ಬೆಂಗಳೂರು: ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಮಾತಿನ ಸಮರ ಮುಂದುವರಿದಿದೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಎಂಬ ಕಾರಣಕ್ಕೆ ಬಿ.ವೈ.ವಿಜಯೇಂದ್ರ ಅವರಿಗೆ ಗೌರವ ನೀಡಲಾಗುತ್ತದೆ. ಬಾಯಿಗೆ ಬಂದಂತೆ ಮಾತನಾಡಿದರೆ ಸಹಿಸಲಾಗುವುದಿಲ್ಲ. ನಾವು ಬೀದಿಗಿಳಿದರೆ ನೀವು ಮನೆ ಖಾಲಿ ಮಾಡಬೇಕಾಗುತ್ತದೆ ಎಚ್ಚರಿಕೆ ನೀಡಿದ್ದಾರೆ.
ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಸುಪಾರಿ ನೀಡಲಾಗಿತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಆರೋಪಕ್ಕೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ಸಚಿನ್ ಪಾಂಚಾಳ್ ಕುಟುಂಬದ ಸದಸ್ಯರ ಮೇಲೆ ಬಿಜೆಪಿಯವರು ಒತ್ತಡ ಹೇರುತ್ತಿದ್ದಾರೆ. ಪ್ರಕರಣದ ದಿಕ್ಕು ತಪ್ಪಿಸುವ ಹುನ್ನಾರ ನಡೆಯುತ್ತಿದೆ. ಈಗಾಗಲೇ ಪ್ರಕರಣವನ್ನು ಸಿಐಡಿ ತನಿಖೆ ನಡೆಸಲಾಗುತ್ತಿದೆ. ಸ್ಥಳ ಮಹಜರು ನಡೆದಿದೆ. ಪಾರದರ್ಶಕ ತನಿಖೆ ನಡೆಯಲಿದೆ ಎಂದು ತಾವು ಸಚಿನ್ ಕುಟುಂಬದ ಸದಸ್ಯರಿಗೆ ಭರವಸೆ ನೀಡಿದ್ದೇನೆ ಎಂದರು.
ಹೆಚ್ಚುವರಿ ಪ್ರಕರಣಗಳನ್ನು ನಮ್ಮ ತನಿಖೆಗೆ ವಹಿಸಬೇಡಿ ಎಂದು ಸಿಬಿಐ ರಾಜ್ಯಗಳಿಗೆ ಪತ್ರ ಬರೆದು ಸೂಚನೆ ನೀಡಿದೆ. ಸಚಿನ್ ಪಾಂಚಾಳ್ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುವ ಅಗತ್ಯವಿಲ್ಲ. ಬಿಜೆಪಿಯವರು ಕಥೆ ಬರೆದಂತೆ ನಾವು ತಾಳ ಹಾಕಲಾಗುವುದಿಲ್ಲ. ಜೀವ ಹೋಗಿದೆ. ನ್ಯಾಯ ಕೊಡಿಸುವುದು ನಮ ಜವಾಬ್ದಾರಿ. ವಿರೋಧಪಕ್ಷಗಳು ರಾಜಕೀಯ ಮಾಡದೇ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ ಎಂದರು.
ಪ್ರತಿಭಟನೆಗೆ ಬರುವಂತೆ ಕುಟುಂಬದ ಸದಸ್ಯರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕುಟುಂಬದವರು ನಮಗೆ ಪ್ರಿಯಾಂಕ್ ಖರ್ಗೆ ಯಾರೆಂಬುದು ಗೊತ್ತಿಲ್ಲ. ನಮಗೂ ಅವರಿಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ನಮ ಪಕ್ಷದ ಸಚಿವ ಈಶ್ವರ್ ಖಂಡ್ರೆ, ಲಕ್ಷ್ಮೀಹೆಬ್ಬಾಳ್ಕರ್ ಅವರುಗಳು ಸಚಿನ್ ಅವರ ಮನೆಗೆ ಭೇಟಿ ನೀಡಿ ಸಾಂತ್ವಾನ ನೀಡಿದ್ದು, ಸರ್ಕಾರದಿಂದ ಅಗತ್ಯವಾದ ನೆರವು ಕೊಡಿಸುವ ಭರವಸೆ ನೀಡಿದ್ದಾರೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx