ಪ್ರಜಾಪ್ರಭುತ್ವದ ನೆಲೆಗಟ್ಟುವ ಅವಶ್ಯಕ ಅಂಶವೇ ಮತದಾನ. ಭಾರತದ ಚುನಾವಣಾ ಆಯೋಗ (ECI) ಸ್ಥಾಪನೆಯ ದಿನವಾದ ಜನವರಿ 25ರ ರಾಷ್ಟ್ರೀಯ ಮತದಾರರ ದಿನಾಚರಣೆ, ಪ್ರತಿ ವರ್ಷ ಈ ದಿನವನ್ನು ತದಾರರ ಜಾಗೃತಿಯ ಕಾರ್ಯಕ್ರಮಗಳ ಮೂಲಕ ರಾಷ್ಟ್ರದ ಪ್ರಜಾಸತ್ತಾತ್ಮಕ ಮೂಲವನ್ನು ಬಲಪಡಿಸುವ ಹೆಜ್ಜೆಯಾಗಿ ಆಚರಿಸಲಾಗುತ್ತದೆ.
ಈ ಬಾರಿ 15ನೇ ರಾಷ್ಟ್ರೀಯ ಮತದಾರರ ದಿನವು ECIಯ 75 ವರ್ಷಗಳ ಸಾಧನೆಗಳನ್ನೂ, 2024ರ ಯಶಸ್ವಿ ಲೋಕಸಭಾ ಚುನಾವಣೆಯೂ ಚರ್ಚೆಗೆ ಒಳಪಡಿಸಿತು. ಈ ಸಂದರ್ಭದಲ್ಲಿ, 100 ಕೋಟಿ ಮತದಾರರ ಗುರಿಯತ್ತ ಸಾಗುತ್ತಿರುವ ಭಾರತ, ಜಾಗೃತ ಮತದಾರರ ಮಹತ್ವವನ್ನು ಮತ್ತೊಮ್ಮೆ ಧ್ವನಿಸಿತು.
ಮತದಾನದ ಮಹತ್ವ:
ಪ್ರತಿಯೊಬ್ಬರ ಮತವು ದೇಶದ ಭವಿಷ್ಯ ರೂಪಿಸುವ ಶಕ್ತಿಯಾಗಿದೆ. ಇದು ಕೇವಲ ಹಕ್ಕಾಗಿಯೇ ಉಳಿಯದೇ, ಪ್ರಜಾಪ್ರಭುತ್ವದ ಪ್ರಾಣಶಕ್ತಿಯಾಗಿದೆ. ಯುವಜನಾಂಗವು ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ಬದ್ಧತೆಯಿಂದ ಪಾಲ್ಗೊಳ್ಳುವ ಮೂಲಕ ದೇಶದ ಅಭಿವೃದ್ಧಿಯ ಚಕ್ರವನ್ನು ತಿರುಗಿಸಬಲ್ಲದು. 18-29 ವರ್ಷದ ವಯೋಮಾನದ 21.7 ಕೋಟಿ ಯುವ ಮತದಾರರ ಸಂಖ್ಯೆಯು ಭಾರತಕ್ಕೆ ಭವಿಷ್ಯ ಕಟ್ಟುವ ಮಹತ್ವದ ಪೂರಕವಾಗಿದೆ.
ಪ್ರಜಾಪ್ರಭುತ್ವದ ಜಾಗೃತಿಗೆ ಅನಿವಾರ್ಯತೆ:
ಅಕ್ಷರಸಹ ಬುದ್ಧಿಜೀವಿಗಳಿಂದ ಸಾಮಾನ್ಯ ಪ್ರಜೆಗಳವರೆಗೆ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಂಡಾಗ ಮಾತ್ರ ಪ್ರಜಾಪ್ರಭುತ್ವವು ಸಫಲವಾಗುತ್ತದೆ. ಮತದಾನ ಮಾಡುವ ಬಗ್ಗೆ ಜಾಗೃತಿಯನ್ನು ತಂದಾಗ ಮಾತ್ರ, ಮತದಾನ ಪ್ರಮಾಣವೂ ಹೆಚ್ಚಾಗುತ್ತದೆಯಲ್ಲದೇ, ದುರಾಸೆಗಳ ದಾಸತ್ವದಿಂದ ಮುಕ್ತ ಪ್ರಜಾಪ್ರಭುತ್ವವನ್ನು ಸಾಕ್ಷಾತ್ಕಾರ ಮಾಡಬಹುದು.
ಮತದಾರರ ದಿನವನ್ನು ಹಬ್ಬದ ರೀತಿಯಲ್ಲಿ ಆಚರಿಸುವ ನಿಟ್ಟಿನಲ್ಲಿ ಸರ್ಕಾರ, ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಜಾಗೃತಿಗೆ ಹೊಸ ಮಾದರಿಗಳನ್ನು ಪರಿಚಯಿಸಬೇಕು. ಯುವ ಜನಾಂಗದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಕಾರ್ಯತಂತ್ರಗಳು ಅಗತ್ಯ. ಇಂತಹ ಕಾರ್ಯಕ್ರಮಗಳು ಪ್ರಜಾಪ್ರಭುತ್ವದ ಮೂಲತತ್ತ್ವಗಳನ್ನು ಸ್ಮರಿಸಿಸುತ್ತವೆ ಮತ್ತು ದೇಶವನ್ನು ಶ್ರೇಷ್ಠ ಗುರಿಯತ್ತ ಕರೆದೊಯ್ಯುವ ದಾರಿಯನ್ನು ಪ್ರದರ್ಶಿಸುತ್ತವೆ.
ನಮಗೆ ಮತದಾನ ಮಾಡಲು ಹಕ್ಕು ನೀಡಿರುವ ದೇಶವನ್ನು ಬಲಪಡಿಸಲು ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ನಿಭಾಯಿಸಬೇಕು. “ನಮ್ಮ ಮತ, ನಮ್ಮ ದೇಶದ ಭವಿಷ್ಯ” ಎಂಬ ಶ್ಲೋಗನ್ ಪ್ರತಿ ಹೃದಯದಲ್ಲೂ ಪಸರಿಸಬೇಕು. ಮತದಾನ ಮಾಡುವ ಕರ್ಮವೇ ಪ್ರಜಾಪ್ರಭುತ್ವದ ಶ್ರೇಷ್ಠ ಸೇತುಬಂಧನವಾಗಿದೆ.
— ಜಿ.ಎಲ್.ನಟರಾಜು
ಸಂಪಾದಕರು, ನಮ್ಮ ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx