ಒಕ್ಕಲಿಗ ನಾಯಕರ ಜೊತೆಗಿನ ಸಭೆ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಧ್ಯಮಗಳ ಪ್ರಶ್ನೆ ಉತ್ತರಿಸಿದ್ದು, ನಾವು ನಮ್ಮ ಸಮಾಜದ ಬಗ್ಗೆ, ಲೋಕಸಭೆ ಚುನಾವಣೆ ಮತದಾನದ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು ಸೋತಿದ್ದು, ಸೋಲನ್ನು ಒಪ್ಪಿದ್ದೇವೆ. ರಾಜಕಾರಣದಲ್ಲಿ ಇದು ಸಹಜ ಎಂದರು.
ನಮ್ಮ ಚಲುವರಾಯಸ್ವಾಮಿ, ಬಾಲಕೃಷ್ಣ 50 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಈಗ ಅವರು ಮತ್ತೆ ಗೆದ್ದಿದ್ದಾರೆ. ಈ ಸೋಲು ಶಾಶ್ವತವಲ್ಲ. ಜನರ ಭಾವನೆ, ಆಲೋಚನೆ ಆರು ತಿಂಗಳಿಗೆ ಬದಲಾಗುತ್ತದೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷ ಕೇವಲ 1 ಸ್ಥಾನ ಗೆದ್ದಿತ್ತು. ಈಗ 9 ಸ್ಥಾನ ಗೆದ್ದಿದೆ. ಇನ್ನು ನಾಲ್ಕೈದು ಕ್ಷೇತ್ರ ನಾವು ನಿರೀಕ್ಷೆ ಮಾಡಿದ್ದೆವು. 2028ಕ್ಕೆ ಮತ್ತೆ ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ತರುವುದು ನನ್ನ ಜವಾಬ್ದಾರಿ. ನಾನು, ಸಿದ್ದರಾಮಯ್ಯ, ಎಲ್ಲ ಸಚಿವ ಸಂಪುಟ ಸದಸ್ಯರು ಒಟ್ಟಾಗಿ ದುಡಿದು ಈ ಸರಕಾರ ಮತ್ತೆ ತರುತ್ತೇವೆ ಎಂದು ಅವರು ಹೇಳಿದರು.
ನಟ ದರ್ಶನ್ ಪ್ರಕರಣದಲ್ಲಿ ಪ್ರಭಾವಿಗಳ ಒತ್ತಡವಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಈ ಪ್ರಕರಣದಲ್ಲಿ ಯಾವುದೇ ಒತ್ತಡವಿಲ್ಲ. ಈ ಬಗ್ಗೆ ನಾನು ವಿಚಾರಿಸಿದ್ದೇನೆ. ಪ್ರಕರಣದಲ್ಲಿ 13 ಆರೋಪಿಗಳಿದ್ದು, ಮಾಧ್ಯಮಗಳು ಬೆಳಗ್ಗೆಯಿಂದ ಸಂಜೆವರೆಗೂ ಕ್ಯಾಮೆರಾ ಹಿಡಿದಿರುತ್ತೀರಿ, ಪೊಲೀಸರಿಗೆ ಸ್ವತಂತ್ರವಾಗಿ ವಿಚಾರಣೆ ನಡೆಸಲು ಆಗುತ್ತಿಲ್ಲ ಎಂದು ಶಾಮಿಯಾನ ಹಾಕಿಕೊಂಡಿದ್ದಾರೆ. ಈ ಪ್ರಕರಣದ ಪೊಲೀಸ್ ತನಿಖೆಯಲ್ಲಿ ಗೃಹ ಸಚಿವರಿಂದ ಹಿಡಿದು ಯಾರೊಬ್ಬರೂ ಹಸ್ತಕ್ಷೇಪ ಮಾಡಿಲ್ಲ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA