ಬೆಂಗಳೂರು: ಕನ್ನಡ ಚಲಚಿತ್ರರಂಗದ ವಿಚಾರ ಚರ್ಚೆಯಾಗಲಿ ಎಂಬ ಕಾರಣಕ್ಕಾಗಿಯೇ ತಾವು ನಟ್ಟು, ಬೋಲ್ಟು ವಿಷಯ ಪ್ರಸ್ತಾಪ ಮಾಡಿರುವುದಾಗಿ ಡಿ.ಕೆ.ಶಿವಕುಮಾರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಲನಚಿತ್ರರಂಗದವರಿಗೆ ತಾವು ಎಚ್ಚರಿಕೆ ನೀಡಿದ್ದಕ್ಕೆ ಸಂಬಂಧಪಟ್ಟಂತೆ ಟೀಕೆಗಳಾಗುತ್ತಿವೆ. ಟೀಕೆಗಳು, ಚರ್ಚೆಗಳು ನಡೆಯಬೇಕು, ನನ್ನ ಹೇಳಿಕೆಗೆ ಟೀಕೆ ಪ್ರತಿಕ್ರಿಯೆಗಳು ಬರುತ್ತವೆ ಎಂಬುದು ನನಗೆ ಗೊತ್ತಿತ್ತು. ಅದಕ್ಕೆ ನನಗೆ ಯಾವ ಬೇಜಾರು ಇಲ್ಲ ಎಂದು ಹೇಳಿದ್ದಾರೆ.
ನಾನು ಚಿತ್ರರಂಗದವರಿಗೆ ಎಷ್ಟು ಸಹಾಯ ಮಾಡಿದ್ದೇನೆ ಎಂಬುದು ಗೊತ್ತಿದೆ. ಸಹಾಯ ಪಡೆದುಕೊಂಡವರಿಗೂ ಅದರ ಅರಿವಿದೆ. ನೆಲ, ಜಲ, ಭಾಷೆಯ ವಿಷಯ ಬಂದಾಗ ಚಿತ್ರರಂಗ ದನಿಗೂಡಿಸಬೇಕು. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ನಮಗಾಗಿ ಮಾಡಿಕೊಳ್ಳಲಿಲ್ಲ. ಚಿತ್ರರಂಗದ ಬೆಳವಣಿಗೆಗಾಗಿ ಮಾಡಲಾಯಿತು. ಅವರ ಕಾರ್ಯಕ್ರಮವನ್ನು ಅವರೇ ಪ್ರಚಾರ ಮಾಡಿಕೊಳ್ಳದೆ ದಿನ ಬೆಳಿಗ್ಗೆ, ಸಂಜೆ ನಾವು ಪ್ರಚಾರ ಮಾಡಬೇಕೇ? ಎಂದು ಪ್ರಶ್ನಿಸಿದರು.
ಆಹ್ವಾನ ಪತ್ರಿಕೆ ತಲುಪಿಲ್ಲ ಎಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದ ಕಾರ್ಯಕ್ರಮ ಎಲ್ಲರೂ ಒಟ್ಟಾಗಿ ಮಾಡಬೇಕು. ಚರ್ಚೆಗಳಾಗಲಿ, ಯಾರದು ತಪ್ಪು, ಸರಿ ಎಂದು ವಿಮರ್ಶೆಯಾಗಿ ತಿದ್ದುಪಡಿಯಾಗಲಿ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4