ಮೈಸೂರು: ಹೆಚ್.ಡಿ.ಕೋಟೆ ತಾಲೂಕು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುರುವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದು, ಗ್ರಾಮ ಪಂಚಾಯಿತಿ ಸೇವೆಗಳಲ್ಲಿ ವ್ಯತ್ಯಯವಾಗಲಿದೆ.
ಬೆಳೆ ಸಮೀಕ್ಷೆ, ಕೃಷಿ ಗಣತಿ, ನೀರಾವರಿ ಗಣತಿ, ದಿಶಾಂಕ್, ವೋಟರ್ ಹೆಲ್ತ್‌ಲೈನ್, ಪೌತಿ ಆಂದೋಲನ ಆ್ಯಪ್, ಸಿ–ವಿಜಿಲ್ ಆ್ಯಪ್, ಇ–ಆಫೀಸ್, ಹಕ್ಕುಪತ್ರ, ಆಧಾರ್ ಸೀಡ್, ಸಂಯೋಜನೆ, ಲ್ಯಾಂಡ್ ಬಿಟ್ , ನಮೂನೆ 1–5ರ ವೆಬ್ ಅಪ್ಲಿಕೇಶನ್, ಸಂರಕ್ಷಣೆ, ನವೋದಯ, ಗರುಡ ಆಪ್, ಭೂಮಿ, ಬೆಳೆ ಸಮೀಕ್ಷೆಯ ಅನುಮೋದನೆ ವೆಬ್ ಆಪ್,
ಪಿ. ಎಂ. ಕಿಸಾನ ವೆಬ್ ಆಪ್, ಸೇರಿದಂತೆ ಇನ್ನಿತರೆ ಸೇವೆಗಳನ್ನು ಸ್ಥಗಿತಗೊಳಿಸಿ ರಾಜ್ಯದ ಎಲ್ಲ ತಾಲೂಕು ಕಚೇರಿಗಳ ಮುಂದೆ ಇಂದಿನಿಂದ ಮುಷ್ಕರ ನಡೆಯಲಿದೆ.
”ಕಂದಾಯ ಇಲಾಖೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುತ್ತಿದ್ದು, ಕಾರ್ಯದೊತ್ತಡ ಹೆಚ್ಚಾಗಿದೆ. ತಾಂತ್ರಿಕ ಅರ್ಹತೆ ಇಲ್ಲದ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ತಾಂತ್ರಿಕ ಕೆಲಸ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ. ವೇತನ ಹೆಚ್ಚಳ ಸೇರಿದಂತೆ ಇನ್ನಿತರೆ ಬೇಡಿಕೆಗಳ ಈಡೇರಿಕೆಗೆ ಹಲವು ಸಲ ಮನವಿ ಸಲ್ಲಿಸಿದ್ದರೂ ಸರಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ, ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದು. ಬೇಡಿಕೆಗಳು ಈಡೇರುವವರೆಗೆ ಮುಷ್ಕರ ಕೈಬಿಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಧಿಕಾರಿಗಳ ಬೇಡಿಕೆಗಳೇನು?
ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನೀಡಬೇಕು.
ಕಚೇರಿ, ಗುಣಮಟ್ಟದ ಮೊಬೈಲ್, ಡೇಟಾ, ಸಿಮ್ ನೀಡಬೇಕು.
ಪ್ರಿಂಟರ್ ಹಾಗೂ ಸ್ಕ್ಯಾನರ್, ಲ್ಯಾಪ್ ಟಾಪ್, ಗೂಗಲ್ ಕ್ರೋಮ್ ಬುಕ್ ಒದಗಿಸಬೇಕು.
ಸರಕಾರಿ ರಜಾ ದಿನಗಳಂದು ಮೆಮೊ ಕೊಡುವ ಅಧಿಕಾರಿಗಳ ವಿರುದ್ಧ ಕ್ರಮ.
ಅಂತರ ಜಿಲ್ಲಾ ವರ್ಗಾವಣೆ ನಿಯಮ 16 (ಎ) ಉಪಖಂಡ (2) ಮರುಸೇರ್ಪಡೆ.
ಪತಿ–ಪತ್ನಿ ವರ್ಗಾವಣೆ ಪ್ರಕರಣವನ್ನು ಪರಿಗಣಿಸಬೇಕು.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನು ಆಹಾರ ನಿರೀಕ್ಷಕ ಹುದ್ದೆಗೆ ಪದೋನ್ನತಿ.
ಕೆಲಸದ ಅವಧಿ ಮುಗಿದ ಬಳಿಕ ಇಲಾಖೆಯ ವರ್ಚುಯಲ್ ಸಭೆಗಳನ್ನು ನಡೆಸಬಾರದು.
ಪ್ರಯಾಣ ಭತ್ಯೆಯನ್ನು 500 ರೂ.ಗಳಿಂದ 3000 ರೂ.ಗಳಿಗೆ ಹೆಚ್ಚಳ.
ಕರ್ತವ್ಯ ನಿರತದಲ್ಲಿ ಸಾವನ್ನಪ್ಪಿದ್ದರೆ ಅವರ ಕುಟುಂಬಸ್ಥರಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು
ಮುಷ್ಕರ ವೇಳೆ ಕಂದಾಯ ನೌಕರರ ಸಂಘದ ಅಧ್ಯಕ್ಷ ಯೋಗೇಂದ್ರ ಕುಮಾರ್, ಪ್ರಧಾನ ಕಾರ್ಯದರ್ಶಿ ಸುಗುಣ ಪಿ, ಖಜಾಂಚಿ ಜಾಹಿದಭಾನು, ಉಪಾಧ್ಯಕ್ಷ ವೇದಕುಮಾರ್, ಗ್ರಾಮ ಆಡಳಿತ ಸಂಘದ ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ಅರುಣ್ ಕುಮಾರ್, ಖಜಾಂಚಿ ದೀಕ್ಷ ಗೌರವಧ್ಯಕ್ಷ ಕೇಶವಪೂಜಾ ಉಪಾಧ್ಯಕ್ಷ ಸತೀಶ್ ಮತ್ತು ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಹಾಜರಿದ್ದರು.
ವರದಿ: ಮಲಾರ ಮಹದೇವಸ್ವಾಮಿ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296