ರಾಮನಗರ: ಜಿಲ್ಲೆ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಮತ್ತು ಮಾಜಿ ಸಚಿವ ಎಚ್.ಎಂ. ರೇವಣ್ಣ ನಡುವಿನ ಮುಸುಕಿನ ಗುದ್ದಾಟ ಬೀದಿಗೆ ಬಂದಿದೆ.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ರೇವಣ್ಣ ಅವರಿಗೇ ಟಿಕೆಟ್ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ಬರೆಯುವ ಮೂಲಕ ಬಾಲಕೃಷ್ಣ ನೇರ ಯುದ್ಧಕ್ಕೆ ಇಳಿದಿದ್ದಾರೆ.
ರಾಜಕೀಯ ಜೀವನದುದ್ದಕ್ಕೂ ರೇವಣ್ಣ ವಿರುದ್ಧವೇ ಬಾಲಕೃಷ್ಣ ಹೋರಾಟ ಮಾಡಿಕೊಂಡು ಬಂದಿದ್ದು, ಕಾಂಗ್ರೆಸ್ ಸೇರ್ಪಡೆ ನಂತರವೂ ಇಬ್ಬರ ನಡುವಿನ ಸಂಬಂಧ ಗಟ್ಟಿ ಆಗಲೇ ಇಲ್ಲ. ಇದರಿಂದಾಗಿ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗುವುದನ್ನು ತಡೆಯುವ ಸಲುವಾಗಿಯೇ ಬಾಲಕೃಷ್ಣ ಪತ್ರ ಸಮರ ಸಾರಿದ್ದಾರೆ.
ಅಸಲಿಗೆ ಆಗಿದ್ದೇನು?: ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದ್ದ ಬಾಲಕೃಷ್ಣ ಪರಾಭವದ ನಂತರವೂ ಪಕ್ಷ ಸಂಘಟನೆಯಲ್ಲಿ ಹಿಂದೆ ಬೀಳಲಿಲ್ಲ. ಜೆಡಿಎಸ್ ಶಾಸಕ ಎ.ಮಂಜುನಾಥ್, ಎಚ್.ಎಂ. ರೇವಣ್ಣ ಅವರ ಗರಡಿಯಲ್ಲಿಯೇ ಪಳಗಿದ್ದು, ಕಳೆದ ಚುನಾವಣೆಯಲ್ಲಿ ರೇವಣ್ಣ ಅವರು ಮಂಜುನಾಥ್ ಪರವಾಗಿಯೇ ಕೆಲಸ ಮಾಡಿದ್ದಾರೆ ಎನ್ನುವ ಆರೋಪ ಕಾರ್ಯಕರ್ತರಲ್ಲಿ ಇದೆ.
ಆದರೆ, ಬಾಲಕೃಷ್ಣ ಮುಂದಿನ ಚುನಾವಣೆಗೆ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿರುವ ನಡುವೆಯೇ ರೇವಣ್ಣ ಮತ್ತು ಮಂಜುನಾಥ್ ನಡುವೆ ಪರಸ್ಪರ ಸ್ನೇಹ ಹೆಚ್ಚಿದ್ದು, ಬಾಲಕೃಷ್ಣ ಮತ್ತು ಅವರ ಬೆಂಬಲಿಗರಲ್ಲಿ ಇರಿಸುಮುರಿಸಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವಿನದು ರಾಜಕೀಯ ಸ್ನೇಹವೋ, ಮತ್ತೇನೋ ಎನ್ನುವ ಅನುಮಾನ ಬಾಲಕೃಷ್ಣ ಅವರನ್ನು ಕಾಡಿದೆ.
ಮತ್ತೊಂದೆಡೆ ಯಾವುದೋ ಕಾರ್ಯಕ್ರಮದಲ್ಲಿ ಎ. ಮಂಜುನಾಥ್, ರೇವಣ್ಣ ಅವರಿಗೆ ಟಿಕೆಟ್ ನೀಡುವುದಾದರೆ ಅವರ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮದೇ ರಾಜಕೀಯ ದಾಳ ಉರುಳಿಸಲು ಮುಂದಾಗಿರುವ ಬಾಲಕೃಷ್ಣ, ನನಗೆ ಟಿಕೆಟ್ ಬೇಡ, ರೇವಣ್ಣ ಅವರಿಗೇ ಟಿಕೆಟ್ ನೀಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಪತ್ರ ಬರೆದಿದ್ದಾರೆ.
ಸ್ಪಷ್ಟನೆ ನೀಡುವರೇ ನಾಯಕರು?:
ಮಾಜಿ ಶಾಸಕ ಬಾಲಕೃಷ್ಣ ಉರುಳಿಸಿರುವ ದಾಳ ಇದೀಗ ಶಾಸಕ ಎ.ಮಂಜುನಾಥ್ ಮತ್ತು ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿರುವುದು ನಿಜ. ಇಬ್ಬರೂ ನಾಯಕರು ತಮ್ಮ ನಡುವಿನ ಸಂಬಂಧ ಕೇವಲ ರಾಜಕೀಯದ ಹೊರತಾದದ್ದೋ ಇಲ್ಲವೋ ಎನ್ನುವುದನ್ನು ಸ್ಪಷ್ಟಪಡಿಸುವ ಸವಾಲನ್ನು ಬಾಲಕೃಷ್ಣ ಹಾಕಿದ್ದಾರೆ. ಅಲ್ಲದೆ, ರೇವಣ್ಣ ಅವರನ್ನು ಮಂಜುನಾಥ್ ಗುರು ಎಂದು ಒಪ್ಪಿಕೊಳ್ಳುವುದಾದರೆ ರೇವಣ್ಣಗೆ ಬೆಂಬಲಿಸಲಿ, ನಾನೂ ರೇವಣ್ಣ ಅವರಿಗೇ ಬೆಂಬಲವಾಗಿ ನಿಲ್ಲುತ್ತೇನೆ ಎನ್ನುವ ಸವಾಲು ಹಾಕಿದ್ದಾರೆ. ಆದರೆ ಈ ಎಲ್ಲ ಸವಾಲುಗಳಿಗೆ ಶಾಸಕ ಎ. ಮಂಜುನಾಥ್ ಮತ್ತು ರೇವಣ್ಣ ಅವರೇ ಉತ್ತರ ನೀಡಬೇಕಿದೆ.
ರಂಗ ಪ್ರವೇಶಿಸುವರೇ ಡಿಕೆಶಿ?: ಕೆಪಿಸಿಸಿ ಅಧ್ಯಕ್ಷರ ತವರು ಜಿಲ್ಲೆಯಲ್ಲಿಯೇ ಕಾಂಗ್ರೆಸ್ ನಾಯಕರ ನಡುವಿನ ಮುಸುಕಿನ ಗುದ್ದಾಟ ಬೀದಿಗೆ ಬಂದಿರುವುದು ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಹಿನ್ನೆಲೆಯಲ್ಲಿ ಬಾಲಕೃಷ್ಣ ಅವರ ಪತ್ರದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಖುದ್ದು ರಂಗ ಪ್ರವೇಶ ಮಾಡುವರೇ? ಎಚ್.ಎಂ. ರೇವಣ್ಣ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿದ್ದು, ಡಿಕೆಶಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.
ನನಗೆ ರಾಜಕೀಯ ದೀಕ್ಷೆ ನೀಡಿದ್ದು ಎಚ್.ಎಂ. ರೇವಣ್ಣ. ಅವರಿಗೆ ನಾನು ಎಂದಿಗೂ ಚಿರಋಣಿ. ಇದರ ಹೊರತಾಗಿ ಬೇರೇನೂ ಇಲ್ಲ. ರೇವಣ್ಣ ವಿರುದ್ಧ ಆರೋಪ ಮಾಡಿ, ಪತ್ರ ಬರೆಯುವ ಮೂಲಕ ಬಾಲಕೃಷ್ಣ ಅವರು ಬೇರೊಂದು ಪಕ್ಷಕ್ಕೆ ಹೋಗುವ ಯೋಚನೆಯಲ್ಲಿರುವಂತೆ ಕಾಣುತ್ತಿದೆ.
ಎಚ್.ಎಂ.ರೇವಣ್ಣ ಅವರು ರಾಜಕೀಯವಾಗಿ ಜನ್ಮ ನೀಡಿದ ಗುರುಗಳು. ಅವರು ಸ್ಪರ್ಧೆ ಮಾಡಿದರೆ ನಾನು ಸ್ಪಧಿರ್ಸುವುದಿಲ್ಲ ಎಂಬ ಮಾತನ್ನು ಶಾಸಕ ಎ.ಮಂಜುನಾಥ್ ಅವರ ಹಿಂಬಾಲಕರಿಗೆ ತಿಳಿಸಿದ್ದು, ಇದರಿಂದ ಮಾಗಡಿಯಲ್ಲಿ ರೇವಣ್ಣಗೆ ಶಾಸಕರು ಸಹಕಾರ ನೀಡುತ್ತಾರೆ, ನಾನೂ ಸಹಕಾರ ನೀಡುತ್ತೇನೆ. ಇದರಿಂದ ಪಕ್ಷಕ್ಕೆ ಒಂದು ಸೀಟು ಬಂದಂತಾಗುತ್ತದೆ. ಸರ್ಕಾರ ಬಂದ ಮೇಲೆ ನನಗೆ ಯಾವುದಾದರೂ ಒಂದು ಅವಕಾಶ ಮಾಡಿಕೊಡಿ ಎಂದು ಆತಂಕ ನಿವಾರಣೆಗೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ಪ್ರತಿ ಸೀಟು ಮುಖ್ಯ. ಹಾಗಾಗಿ ರೇವಣ್ಣ ಅವರಿಗೆ ಬಿಟ್ಟುಕೊಡಲು ನಾನು ಸಿದ್ಧ.ಎಚ್.ಸಿ.ಬಾಲಕೃಷ್ಣ ಮಾಜಿ ಶಾಸಕರು ತಿಳಿಸಿದ್ದಾರೆ.
ವರದಿ: ಮುರುಳಿಧರನ್ ಆರ್., ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5