ಬೆಂಗಳೂರು: ಮಳಿಗೆಗಳ ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಬಳಸದ 18 ಉದ್ದಿಮೆಗಳನ್ನು ತಾತ್ಕಾಲಿಕವಾಗಿ ಬಿಬಿಎಂಪಿ ವತಿಯಿಂದ ಮುಚ್ಚಿಸಲಾಗಿದೆ.
ನಗರದ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಮತ್ತು ರೆಸಿಡೆನ್ಸಿ ರಸ್ತೆಯಲ್ಲಿ ಇದುವರೆಗೆ 200ಕ್ಕೂ ಹೆಚ್ಚು ವಾಣಿಜ್ಯ ಮಳಿಗಳನ್ನು ಪರಿಶೀಲಿಸಲಾಗಿದ್ದು, ಈ ಪೈಕಿ 170ಕ್ಕೂ ಹೆಚ್ಚು ಮಳಿಗೆಗಳಲ್ಲಿ ಈಗಾಗಲೇ ಕನ್ನಡ ನಾಮಫಲಕಗಳನ್ನು ಅಳವಡಿಸಿಕೊಂಡಿರುತ್ತಾರೆ. ಇನ್ನು ಕನ್ನಡ ನಾಮಫಲಕ ಅಳವಡಿಸದೇ ಇರುವ ಮಳಿಗೆಗಳ ಮಾಲೀಕರಿಗೆ ಅಂತಿಮ ತಿಳುವಳಿಕೆ ಪತ್ರ ನೀಡಿ, ಕೂಡಲೇ ನಾಮಫಲಕ ಬದಲಾಯಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಬ್ರಿಗೇಡ್ ರಸ್ತೆ, ಎಂ.ಜಿ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್ ಗಳಲ್ಲಿ ಕನ್ನಡ ನಾಮಫಲಕ ಬಳಸದ ಅಂಗಡಿಗಳಿಗೆ ಬಿಬಿಎಂಪಿ ಪೂರ್ವ ವಲಯದ ಸಿಬ್ಬಂದಿ ಎಚ್ಚರಿಕೆ ನೀಡಿದರು.
ಈಗಿರುವ ನಾಮಫಲಕಗಳಲ್ಲಿ ಇಂಗ್ಲಿಷ್ ಅಕ್ಷರಗಳನ್ನು ಮುಚ್ಚಿ, ಕನ್ನಡವನ್ನು ಚಿಕ್ಕದಾಗಿ ಕಾಣುವಂತೆ ಕೆಲವು ಮಾಡಿದ್ದಾರೆ. ಇದು ಸರಿಯಲ್ಲ. ಶೇ 60ರಷ್ಟು ಕನ್ನಡ ಇರಲೇಬೇಕು ಎಂದು ಮಳಿಗೆಯವರಿಗೆ ತಾಕೀತು ಮಾಡಿದರು.


