- ಜೆ.ರಂಗನಾಥ, ತುಮಕೂರು
ಸುತ್ತಲೂ ಆಚ್ಚ ಹಸಿರು, ತೆಂಗು –ಕಂಗು ಗಳ ನಡುವೆ ನವಿಲುಗಳ ನರ್ತನ ,ಈ ನಡುವೆ ಕಂಗೊಳಿಸುವ ಐತಿಹಾಸಿಕ ತಾಣವೇ ಕುಚ್ಚಂಗಿ.
ಸುಮಾರು 900 ವರ್ಷಗಳ ಇತಿಹಾಸ ವಿರುವ ಈ ಜೈನ ಬಸದಿ ಕ್ರಿಸ್ತಶಕ. 1180. ರಲ್ಲಿ ಬಮ್ಮಸೆಟ್ಟಿ ಕುಟುಂಬಸ್ಥರು ನಿರ್ಮಿಸಿದ್ದಾರೆ. ಮೂಲ ಸಂಘದ ದೇಸಿ ಗಣಿಯ ಹನಸೋಗೆ ಶಾಖೆಯ ನಯಸೇನಾ ಸಿದ್ಧಾಂತ ಶ್ರೀಗಳವರ ಶಿಷ್ಯರಾದ ಆಧ್ಯಾತ್ಮ ಬಾಲಚಂದ್ರ ದೇವರ ಪ್ರಭಾವದಿಂದ ನಿರ್ಮಿಸಿದೆ. ಈ ಬಸದಿಗೆ, ಬಮ್ಮ ಶೆಟ್ಟಿ ವಂಶಸ್ಥರು ಅಡಿಕೆ ವ್ಯಾಪಾರದಲ್ಲಿ ಹೆಚ್ಚು ಪ್ರವೃತ್ತರಾಗಿ ಹೆಸರು ಮಾಡಿದ್ದರಿಂದ ಈ ವಂಶಸ್ಥರಿಗೆ ಈಗಲೂ ” ಗೊಟಡಿಕೆ” ವಂಶಸ್ಥರು ಎಂಬ ಹೆಸರಿದೆ. ಬಮ್ಮಾ ಶೆಟ್ಟಿ ಪುತ್ರ ಕೇಸರಿ ಶೆಟ್ಟಿ ಶ್ರೀ ಪಾರ್ಶ್ವನಾಥ ಬಸದಿಯನ್ನು ನಿರ್ಮಿಸಿ ದತ್ತಿ ನೀಡಿದ್ದರು. ಈ ಗೋಟಡಿಕೆ ವಂಶಸ್ಥರು ಬೆಳ್ಳಾವಿ ,ಧಾರವಾಡ ,ಹುಬ್ಬಳ್ಳಿ, ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ವಿವಿಧೇಡಿಗಳಲ್ಲಿ ನೆಲೆಸಿದ್ದಾರೆ.
ಬೊಮ್ಮಾ ಶೆಟ್ಟಿಯು ತನ್ನ ಪುತ್ರ ಕೇಸರಿ ಶೆಟ್ಟಿಯೊಡನೆ ಕುಚ್ಚಂಗಿಗೆ ಬರುವ ಮೊದಲು ಹುಬ್ಬಳ್ಳಿಗೆ 30 ಕಿ.ಮೀ. ದೂರದ “ಆರಟ್ ಪಾಲ್” ಎಂಬಲ್ಲಿ ವಾಸವಾಗಿದ್ದರು. ಚಾಲುಕ್ಯರ ರಾಜ್ಯಡಳಿತದ ಕಾಲದಲ್ಲಿ ಪ್ರಸಿದ್ಧ ವರ್ತಕರೇನಿಸಿದ್ದರೂ. ಕ್ರಿ.ಶ 1145 ರ ಚಾಲುಕ್ಯರ ಇಮ್ಮಡಿ ಜಗದೇವ ಮಲ್ಲನ ಆಳ್ವಿಕೆಯ ಕಾಲದಲ್ಲಿ ಧಾರವಾಡದ. ” ಹರದ ಬಾಳೆಹಳ್ಳಿ”. ಯಲ್ಲಿ ಬಮ್ಮಶೆಟ್ಟಿಯು ಶ್ರೀ ಪಾರ್ಶ್ವನಾಥ ಜಿನಮಂದಿರ ವನ್ನು ನಿರ್ಮಿಸಿದನು. ಇದನ್ನು. ” ಕುಂದ ಕುಂದಾನ್ವಯದೇಸಿ ಗಣ ಪುಸ್ತಕ ಗುಚ್ಛದ ಮಲದಾರಿ ದೇವರಿಗೆ “ವಹಿಸಿ ,ಸಂಪ್ರೋಕ್ಷಣೆ ಮಾಡಿಸಿ, ಅಪಾರವಾದ ದಾನದತ್ತಿಗಳನ್ನು ನೀಡಿದ್ದಾರೆ.
ಅದೇ ವರ್ಷದಲ್ಲಿ ಬಮ್ಮಶೆಟ್ಟಿಯೂ “ಕರಗುದರಿ” ಗ್ರಾಮದಲ್ಲಿ ಶ್ರೀ ಭಗವಾನ್ ಶ್ರೀ ವಿಜಯ ಪಾರ್ಶ್ವನಾಥ ಜೈನ ಮಂದಿರವನ್ನು ಕಟ್ಟಿಸಿದರು. ಇದನ್ನ ನಾಗಚಂದ್ರ ಭಟ್ಟರಕ ಸ್ವಾಮಿಗಳವರ ಮೇಲ್ವಿಚಾರಣೆಗೆ ವಹಿಸಿ ದಾನದತ್ತಿ ನೀಡಿದರು. ಆನಂತರ ಬಮ್ಮಶೆಟ್ಟಿ ಯು ದಕ್ಷಿಣದ ಪ್ರಸಿದ್ಧ ವ್ಯಾಪಾರ ಸ್ಥಳವಾಗಿದ್ದ ತುಮಕೂರು ಸಮೀಪದ ಕುಚ್ಚಂಗಿಗೆ ಬಂದು ನೆಲೆಸಿದರು.
ಬಸದಿಯ ಮಾನಸ್ತಂಭ 18.2 ಅಡಿಗಳ ಎತ್ತರವಿದ್ದು ,ಬಸದಿಯ ಮುಂಭಾಗ ಕೂಗಳತೆಯ ದೂರದಲ್ಲಿ “ಪಾದ ಬೆಟ್ಟ “ವಿರುವ ಗೋಪುರ ಮಂಟಪವಿದೆ. ಬಸದಿಯ ಆವರಣದಲ್ಲಿ ತೀರ್ಥಂಕರರ ಭಿನ್ನ ವಿಗ್ರಹಗಳು, ಶಿಲಾ ಕಂಬಗಳು, ಶ್ರೀ ಶಾಂತಿ ಸಾಗರ ರ ಪಾದಕೆ ಗಳು ಹಾಗೂ ನಾಗಬನವಿದೆ ಈ ಹಿಂದೆ ಕುಚ್ಛಂಗಿ ಪ್ರದೇಶ ಗಂಗಾ ಸಾಮ್ರಾಜ್ಯದ ಆಡಳಿತ ವ್ಯಾಪ್ತಿಗೆ ಸೇರಿತ್ತು, ಕುಚ್ಚಂಗಿ ಒಂದು ಧಾರ್ಮಿಕ ಕೇಂದ್ರವಾಗಿದ್ದು, ವ್ಯಾಪಾರದಲ್ಲಿ ಉನ್ನತ ಸ್ಥಾನದಲ್ಲಿತ್ತು.
ಈ ಬಸದಿಯಲ್ಲಿ ಅನಂತಮೂರ್ತಿ ಪೂಜೆ, ಅಭಿಷೇಕ, ಆರಾಧನೆಗಳು ,ಧಾರ್ಮಿಕ ಕಾರ್ಯಕ್ರಮ, ಭಕ್ತರ ಸಮ್ಮೇಳನದಲ್ಲಿ ನಡೆಯುತ್ತಿದ್ದವು .ನೋಂಪಿಯ ಅಂತಿಮ ದಿನ ವಸಂತ ಒಕಳಿ ಉತ್ಸವ ಹಾಗೂ ಪಾದ ಬೆಟ್ಟದಲ್ಲಿ ಪೂಜಾದಿ ಗಳು ನಡೆಯುತ್ತಿದ್ದವು ಇದರ ವಿಶೇಷತೆ ಎಂಬಂತೆ ಅಂದು( ಮಳೆ) ವರುಣ ದೇವ ಕೃಪೆ ತೋರಿಸುತ್ತಿತ್ತು ಎಂಬ ಪ್ರತೀತಿ ಇದೆ.
ಅಡಿಕೆ ವ್ಯಾಪಾರದಲ್ಲಿ ಹೆಚ್ಚು ಹೆಸರು ಗಳಿಸಿ ಗೋಟ ಡಿಕೆ ವಂಶಸ್ಥರೆಂದು ಹೆಸರಾಗಿದ್ದ ಇವರು, ಹೆಚ್ಚು ವಹಿವಾಟಿನ ಉದ್ದೇಶದಿಂದ ಬೆಳ್ಳಾವಿ ,ಬೆಳಗಾವಿ ಇನ್ನಿತರ ಸ್ಥಳಗಳಲ್ಲಿ ನೆಲೆ ಕಂಡಿದ್ದಾರೆ. ಕೆಲ ಕುಟುಂಬಗಳು ಪರಿಸರದ ಒತ್ತಡದಿಂದ ಸಾದರುಗಳಾಗಿ ,ಸಾದರ್ ಜೈನರಾಗಿದ್ದಾರೆ .ಅದೇ ಮನೆತನದವರು ಕುಚ್ಚಂಗಿ ಗ್ರಾಮದಲ್ಲಿ ಶ್ರೀ ಪಾರ್ಶ್ವನಾಥ ಜೈನ ಬಸದಿ ನಿರ್ಮಿಸಿ ಮನೆ ದೇವರನ್ನ ಗಿಸಿಕೊಂಡು ನೆಲೆಸಿದ್ದಾರೆ.
ಈ ಬಸದಿ ಗರ್ಭಗುಡಿ ,ನವರಂಗ, ಹೊಂದಿದ್ದು ಪೂರ್ವಭಿಮುಖವಾಗಿದ್ದು, ಪ್ರದಕ್ಷಿಣ ಪಥ ಹೊಂದಿದ್ದು, ಬಸದಿ ಎದುರು 18.2 ಅಡಿಗಳ ಎತ್ತರದ ಮಾನಸ್ತಂಭವಿದೆ. ಗರ್ಭಗುಡಿಯ ಪ್ರವೇಶ ದ್ವಾರದ ಪ್ರಭಾವಳಿಯಲ್ಲಿ ತಾಮ್ರದ ಯಕ್ಷ –ಯಕ್ಷರನ್ನು ಸ್ಥಾಪಿಸಲಾಗಿದೆ. ನವರಂಗದ ಎಡಗಡೆ ಪದ್ಮಾವತಿ ,ಬಲಗಡೆ ಮಹಾವೀರ ಇನ್ನಿತರ ಪ್ರತಿಮೆಗಳಿವೆ. ಗರ್ಭಗುಡಿ ಪ್ರವೇಶದ್ವಾರದಲ್ಲಿ ಕಳಸ ಸಮೇತ ಬಳ್ಳಿ ವರಸೆ ಚಿತ್ರಗಳಿವೆ ಗರ್ಭಗುಡಿಯಲ್ಲಿ 5 ಅಡಿಗಳ ಎತ್ತರದ ಶ್ರೀ ಪಾರ್ಶ್ವನಾಥರ ಖಡ್ಗಾಸನ ಬಂಗಿಯ ಮೂರ್ತಿ ವಿರಾಜಮಾನವಾಗಿದೆ. ಬಸದಿಯ ಸುತ್ತಲೂ ಇರುವ ಬೃಹದಾಕಾರದ ರಕ್ಷಣಾ ಗೋಡೆ ಪುರಾತನವಾದ ಗೋಡೆಯಂತಿದ್ದು, ಬಸದಿಯ ಸುತ್ತಲೂ ಅಚ್ಚ ಹಸಿರಿನ ಮಧ್ಯೆ ಕಂಗೊಳಿಸುತ್ತದೆ.
ಈ ಐತಿಹಾಸಿಕ ಶ್ರೀ ಕುಚ್ಚಂಗಿ ಪಾರ್ಶ್ವನಾಥ ಜೈನ ಬಸದಿ ರಾಜಧಾನಿ ಬೆಂಗಳೂರಿನಿಂದ 84 ಕಿ.ಮೀ, ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರವಾಗಿರುವ ತುಮಕೂರಿನಿಂದ 12 ಕಿ.ಮೀ.ಗಳ ದೂರದಲ್ಲಿದೆ.
ತುಮಕೂರಿನಿಂದ ಯಲ್ಲಾಪುರ– ತೊವಿನಕೆರೆ ಮಾರ್ಗವಾಗಿ ಕುಚ್ಚಂಗಿ ಗೇಟಿಗೆ ಬಸ್ ಅಥವ ಇತರೆ ವಾಹನಗಳಲ್ಲಿ 10 ಕಿ.ಮೀ. ಕ್ರಮಿಸಿದರೆ, ಅಲ್ಲಿಂದ ಕುಚ್ಚಂಗಿ ಗ್ರಾಮಕ್ಕೆ 2 ಕಿ.ಮೀ. ಕಾಲು ನಡಿಗೆಯಲ್ಲಿ ಸಂಚರಿಸಬೇಕು. ಕುಚ್ಚಂಗಿ ಶ್ರೀ ಪಾರ್ಶ್ವನಾಥ ಜಿನಮಂದಿರ ದ 55ನೇ ವಾರ್ಷಿಕ ಪೂಜಾ ಮಹೋತ್ಸವ ಹಾಗೂ 108 ಕಳಸ ಗಳ ಮಹಾಭಿಷೇಕ ಪೂಜೆ 2024 ರ ಡಿಸೆಂಬರ್ 29 ರಂದು ಭಾನುವಾರ ನಡೆಯಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx