ಸರಗೂರು: ಕ್ಷೇತ್ರದ ಕಾಡಂಚಿನ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಬಹುತೇಕ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ ಹಾಗೂ ಡಾಂಬರೀಕರಣ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಎಚ್.ಡಿ. ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲ್ಲೂಕಿನ ದೇವಲಾಪುರ ಹುಂಡಿ, ಬಾಡಗ, ಹೊಸಕೋಟೆ, ಕಂದಲಿಕೆ ತಿಟ್ಟು, ಮೊಳೆಯೂರು, ನಡಾಡಿ, ಬಂಕವಾಡಿ, ಗದ್ದೆಹಳ್ಳ ಮತ್ತು ಸಾಗರೆ ಗ್ರಾಮಗಳಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸುಮಾರು ರೂ. 3.5 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮೈಸೂರು-ಮಾನಂದವಾಡಿ ರಸ್ತೆ ಅಗಲೀಕರಣ: ಮೈಸೂರು-ಮಾನಂದವಾಡಿ ೪ ಪಥದ ರಸ್ತೆ ಅಗಲೀಕರಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ (ಜನವರಿಯಲ್ಲಿ) ಭೂಮಿ ಪೂಜೆ ನೆರವೇರಿಸಲಾಗುವುದು ಎಂದರು.
ಜಿಲ್ಲೆಯಲ್ಲೇ ಅತ್ಯಂತ ವಿಶಾಲವಾದ ಹಾಗೂ ಹಿಂದುಳಿದ ತಾಲೂಕಾಗಿದ್ದರೂ, ಕಾಂಗ್ರೆಸ್ ಸರ್ಕಾರ ಹೆಚ್ಚಿನ ಕಾಳಜಿ ವಹಿಸಿ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಿದೆ. ಮಾಜಿ ಶಾಸಕ ದಿ. ಚಿಕ್ಕಮಾದು ಹಾಗೂ ಮಾಜಿ ಸಂಸದ ದಿ. ಆರ್. ಧ್ರುವನಾರಾಯಣ್ ಅವರು ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಸ್ಮರಣೀಯ ಎಂದರು.
ಮೂಲಸೌಕರ್ಯ ಹಾಗೂ ಧಾರ್ಮಿಕ ಸ್ಥಳಗಳ ಜೀರ್ಣೋದ್ಧಾರ: ಸರಗೂರು ಮತ್ತು ಕೋಟೆ ಅವಳಿ ತಾಲೂಕುಗಳ ಪ್ರತಿ ಗ್ರಾಮಕ್ಕೂ ಮೂಲಸೌಕರ್ಯ, ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ಕಲ್ಪಿಸಲಾಗಿದೆ. ಹಾಡಿ ಜನರಿಗೆ ಪಡಿತರ ಹಾಗೂ ಕೆರೆ ತುಂಬಿಸುವ ಭರವಸೆ: ಕಾಡಂಚಿನ ಹಾಡಿ ಜನರಿಗೆ ಹಿಂದೆ ಇದ್ದ 6 ತಿಂಗಳ ಪಡಿತರ ವಿತರಣೆಯನ್ನು ಸರ್ಕಾರದ ಗಮನ ಸೆಳೆದು ವರ್ಷಪೂರ್ತಿ ಸಿಗುವಂತೆ ಮಾಡಲಾಗಿದೆ. ಮಳೆ ಕೊರತೆಯಿಂದ ಒಣಗುತ್ತಿರುವ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಸ್ಥಗಿತಗೊಂಡಿರುವ ವೃದ್ಧಾಪ್ಯ ವೇತನ ಪುನರಾರಂಭಿಸಲು ಸರ್ಕಾರದ ಮಟ್ಟದಲ್ಲಿ ಶ್ರಮಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ವೇಳೆ ಕಾಡಂಚಿನ ಗ್ರಾಮಸ್ಥರು ಕಾಡುಪ್ರಾಣಿಗಳ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಇದೇ ವೇಳೆ ‘ಬೇಲದಕುಪ್ಪೆ ಜಾತ್ರೆ’ ಹಿನ್ನೆಲೆಯಲ್ಲಿ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ ಸಾರ್ವಜನಿಕರು ಕೋರಿದರು. ತಕ್ಷಣವೇ ಕಾರ್ಯಪ್ರವೃತ್ತರಾದ ಶಾಸಕರು, ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ತ್ಯಾಗರಾಜು ಅವರಿಗೆ ದೂರವಾಣಿ ಕರೆ ಮಾಡಿ ಜಾತ್ರೆಗೆ ಹೆಚ್ಚುವರಿ ಬಸ್ಗಳನ್ನು ನಿಯೋಜಿಸುವಂತೆ ಸೂಚನೆ ನೀಡಿದರು.
ಕಾಂಗ್ರೆಸ್ ಮುಖಂಡರಾದ ದೇವಲಾಪುರ ಸಿದ್ದರಾಜು ಮತ್ತು ಬಿ.ಮಟಕೆರೆ ಅಣ್ಣಯ್ಯಸ್ವಾಮಿ ಮಾತನಾಡಿ, “ಶಾಸಕ ಅನಿಲ್ ಚಿಕ್ಕಮಾದು ಅವರು ನುಡಿದಂತೆ ನಡೆದುಕೊಳ್ಳುತ್ತಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರ ಕೈಬಲಪಡಿಸುವುದು ಎಲ್ಲ ಸಮುದಾಯಗಳ ಕರ್ತವ್ಯ” ಎಂದರು.
ಈ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚೆನ್ನಿಪುರ ಚಲುವರಾಜು, ಇಂಟಕ್ ಜಿಲ್ಲಾಧ್ಯಕ್ಷ ಎಸ್.ಎನ್. ನಾಗರಾಜು, ಕೋಟೆ ಶಿವಪ್ಪ, ಮೊಳೆಯೂರು ಆನಂದ್, ಗುಣಪಾಲ್, ಶಂಭುಲಿಂಗನಾಯಕ, ದೇವಲಾಪುರ ಪ್ರಭಾಕರ್, ಎಂ.ಕೆ. ಹರಿದಾಸ್, ದೊಡ್ಡಪ್ಪಾಜಿ, ಗುಡಿಗೌಡ ಶೇಖರ್, ಲ್ಯಾಂಡ್ ಆರ್ಮಿ ಎಂಜಿನಿಯರ್ಗಳಾದ ಕೀರ್ತನ ಪ್ರಭು, ಅಭಿಷೇಕ್ ಹಾಗೂ ವಿವಿಧ ಗ್ರಾಮಗಳ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
