ಮಧುಗಿರಿ: ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಪುರಸಭೆ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಕಾಳಜಿ ಫೌಂಡೇಶನ್ (ರಿ) ತುಮಕೂರು ತಂಡ ಮನವಿ ಮಾಡಿದೆ.
ಮಧುಗಿರಿ ಪುರಸಭೆ ವ್ಯಾಪ್ತಿಯಲ್ಲಿ, ವಿಶೇಷವಾಗಿ 23ನೇ ವಾರ್ಡ್‌ನಲ್ಲಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನವರಿ 16ರಂದು ಸಂಜೆ ಎಸ್.ಎಂ. ಕೃಷ್ಣ ಬಡಾವಣೆಯ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಶಾಲೆ ಮುಗಿಸಿ ಮನೆಗೆ ತೆರಳುವಾಗ, ಶಾಲೆಯಿಂದ ಸುಮಾರು 700 ಮೀಟರ್ ದೂರದಲ್ಲಿ ಎರಡು ನಾಯಿಗಳು ಆಕೆಯ ಮೇಲೆ ಬೀದಿನಾಯಿಯೊಂದು ದಾಳಿ ನಡೆಸಿದ್ದು, ಈ ವೇಳೆ ಸ್ಥಳದಲ್ಲಿದ್ದ ಕಾಳಜಿ ಪೌಂಡೇಶನ್ (ರಿ) ತುಮಕೂರು ಇದರ ಸಂಘಟನಾ ಕಾರ್ಯದರ್ಶಿ ಮಧುಗಿರಿ ಮಹೇಶ್ ವಿದ್ಯಾರ್ಥಿನಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಈ ಕುರಿತು ತಕ್ಷಣ ಪುರಸಭೆ ಆರೋಗ್ಯ ನಿರೀಕ್ಷಕರಿಗೆ ಮಾಹಿತಿ ನೀಡಿದಾಗ, ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು, ನಾಯಿಗಳನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಕೆಲವರು ನಾಯಿಯನ್ನು ಹಿಡಿಯದಂತೆ ಜಗಳ ಮಾಡಿದ್ದರಿಂದ ಸಿಬ್ಬಂದಿ ಹಿಂಜರಿಯುವಂತಾಯಿತು. ಹೀಗಾಗಿ ನಾಯಿಗಳನ್ನು ಸುರಕ್ಷಿತವಾಗಿ ಹಿಡಿಯಲು ಪುರಸಭಾ ಸಿಬ್ಬಂದಿಗೆ ಪೊಲೀಸ್ ರಕ್ಷಣೆ ಒದಗಿಸಿ, ಸಾರ್ವಜನಿಕರ ಸುರಕ್ಷತೆಗಾಗಿ ತಕ್ಷಣ ಸೂಕ್ತ ಕ್ರಮ ವಹಿಸುವಂತೆ ಅವರು ಮನವಿ ಮಾಡಿದ್ದಾರೆ.
ವಾಟ್ಸಾಪ್ ಗ್ರೂಪ್ ನಲ್ಲಿ ಚರ್ಚೆ:
ಮಧುಗಿರಿ ಪಟ್ಟಣದ 23ನೇ ವಾರ್ಡ್‌ನಲ್ಲಿ ನಾಯಿಗಳ ಹಾವಳಿಯ ಕುರಿತು ಕಾಳಜಿ ತಂಡ ತುಮಕೂರು ಜಿಲ್ಲೆ ಎಂಬ ವಾಟ್ಸಾಪ್ ಗುಂಪಿನಲ್ಲಿ ಈ ಸಮಸ್ಯೆಯ ಬಗ್ಗೆ ಸದಸ್ಯರು ಚರ್ಚೆ ನಡೆಸಿದ್ದಾರೆ. ಸಾರ್ವಜನಿಕರ ಸುರಕ್ಷತೆಯನ್ನು ಸುಧಾರಿಸಲು ಸಂಬಂಧಪಟ್ಟವರಿಗೆ ದೂರು ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈಗಾಗಲೇ ಸಂಘಟನಾ ಕಾರ್ಯದರ್ಶಿ ಮಧುಗಿರಿ ಮಹೇಶ್ ಅವರು ಮಧುಗಿರಿ ಪುರಸಭಾ ಕಾರ್ಯಾಲಯಕ್ಕೆ ನಾಯಿಗಳ ಹಾವಳಿಯ ನಿಯಂತ್ರಣಕ್ಕಾಗಿ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ. ಇನ್ನಾದರೂ ಬೀದಿನಾಯಿಗಳ ಹಾವಳಿಗೆ ಬ್ರೇಕ್ ಬೀಳುತ್ತಾ ಕಾದು ನೋಡಬೇಕಿದೆ.
ಸಂಬಂಧಪಟ್ಟ ಇಲಾಖೆಯವರು ಹೆಚ್ಚಿನ ಗಮನ ಕೊಟ್ಟು ಬೀದಿನಾಯಿ ಕಾಟ ತಪ್ಪಿಸಿ, ಶಾಲಾ ಮಕ್ಕಳ ಮೇಲೆ ಇದೇ ಮೊದಲ ಬಾರಿಗೆ ಬೀದಿನಾಯಿಗಳು ದಾಳಿ ಮಾಡಿವೆ. ನಾವು ಬೈಕ್ ಗಳಲ್ಲಿ ಹೋಗುವಾಗಲೂ ನಾಯಿ ಓಡಿಸಿಕೊಂಡು ಬರುತ್ತವೆ. ಕೆಲವೊಮ್ಮೆ ಗಾಡಿಯಿಂದ ಬೀಳುವ ಅವಕಾಶಗಳೂ ಇರುತ್ತವೆ. ಬೀದಿ ನಾಯಿಯನ್ನು ಸಾಕುತ್ತಿರುವವರಿಗೆ ನಾಯಿಯನ್ನು ಕಟ್ಟಿಹಾಕಿ ಎಂದು ತಿಳಿಸಿದ್ದೇವೆ. ಪುರಸಭೆಯವರು, ಪಶುಸಂಗೋಪನಾ ಇಲಾಖೆಯವರು ಈ ಬಗ್ಗೆ ಗಮನ ವಹಿಸಬೇಕು.
— ಶ್ರೀಧರ್, ಶಾಲೆಯ ಮುಖ್ಯ ಶಿಕ್ಷಕ
ಬೀದಿನಾಯಿಗಳ ದಾಳಿಯಿಂದಾಗಿ ಮಕ್ಕಳ ಪೋಷಕರು ಆತಂಕದಲ್ಲಿದ್ದಾರೆ. ಸಂಬಂಧಪಟ್ಟ ಪುರಸಭೆ ಮುಖ್ಯಾಧಿಕಾರಿಗಳು ಮತ್ತು ಪಶುವೈದ್ಯ ಇಲಾಖಾ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮವಹಿಸಿ, ಬೀದಿ ನಾಯಿಗಳ ಹಾವಳಿಯಿಂದ ಮಕ್ಕಳ ರಕ್ಷಣೆ ಮಾಡಬೇಕು. ಮಕ್ಕಳಿಗಾಗುವ ಅನಾಹುತಗಳನ್ನು ತಪ್ಪಿಸಬೇಕು.
— ಹನುಮಂತರಾಯಪ್ಪ, ಬಿ.ಇ.ಒ.
ಕರಡಿಪುರ ವ್ಯಾಪ್ತಿಯಲ್ಲಿ ಶಾಲಾ ಮಗುವಿನ ಮೇಲೆ ನಾಯಿ ದಾಳಿ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಹಿಂದೆ ಸಹ ನಮ್ಮ ಸಿಬ್ಬಂದಿಗಳನ್ನು ಅಲ್ಲಿಗೆ ಕಳುಹಿಸಿ ಯಾವ ನಾಯಿಗಳು, ಯಾವ ಥರ ಇದ್ದಾವೆ ಎನ್ನುವುದರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇವೆ. ಪಶುವೈದ್ಯ ಇಲಾಖೆಯವರೊಂದಿಗೆ ಚರ್ಚೆ ಮಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಹೆಚ್ಚು ನಾಯಿಗಳಾಗಿದ್ದಾವೆ, ಈ ಬಗ್ಗೆ ಹಿಂದೆ ನಾವು ಟೆಂಡರ್ ಪ್ರಕ್ರಿಯೆ ಕರೆದಿದ್ವಿ, ಯಾರೂ ಪಾಲ್ಗೊಂಡಿಲ್ಲ, ಮತ್ತೆ ಟೆಂಡರ್ ಕರೆದು ಆದಷ್ಟು ಬೇಗ, ನಾಯಿಗಳಿಗೆ ಸಂತನಾಹರಣ ಶಸ್ತ್ರ ಚಿಕಿತ್ಸೆ ನಡೆಸಲು ಕ್ರಮವಹಿಸುತ್ತೇವೆ.
— ಸುರೇಶ್, ಪುರಸಭೆ ಮುಖ್ಯಾಧಿಕಾರಿ
ಮಗುವಿನ ಮೇಲೆ ನಾಯಿ ದಾಳಿ ಮಾಡಿರುವುದು ಅತ್ಯಂತ ಭಯಭೀತವಾದ ಪರಿಸ್ಥಿತಿ ನಿರ್ಮಾಣ ಮಾಡಿದೆ. ಇಲ್ಲಿ ಮಕ್ಕಳಿಗೆ ಓಡಾಡಲು ಒಂದು ಸುರಕ್ಷಿತ ವಾತಾವರಣವನ್ನು ಸ್ಥಳೀಯ ಆಡಳಿತ ನಿರ್ಮಾಣ ಮಾಡಿಲ್ಲ. ಅಲ್ಲಿ ಆಡಳಿತ ಅಧಿಕಾರಿ, ನಾವು ನಾಯಿ ಹಿಡಿಯಲು ಟೆಂಡರ್ ಕರೆದಿದ್ವಿ ಆದರೆ ಯಾರೂ ಬಂದಿಲ್ಲ, ಹಾಗಾಗಿ ಮತ್ತೆ ಕರಿತೀನಿ ಅಂತಾರೆ, ಅಷ್ಟರಲ್ಲಿ ಎಷ್ಟು ಮಕ್ಕಳು ಆ ಬೀದಿ ನಾಯಿಗಳಿಗೆ ಬಲಿಯಾಗುತ್ತಾರೋ? ಅದನ್ನು ಯೋಚನೆ ಮಾಡಬೇಕಿದೆ. ಬಿಇಒ ಹಾಗೂ ಮುಖ್ಯ ಶಿಕ್ಷಕರು ಅಸಹಾಯಕತೆಯಿಂದ ಕೈಚೆಲ್ಲಿದ್ದಾರೆ. ಹಾಗಾಗಿ ಪುರಸಭೆಯವರು ತಕ್ಷಣವೇ ಕ್ರಮಕೈಗೊಳ್ಳಬೇಕು. ಈಗಾಗಲೇ ನಾವು ಕಾಳಜಿ ತಂಡದಿಂದ ಮನವಿ ಕೂಡ ನೀಡಿದ್ದೇವೆ. ಬಡವರ ಮಕ್ಕಳನ್ನು ಬದುಕಲು ಬಿಡಿ, ನಾಯಿಗಳ ಹಾವಳಿಯನ್ನು ನಿಯಂತ್ರಣ ಮಾಡಿ, ಸಾಕು ನಾಯಿಗಳಿದ್ದರೆ, ಮಾಲಿಕರಿಗೆ ಕಡ್ಡಾಯವಾಗಿ ನಿರ್ದೇಶನ ನೀಡಿ, ಮಕ್ಕಳನ್ನು ನಾಯಿಗಳಿಂದ ರಕ್ಷಿಸಿ, ಮುಂದಿನ ದಿನಗಳಲ್ಲಿ ನಾಯಿ ಯಾವುದೇ ಮಕ್ಕಳ ಮೇಲೆ ದಾಳಿ ಮಾಡಿದರೆ ಕಾಳಜಿ ತಂಡ ನಿಮ್ಮ ವಿರುದ್ಧವೇ ಪ್ರಕರಣ ದಾಖಲು ಮಾಡುತ್ತದೆ.
— ಶಿವಕುಮಾರ್ ಮೇಷ್ಟ್ರು ಮನೆ
ಕಾನೂನು ಸಲಹೆಗಾರರು/ ನಿರ್ದೇಶಕರು, ಕಾಳಜಿ ಪೌಂಡೇಶನ್ (ರಿ) ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx