ?
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700