ತುಮಕೂರು : ಜಿಲ್ಲೆಯ ಮಧುಗಿರಿಯ ವಲಯ ಅಬಕಾರಿ ಇಲಾಖೆಯ ಕಚೇರಿಯಲ್ಲಿ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವ ದಿನದಂದು ನಾಡ ಧ್ವಜವನ್ನು ಹಾರಿಸದೆ, ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಮಾಡದೆ ಇರುವುದನ್ನು ಖಂಡಿಸಿ ಸ್ಥಳೀಯ ಕನ್ನಡಪರ ಸಂಘಟನೆಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಚೇರಿಗೆ ಮುತ್ತಿಗೆ ಹಾಕಿ ಮಧುಗಿರಿ ವಲಯದ ಡಿವೈಎಸ್ಪಿ ಚಂದ್ರಪ್ಪಗೆ ಗೇರಾವ್ ಹಾಕಿದ್ದ ಘಟನೆ ನಡೆದಿತ್ತು.
ಕನ್ನಡ ರಾಜ್ಯೋತ್ಸವವು ಕರ್ನಾಟಕದ ನೆಲ ಜಲ ಭಾಷೆ ಸಂಸ್ಕೃತಿ ಪರಂಪರೆಯ ಪ್ರತೀಕ ನಾಡಿನ ಗೌರವ ಸ್ವಾಭಿಮಾನದ ಸಂಕೇತ. ನಮ್ಮ ನಾಡು ನುಡಿಯನ್ನ ರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಯುವ ಪೀಳಿಗೆಗೆ ನಮ್ಮ ನಾಡಿನ ಇತಿಹಾಸ ಸಂಸ್ಕೃತಿ ಮತ್ತು ಕಲೆಯ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ರಾಜ್ಯ ಸರ್ಕಾರದ ಸೂಚನೆಯಂತೆ ಈ ಬಾರಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವವನ್ನು ಸರ್ಕಾರಿ ಕಚೇರಿ, ಖಾಸಗಿ ಸಂಸ್ಥೆಗಳಲ್ಲಿ, ಐಟಿ ಬಿಟಿ ಕಂಪನಿಗಳಲ್ಲಿ, ವ್ಯಾಪಾರ ಸಂಸ್ಥೆಗಳಲ್ಲಿಯೂ ಸಹ ತಪ್ಪದೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಿ ನಮ್ಮ ಹೆಮ್ಮೆಯ ನಾಡಧ್ವಜವನ್ನು ಧ್ವಜಾರೋಹಣ ಮಾಡಿ ನಾಡ ಧ್ವಜಕ್ಕೆ ಗೌರವವನ್ನು ಸಲ್ಲಿಸಬೇಕೆಂದು ಸರ್ಕಾರವು ಆದೇಶವನ್ನು ನೀಡಿದ್ದರು. ಸಹ ಮಧುಗಿರಿ ವಲಯ ಅಬಕಾರಿ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಮಾಡದೆ ನಾಡ ಧ್ವಜವನ್ನು ಧ್ವಜಾರೋಹಣ ಮಾಡದೆ ಸರ್ಕಾರದ ಆದೇಶವನ್ನು ಗಾಳಿಗೆ ತೂರಿದ್ದ ಘಟನೆ ನಡೆದಿತ್ತು.
ಕನ್ನಡಪರ ಹೋರಾಟಗಾರರು ಈ ವಿಚಾರ ತಿಳಿದ ತಕ್ಷಣ ಮಧುಗಿರಿ ವಲಯ ಅಬಕಾರಿ ಕಚೇರಿಗೆ ತೆರಳಿ ಡಿವೈಎಸ್ಪಿ ಚಂದ್ರಪ್ಪಗೆ ತಿಳುವಳಿಕೆ ನೀಡುವ ಕಾರ್ಯ ಮಾಡಿದ್ದರು. ಮತ್ತು ಮೇಲಾಧಿಕಾರಿಗಳ ಗಮನಕ್ಕೆ ಈ ವಿಚಾರವನ್ನು ತಂದಿದ್ದರು. ಆದರೆ ಬೇಜವಾಬ್ದಾರಿ ತನದಿಂದ ಕನ್ನಡಪರ ಹೋರಾಟಗಾರರಿಗೆ ಉತ್ತರ ನೀಡಿದ್ದು ಕಂಡುಬಂದಿತ್ತು. ಅಬಕಾರಿ ಡಿವೈಎಸ್ಪಿ ಚಂದ್ರಪ್ಪ ನಡೆದುಕೊಂಡ ರೀತಿಯನ್ನು ಕನ್ನಡಪರ ಹೋರಾಟಗಾರರು ತೀವ್ರವಾಗಿ ಖಂಡಿಸಿದ್ದರು. ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದ್ದವು.
ಕನ್ನಡಪರ ಹೋರಾಟಗಾರರು ಅಧಿಕಾರಿಗಳ ಗಮನ ಸೆಳೆಯಲು ಮುಂದಾದಾಗ ಡಿವೈಎಸ್ಪಿ ಚಂದ್ರಪ್ಪ ಅಬಕಾರಿ ಇನ್ಸ್ಪೆಕ್ಟರ್ ಮೇಲೆ ಇನ್ಸ್ಪೆಕ್ಟರ್ ರವರು ಡಿವೈಎಸ್ಪಿರವರ ಮೇಲೆ ಹಾಕಿ, ಧ್ವಜವನ್ನು ಹಾರಿಸುವ ವಿಷಯದಲ್ಲಿ ಪಲಾಯನ ಮಾಡುವ ಕೆಲಸ ಮಾಡಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೋರಾಟಗಾರರು ಕಿಡಿಕಾರಿದ್ದರು.
ನೆಲ ಒರೆಸುವ ಕಡ್ಡಿಗೆ ನಾಡ ಧ್ವಜ ಸಿಕ್ಕಿಸಿ ಅಪಮಾನ:
ಕಚೇರಿಯ ನೆಲ ಒರೆಸುವ ಮಾಪ್ ಕಡ್ಡಿಗೆ ನಾಡ ಧ್ವಜವನ್ನು ಸಿಕ್ಕಿಸಿ ನಾಡಧ್ವಜಕ್ಕೆ ಅವಮಾನ ಮಾಡಿರುವ ಘಟನೆಯೂ ಸಹ ಕಚೇರಿಯಲ್ಲಿ ನಡೆದಿತ್ತು. ಕನ್ನಡಪರ ಹೋರಾಟಗಾರರು ಇದರ ವಿರುದ್ಧ ಧ್ವನಿ ಎತ್ತಿದಾಗ ಅಬಕಾರಿ ಡಿವೈಎಸ್ಪಿ ಚಂದ್ರಪ್ಪ ಉತ್ತರ ಕೊಡದೆ ಪಲಾಯನ ಮಾಡಲು ಮುಂದಾಗಿದ್ದು ನಾಚಿಕೆಗೇಡಿನ ಸಂಗತಿಯಾಗಿತ್ತು.
ಕಾಳಜಿ ಫೌಂಡೇಶನ್ ವತಿಯಿಂದ ಅಬಕಾರಿ ಉಪ ಆಯುಕ್ತರಿಗೆ ದೂರು:
ಕನ್ನಡಿಗರ ತೆರಿಗೆ ಹಣದಲ್ಲಿ ಸಂಬಳ ಪಡೆಯುತ್ತಿರುವ ಸರ್ಕಾರಿ ಅಧಿಕಾರಿಗಳೇ ಇಂತಹ ತಪ್ಪುಗಳನ್ನು ಮಾಡಿದರೆ ಹೇಗೆ ಕನ್ನಡದ ವಿರೋಧಿಯಾಗಿ ನಡೆದುಕೊಂಡ ಅಬಕಾರಿ ಡಿವೈಎಸ್ಪಿ ಚಂದ್ರಪ್ಪ ಮತ್ತು ಇನ್ಸ್ಪೆಕ್ಟರ್ ರಾಮ್ ಮೂರ್ತಿ ರವರನ್ನು ತಕ್ಷಣ ಅಮಾನತ್ತು ಮಾಡಬೇಕೆಂದು ಕಾಳಜಿ ಫೌಂಡೇಶನ್ ತುಮಕೂರು ಮತ್ತು ಕರ್ನಾಟಕ ರಣಧೀರರ ವೇದಿಕೆ ಕಾರ್ಯಕರ್ತರು ಜಿಲ್ಲಾ ಅಬಕಾರಿ ಉಪ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ನಾಡಿನ ನೆಲ ಜಲ ಭಾಷೆಯ ಸಂಸ್ಕೃತಿ, ಪರಂಪರೆ ಸ್ವಾಭಿಮಾನವನ್ನು ಸಾರುವ ಕನ್ನಡ ರಾಜ್ಯೋತ್ಸವದ ಹಬ್ಬವನ್ನು ಆಚರಣೆ ಮಾಡುವಲ್ಲಿ ಉದ್ದಟತನ ಮತ್ತು ನಿರ್ಲಕ್ಷತೆ ತೋರಿದ ಮಧುಗಿರಿ ವಲಯ ಅಬಕಾರಿ ಇಲಾಖೆಯ ಡಿವೈಎಸ್ಪಿ ಚಂದ್ರಪ್ಪ ಮತ್ತು ಇನ್ಸ್ಪೆಕ್ಟರ್ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಸೇವೆಯಿಂದ ಅವರನ್ನು ವಜಾಗೊಳಿಸಿ ಸಮಗ್ರ ತನಿಖೆ ನಡೆಸಬೇಕು.
–ಮಂಜುಸ್ವಾಮಿ ಎಂ.ಎನ್., ಅಧ್ಯಕ್ಷರು, ಕರ್ನಾಟಕ ರಣಧೀರರ ವೇದಿಕೆ.
ಸರ್ಕಾರಿ ಕೆಲಸ ದೇವರ ಕೆಲಸವೆಂದು ಪರಿಗಣಿಸಿ ಸರ್ಕಾರಿ ನೌಕರರು ನಿಷ್ಠಾವಂತರಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಆದರೆ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಕೆಡಿಪಿ ಸಭೆಗೆ ಗೈರು ಹಾಜರಾಗಿ ಸಹಕಾರ ಸಚಿವ ಕೆ.ಎನ್. ರಾಜಣ್ಣರವರಿಂದ ಛೀಮಾರಿ ಹಾಕಿಸಿಕೊಂಡು. ಸ್ವತಃ ಸಹಕಾರ ಸಚಿವ ಕೆ.ಎನ್. ರಾಜಣ್ಣರವರೇ ಅಬಕಾರಿ ಡಿವೈಎಸ್ಪಿ ಚಂದ್ರಪ್ಪರವನ್ನು ಅಮಾನತ್ತು ಮಾಡಬೇಕೆಂದು ಅಬಕಾರಿ ಸಚಿವರಿಗೆ ಮತ್ತು ಸರ್ಕಾರಕ್ಕೆ ಪತ್ರ ಬರೆದಿದ್ದರು . ಸರ್ಕಾರ ಇಲ್ಲಿಯವರೆಗೂ ಕ್ರಮ ಕೈಗೊಂಡಿಲ್ಲ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವಲ್ಲಿ ನಿರ್ಲಕ್ಷ್ಯ ತೋರಿದ ಕನ್ನಡಿಗರ ವಿರೋಧಿ ಅಬಕಾರಿ ಡಿವೈಎಸ್ಪಿ ಚಂದ್ರಪ್ಪರವನ್ನು ಇಲಾಖೆ ತಕ್ಷಣವೇ ಅಮಾನತು ಮಾಡಬೇಕು.
–ಜಿ.ಎಲ್.ನಟರಾಜು ಅಧ್ಯಕ್ಷರು, ಕಾಳಜಿ ಫೌಂಡೇಶನ್, ತುಮಕೂರು.
ಈ ಸಂದರ್ಭದಲ್ಲಿ ಕಾಳಜಿ ಫೌಂಡೇಶನ್ ಅಧ್ಯಕ್ಷರಾದ ಜಿ.ಎಲ್.ನಟರಾಜ್, ಉಪಾಧ್ಯಕ್ಷ ರಫೀಕ್ ಪಾಷಾ, ಕಾರ್ಯದರ್ಶಿ ಮುನಿಲಕ್ಷ್ಮಯ್ಯ ಸಂಘಟನಾ ಕಾರ್ಯದರ್ಶಿ ಮಧುಗಿರಿ ಮಹೇಶ್, ಕಾನೂನು ಸಲಹೆಗಾರರಾದ ಶಿವಕುಮಾರ್ ಮೇಷ್ಟ್ರು ಮನೆ, ಎಂ.ಎಸ್. ಗಣೇಶ್, ಮೋಹನ್ ಎಸ್.ಎಲ್. ಪದ್ಮನಾಭ ಮತ್ತು ಕರ್ನಾಟಕ ರಣಧೀರರ ವೇದಿಕೆಯ ಮಂಜುಸ್ವಾಮಿ ಎಂ.ಎನ್., ಮುತ್ತುರಾಜು, ಸತೀಶ್, ನಾಗೇಶ್, ಸುರೇಶ್ ಮತ್ತು ಕಾರ್ಯಕರ್ತರು ಮಧುಗಿರಿ ವಲಯ ಅಬಕಾರಿ ಡಿವೈಎಸ್ಪಿ ಮತ್ತು ಇನ್ಸ್ಪೆಕ್ಟರ್ ವಿರುದ್ಧ ಜಿಲ್ಲಾ ಅಬಕಾರಿ ಉಪ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q