ಸರಗೂರು / ಎಚ್.ಡಿ. ಕೋಟೆ: ಮಾನವ ಕಳ್ಳಸಾಗಾಣಿಕೆ ಸಮಾಜಕ್ಕೆ ಅತಿ ದೊಡ್ಡ ಶಾಪವಾಗಿದ್ದು, ಇದರ ವಿರುದ್ಧ ಸಮಾಜದ ಪ್ರತಿಯೊಬ್ಬರೂ ಜಾಗೃತರಾಗಬೇಕು. ದುರ್ಬಲ ವರ್ಗದ ಜನರಿಗೆ ತ್ವರಿತ, ಉಚಿತ ಹಾಗೂ ಸುಲಭವಾಗಿ ನ್ಯಾಯ ತಲುಪಿಸಲು ಕಾನೂನು ಸೇವಾ ಪ್ರಾಧಿಕಾರ ಸದಾ ಸಿದ್ಧವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಎಚ್.ಡಿ. ಕೋಟೆಯ ಅಪರ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಧೀಶರಾದ ಸುಷ್ಮಾ ಎಂ. ತಿಳಿಸಿದರು.
ಸರಗೂರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ (ಎಚ್.ಡಿ. ಕೋಟೆ), ವಕೀಲರ ಸಂಘ, ಸರ್ಕಾರಿ ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ “ಮಾನವ ಕಳ್ಳಸಾಗಾಣಿಕೆ ವಿರೋಧಿ ದಿನ” ಹಾಗೂ “ಜನರಿಗಾಗಿ – ತ್ವರಿತ, ಉಚಿತ ಮತ್ತು ಸುಲಭ ನ್ಯಾಯ” ಕುರಿತ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಇತ್ತೀಚಿನ ದಿನಗಳಲ್ಲಿ ಉದ್ಯೋಗ, ಉನ್ನತ ಶಿಕ್ಷಣ ಹಾಗೂ ಉತ್ತಮ ಜೀವನ ಶೈಲಿಯ ಸುಳ್ಳು ಆಮಿಷಗಳನ್ನು ಒಡ್ಡಿ ಮಹಿಳೆಯರು, ಮಕ್ಕಳು ಮತ್ತು ಯುವಕರನ್ನು ಮಾನವ ಕಳ್ಳಸಾಗಾಣಿಕೆಗೆ ಒಳಪಡಿಸುವ ಜಾಲಗಳು ಹೆಚ್ಚುತ್ತಿವೆ. ಇಂತಹ ಮೋಸದ ಆಮಿಷಗಳಿಗೆ ಯಾರೂ ಬಲಿಯಾಗಬಾರದು. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಅಥವಾ ಚಟುವಟಿಕೆಗಳು ಕಂಡುಬಂದರೆ ತಕ್ಷಣವೇ ಪೊಲೀಸ್ ಇಲಾಖೆ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.”
— ಸುಷ್ಮಾ ಎಂ., ಅಪರ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರು
ವಿದ್ಯಾರ್ಥಿಗಳು ಕೇವಲ ಶಿಕ್ಷಣಕ್ಕಷ್ಟೇ ಸೀಮಿತವಾಗದೆ, ಸಮಾಜದಲ್ಲಿ ನಡೆಯುವ ಅನ್ಯಾಯ, ಶೋಷಣೆ ಮತ್ತು ಅಪರಾಧಗಳನ್ನು ತಡೆಯುವ ‘ಜಾಗೃತಿಯ ರಾಯಭಾರಿ’ಗಳಾಗಬೇಕು ಎಂದು ಅವರು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪ್ಯಾನಲ್ ವಕೀಲ ಶಂಕರ್ ಮಾತನಾಡಿ, ಮಾನವ ಕಳ್ಳಸಾಗಾಣಿಕೆ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆಗೆ ಸಾರ್ವಜನಿಕರ ಸಂಪೂರ್ಣ ಸಹಕಾರ ಅಗತ್ಯ ಎಂದು ಒತ್ತು ನೀಡಿದರು.
ಪ್ಯಾನಲ್ ವಕೀಲ ಹಾಗೂ ವಕೀಲರ ಸಂಘದ ಖಜಾಂಚಿ ಅಭಿಕುಮಾರ್ ಮಾತನಾಡಿ, ಲೋಕ ಅದಾಲತ್ ಮೂಲಕ ಸಾರ್ವಜನಿಕರು ಕಡಿಮೆ ವೆಚ್ಚದಲ್ಲಿ, ಸೌಹಾರ್ದಯುತವಾಗಿ ಹಾಗೂ ತ್ವರಿತವಾಗಿ ತಮ್ಮ ನ್ಯಾಯಾಲಯದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಬಹುದು ಎಂದರು.
ಸರಗೂರು ಪೊಲೀಸ್ ಠಾಣೆಯ ಉಪನಿರೀಕ್ಷಕ (PSI) ಆರ್. ಕಿರಣ್ ಅವರು ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಇರುವ ವಿವಿಧ ಕಾನೂನು ಕಾಯ್ದೆಗಳ ಕುರಿತು ವಿದ್ಯಾರ್ಥಿಗಳಿಗೆ ಸವಿಸ್ತಾರವಾದ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಧುಸುಧನ್, ವಕೀಲರ ಸಂಘದ ಅಧ್ಯಕ್ಷ ನಾಗೇಶ್ ಆರ್., ಉಪಾಧ್ಯಕ್ಷ ಚಲುವಪ್ಪ, ಕಾರ್ಯದರ್ಶಿ ಜಯಶಂಕರ್, ಜಂಟಿ ಕಾರ್ಯದರ್ಶಿ ರವಿಕುಮಾರ್ ಕೆ., ಪ್ರಮುಖರಾದ ಕವಿತಾ, ಶೃತಿ ಮಹೇಶ್, ಪೊಲೀಸ್ ಸಿಬ್ಬಂದಿಗಳಾದ ಇಮ್ರಾನ್ ಅಹಮದ್, ಆನಂದ್, ನಂದೀಶ, ಉಪನ್ಯಾಸಕಿ ಮಂಜುಳದೇವಿ ಸೇರಿದಂತೆ ಕಾಲೇಜಿನ ವಿವಿಧ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
