ಸರಗೂರು: ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾದ ಸುನೀಲ್ ಬೋಸ್ ಅವರ ಹುಟ್ಟುಹಬ್ಬವನ್ನು ಸುನೀಲ್ ಬೋಸ್ ಅಭಿಮಾನಿಗಳ ಬಳಗದ ವತಿಯಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಹುಟ್ಟುಹಬ್ಬದ ಅಂಗವಾಗಿ ಅನಾವಶ್ಯಕ ಖರ್ಚು-ವೆಚ್ಚಗಳನ್ನು ಮಾಡುವ ಬದಲು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ, ಅವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಅಭಿಮಾನಿಗಳು ಹಾರೈಸಿದರು.
ಹಣ್ಣು ಹಂಪಲು ವಿತರಿಸಿ ಮಾತನಾಡಿದ ಸುನೀಲ್ ಬೋಸ್ ಅಭಿಮಾನಿಗಳ ಬಳಗದ ಅಧ್ಯಕ್ಷ ದೇವಲಾಪುರ ಸಿದ್ದರಾಜು, ಸಂಸದ ಸುನೀಲ್ ಬೋಸ್ ಅವರು ಸದಾ ಜನರೊಂದಿಗೆ ಬೆರೆತು ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಜನಪರ ಕಾರ್ಯಗಳ ಮೂಲಕ ಅವರ ಹುಟ್ಟುಹಬ್ಬ ಆಚರಿಸಬೇಕು ಎಂಬ ಉದ್ದೇಶದಿಂದ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಮುಂದುವರಿಯಲಿವೆ ಎಂದು ತಿಳಿಸಿದರು.
ಮಾನವ ಹಕ್ಕುಗಳ ಮಿಷನ್ ಅಧ್ಯಕ್ಷ ಪಿ. ಚಿನ್ನಣ್ಣ ಹಳಿಯೂರು ಮಾತನಾಡಿ, ಜನಪ್ರತಿನಿಧಿಗಳ ಹುಟ್ಟುಹಬ್ಬವನ್ನು ಸಮಾಜಕ್ಕೆ ಉಪಯುಕ್ತವಾಗುವ ರೀತಿಯಲ್ಲಿ ಆಚರಿಸುವುದು ಉತ್ತಮ ಬೆಳವಣಿಗೆಯಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಮಾನವೀಯತೆ ಮೆರೆದಿರುವುದು ಶ್ಲಾಘನೀಯ ಎಂದರು. ಸಂಸದ ಸುನೀಲ್ ಬೋಸ್ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಜನಸೇವೆಯಲ್ಲಿ ಮತ್ತಷ್ಟು ಯಶಸ್ಸು ದೊರೆಯಲಿ ಎಂದು ಅವರು ಶುಭ ಹಾರೈಸಿದರು.
ಮಾಜಿ ಜಿಪಂ ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ ನಿಂಗರಾಜು ಮಾತನಾಡಿ, ಹುಟ್ಟುಹಬ್ಬದ ಆಚರಣೆಯನ್ನು ಕೇವಲ ಸಂಭ್ರಮಕ್ಕೆ ಸೀಮಿತಗೊಳಿಸದೆ ಸಮಾಜಮುಖಿ ಕಾರ್ಯಗಳ ಮೂಲಕ ಆಚರಿಸಿರುವುದು ಸಂತಸದ ವಿಚಾರವಾಗಿದ್ದು, ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬುವಂತಹ ಇಂತಹ ಸೇವಾ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅಧಿಕ ಕರ್ನಾಟಕ ಮಹಾಸಭಾ ಉಪಾಧ್ಯಕ್ಷ ಕಾಳಸ್ವಾಮಿ, ಮಾನವ ಹಕ್ಕುಗಳ ಮಿಷನ್ ಪ್ರಧಾನ ಕಾರ್ಯದರ್ಶಿ ಪ್ರಭಾಕರ್, ಉಪಾಧ್ಯಕ್ಷ ಸೋಮಣ್ಣ, ಅಧಿಕ ಕರ್ನಾಟಕ ಮಹಾಸಭಾ ಸಹ ಕಾರ್ಯದರ್ಶಿ ಸೂರ್ಯಕುಮಾರ್, ಮುಖಂಡರಾದ ತುಂಬಸೋಗೆ ನಾಗಣ್ಣ, ದೊಡ್ಡಪಾಜ್ಜಿ, ನಂಜಯ್ಯ, ಕುಂದೂರು ಮೂರ್ತಿ, ಚಿನ್ನಯ್ಯ, ಸೋಮೇಶ್, ಭಾನುಪ್ರಕಾಶ್, ಮಹದೇವಮೂರ್ತಿ, ಶಿವಚನ್ನ, ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಪಾರ್ಥಸಾರಥಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
