67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆಯಲಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ರಾಜ್ಯದ 25 ಲಕ್ಷ ವಿದ್ಯಾರ್ಥಿಗಳು ಮತ್ತು 2 ಲಕ್ಷ ಸ್ವಸಹಾಯ ಸಂಘಗಳ 29 ಲಕ್ಷ ಸದಸ್ಯರು ಸೇರಿದಂತೆ ತಮ್ಮ ಇಲಾಖೆಗಳ ವ್ಯಾಪ್ತಿಯಿಂದ 54 ಲಕ್ಷಕ್ಕೂ ಹೆಚ್ಚು ಮಂದಿ ಭಾಗಿಯಾಲಿದ್ದಾರೆ ಎಂದು ಉನ್ನತ ಶಿಕ್ಷಣ ಮತ್ತು ಜೀವನೋಪಾಯ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲಕುಮಾರ್ ಅವರೊಂದಿಗೆ ಮಂಗಳವಾರ ಅವರು ಸಭೆ ನಡೆಸಿದರು. ಬಳಿಕ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆರಿಸಿರುವ 6 ಹಾಡುಗಳನ್ನು ರಾಜ್ಯೋತ್ಸವದಂದು ರಾಜ್ಯದ ಎಲ್ಲಾ ಸರಕಾರಿ ಮತ್ತು ಖಾಸಗಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಹಾಡಲಾಗುವುದು. ಜತೆಗೆ ಸಂಜೀವಿನಿ ಸ್ವಸಹಾಯ ಸಂಘಗಳ ಸದಸ್ಯೆಯರು ಕೂಡ ಈ ಸಂಭ್ರಮದ ಭಾಗವಾಗಲಿದ್ದಾರೆ ಎಂದರು.
ಹೋದ ವರ್ಷದ ರಾಜ್ಯೋತ್ಸವದಲ್ಲಿ ‘ಮಾತಾಡ್ ಮಾತಾಡು ಕನ್ನಡ’ ಕಾರ್ಯಕ್ರಮದಲ್ಲಿ 22 ಲಕ್ಷ ಜನ ಪಾಲ್ಗೊಂಡಿದ್ದರು. ಈ ವರ್ಷ ‘ಕೋಟಿ ಕಂಠ ಗಾಯನದಲ್ಲಿ ಒಂದು ಕೋಟಿ ಜನ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ರಾಜ್ಯೋತ್ಸವವನ್ನು ಆಜಾದಿ ಕಾ ಅಮೃತ ಮಹೋತ್ಸವಕ್ಕಿಂತ ಹೆಚ್ಚು ಅದ್ದೂರಿಯಾಗಿ ನಡೆಸಲಾಗುವುದು. ಮನೆಮನೆಗಳಲ್ಲೂ ಕನ್ನಡ ಬಾವುಟ ಹಾರಾಡುವಂತೆ ಆಗಬೇಕು ಎನ್ನುವುದು ತಮ್ಮ ಹಂಬಲ ಎಂದು ಅವರು ನುಡಿದರು.
ಹಿಂದೆ ಕಾಂಗ್ರೆಸ್ ಕಾಲದಲ್ಲಿ ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಹಿಂದಿಯನ್ನು ಹೇರಲಾಗಿತ್ತು. ಈಗ ವಿದ್ಯಾರ್ಥಿಗಳು ತಮಗೆ ಇಷ್ಟ ಬಂದ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಕಾಂಗ್ರೆಸ್ ಮಾಡಿದ ತಪ್ಪುಗಳನ್ನು ನಾವು ಸರಿಪಡಿಸುತ್ತಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದ ಸಮಿತಿಯು ಇತ್ತೀಚೆಗೆ ಸಲ್ಲಿಸಿರುವ ವರದಿಯಲ್ಲಿ ಹಿಂದಿಯನ್ನು ಕಡ್ಡಾಯ ಮಾಡಿಲ್ಲ. ಈ ಬಗ್ಗೆ ಸುಮ್ಮನೆ ಕಲ್ಪನೆ ಮಾಡಿಕೊಂಡು ಮಾತನಾಡುವುದು ಬೇಡ. ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳ ಮತ್ತು ಸಂಸ್ಕೃತಿಗಳ ಬೆಳವಣಿಗೆಗೆ ಬಿಜೆಪಿ ಬದ್ಧವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಸುನೀಲಕುಮಾರ್, ಕೋಟಿ ಕಂಠ ಗಾಯನದಲ್ಲಿ ಆರು ಹಾಡುಗಳ ಗಾಯನ ಕಡ್ಡಾಯವಾಗಿದೆ. ನಂತರ ಬೇಕಾದರೆ ಕನ್ನಡಪರವಾದ ಎಷ್ಟು ಗೀತೆಗಳನ್ನು ಬೇಕಾದರೂ ಹಾಡಬಹುದು ಎಂದರು.
ಐಟಿ, ಬಿಟಿ ಸೇರಿದಂತೆ ಎಲ್ಲಾ ಇಲಾಖೆಗಳನ್ನೂ ರಾಜ್ಯೋತ್ಸವ ಸಂಭ್ರಮದಲ್ಲಿ ಸೇರಿಸಿ ಕೊಳ್ಳಲಾಗುವುದು. ಈ ಸಂಬಂಧ ಸಭೆಗಳನ್ನು ನಡೆಸಲಾಗುವುದು ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ‘ನನ್ನ ನಾಡು ನನ್ನ ಹಾಡು’ ಪೋಸ್ಟರ್ ಅನ್ನು ಸಚಿವರು ಬಿಡುಗಡೆ ಮಾಡಿದರು. ಶಾಸಕ ರಾಜಕುಮಾರ ಪಾಟೀಲ್ ಕೂಡ ಇದ್ದರು.
ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮಂಜುಳಾ, ಬೆಂಗಳೂರು ನಗರ ವಿವಿ ಕುಲಪತಿ ಪ್ರೊ ಲಿಂಗರಾಜ ಗಾಂಧಿ, ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ ನಿರಂಜನ, ನೃಪತುಂಗ ವಿವಿ ಕುಲಪತಿ ಪ್ರೊ ಶ್ರೀನಿವಾಸ ಬಳ್ಳಿ, ಮಹಾರಾಣಿ ವಿವಿ ಕುಲಪತಿ ಸೇರಿದಂತೆ ಇತರ ಅಧಿಕಾರಿಗಳು ಈ ಸಭೆಯಲ್ಲಿ ಹಾಜರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy