ಕೆಂಗೇರಿ: ಉಪನಗರದಲ್ಲಿರುವ ಶೇಷಾದ್ರಿಪುರಂ ಅಕಾಡೆಮಿ ಆಫ್ ಬಿಸಿನೆಸ್ ಸ್ಟಡೀಸ್ ಕಾಲೇಜಿನಲ್ಲಿ ಮಂಗಳವಾರದಂದು “ಸಶಕ್ತ ಭಾರತಕ್ಕಾಗಿ ಸಮಾನ ಅವಕಾಶಗಳು” ಎಂಬ ವಿಷಯದಡಿ ಅಂತರ್ ಕಾಲೇಜು ಯುವ ಸಮಾವೇಶ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8.30ಕ್ಕೆ ಆಶುಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ನಂತರ 11.30ಕ್ಕೆ ನಡೆದ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಬಿ.ಟಿ. ಲಲಿತಾ ನಾಯಕ್ ಅವರು “ಸಶಕ್ತ ಭಾರತಕ್ಕಾಗಿ ಸಮಾನ ಅವಕಾಶಗಳು” ವಿಷಯದ ಕುರಿತು ಅನುಭವಪೂರ್ಣ ಉಪನ್ಯಾಸ ನೀಡಿ, ವಿದ್ಯಾರ್ಥಿಗಳೊಂದಿಗೆ ಅರ್ಥಪೂರ್ಣ ಪ್ರಶ್ನೋತ್ತರ ಸಂವಾದ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಕೆ. ಕೃಷ್ಣಸ್ವಾಮಿ ಅವರು ಕಡಿದಾಳ್ ಮಂಜಪ್ಪ ಅವರ ಸಮಾಜಸೇವೆ ಹಾಗೂ ರಾಷ್ಟ್ರಸೇವೆಯ ಉದಾಹರಣೆಗಳನ್ನು ನೀಡುತ್ತಾ ಪ್ರೇರಣಾದಾಯಕ ವಿಚಾರಗಳನ್ನು ಹಂಚಿಕೊಂಡರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯರಾಮ ಅವರು ಪ್ರಸ್ತಾವಿಕ ನುಡಿಗಳ ಮೂಲಕ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ಕಾರ್ಯಕ್ರಮದ ಸಂಯೋಜಕರಾದ ಡಾ.ಪೂರ್ಣಿಮಾ ಎಸ್. ಅವರು ಆತ್ಮೀಯವಾಗಿ ಸ್ವಾಗತಿಸಿ ನಿರೂಪಣೆ ನಡೆಸಿದರು. ಐಕ್ಯೂಎಸಿ ಸಂಚಾಲಕರಾದ ಡಾ. ರೂಪಶ್ರೀ ಅವರು ವಂದನಾರ್ಪಣೆ ಸಲ್ಲಿಸಿದರು. ಆಶುಭಾಷಣ ಸ್ಪರ್ಧೆಗೆ ತೀರ್ಪುಗಾರರಾಗಿ ಕಾಲೇಜಿನ ಹಳೆಯ ವಿದ್ಯಾರ್ಥಿ ಲಿಖಿತ್ ಎನ್. ಕಾರ್ಯನಿರ್ವಹಿಸಿದರು.
ಸ್ಪರ್ಧೆಯ ಫಲಿತಾಂಶದಲ್ಲಿ ಶೇಷಾದ್ರಿಪುರಂ ಕಾನೂನು ಕಾಲೇಜಿನ ಲಾವಣ್ಯ ಅವರು ಪ್ರಥಮ ಬಹುಮಾನ (₹1000) ಪಡೆದರು. ಕನಕಪುರ ರೂರಲ್ ಕಾಲೇಜಿನ ಆದರ್ಶ ಅವರು ದ್ವಿತೀಯ ಬಹುಮಾನ (₹750) ಗಳಿಸಿದರು. ಎಸ್‌ಎಬಿಎಸ್ ಕಾಲೇಜಿನ ಲಿಖಿತಾ ಎಸ್ ಅವರು ತೃತೀಯ ಬಹುಮಾನ (₹500) ಪಡೆದರು. ತಲಾ ₹250/- ರೂಗಳಂತೆ ಮೂರು ಸಮಾಧಾನಕರ ಬಹುಮಾನಗಳನ್ನು ಕೆಂಗೇರಿ ಪ್ರಥಮ ದರ್ಜೆ ಕಾಲೇಜಿನ ಡಿ.ವಿ. ಶ್ರೀನಿವಾಸ್, ಬಿಷಪ್ ಕಾಟನ್ ಕಾಲೇಜಿನ ಆಯಿಷಾ ಸಿದ್ಧಿಕಿ ಹಾಗೂ ಎಸ್‌ಎಬಿಎಸ್ ಕಾಲೇಜಿನ ಪವಿತ್ರ ಡಿ. ಪಡೆದುಕೊಂಡರು.
ಒಟ್ಟಾರೆ ಕಾರ್ಯಕ್ರಮವು ಮಧ್ಯಾಹ್ನ 1.30ಕ್ಕೆ ಯಶಸ್ವಿಯಾಗಿ ಸಮಾಪ್ತಿಗೊಂಡಿತು. ಈ ಸಮಾವೇಶವು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜಾಗೃತಿ ಮತ್ತು ಸಮಾನ ಅವಕಾಶಗಳ ಮಹತ್ವವನ್ನು ಅರಿವು ಮೂಡಿಸಿದ ಮಹತ್ವದ ವೇದಿಕೆಯಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


