ತುಮಕೂರು: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಪ್ರಸ್ತುತ ನೂತನವಾಗಿ ಮೆನು ಸಿದ್ಧಪಡಿಸಲಾಗಿದ್ದು, ಈ ಮೆನುವಿನಂತೆ ಬೆಳಗಿನ ಉಪಹಾರದಲ್ಲಿ ರೈಸ್ ಬಾತ್, ಚಿತ್ರಾನ್ನ, ಉಪ್ಪಿಟ್ಟು, ಕೇಸರಿಬಾತ್, ಇಡ್ಲಿ–ಸಾಂಬಾರ್–ಚಟ್ನಿ; ಮಧ್ಯಾಹ್ನದ ಊಟಕ್ಕೆ ಮುದ್ದೆ, ಅನ್ನ, ಸಾಂಬಾರ್, ಮೊಸರನ್ನ, ಚಪಾತಿ ಹಾಗೂ ರಾತ್ರಿ ಊಟಕ್ಕೆ ರೈಸ್ ಬಾತ್ ಮತ್ತು ಮೊಸರನ್ನ ನೀಡಲಾಗುತ್ತಿದೆ.
ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ 4 ಇಂದಿರಾ ಕ್ಯಾಂಟೀನ್ ಗಳೊಂದಿಗೆ ಹೊಸದಾಗಿ ತುಮಕೂರು ಜಿಲ್ಲಾಸ್ಪತ್ರೆ ಮತ್ತು ಎಪಿಎಂಸಿ ಮಾರುಕಟ್ಟೆ ಬಳಿ 2 ಇಂದಿರಾ ಕ್ಯಾಂಟೀನ್ ಗಳನ್ನು ಕಾರ್ಯಾರಂಭಗೊಳಿಸಲಾಗಿದೆ. ಪ್ರತಿ ದಿನ ಜಿಲ್ಲಾಸ್ಪತ್ರೆಗೆ ಭೇಟಿ ನೀಡುವ ರೋಗಿಗಳು ಹಾಗೂ ಮಾರುಕಟ್ಟೆಗೆ ಆಗಮಿಸುವ ರೈತರು, ಗ್ರಾಹಕರು ಹಾಗೂ ವರ್ತಕರ ಅನುಕೂಲಕ್ಕಾಗಿ ಹೊಸದಾಗಿ 2 ಇಂದಿರಾ ಕ್ಯಾಂಟೀನ್ ಗಳನ್ನು ಪ್ರಾರಂಭಿಸಲಾಗಿದೆ.
ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳಿಂದಾಗಿ ಬಡಜನರು ಅವರ ಸಮತೋಲಿತ ಹಾಗೂ ಪೌಷ್ಠಿಕ ಆಹಾರದಿಂದ ವಂಚಿತರಾಗುವುದನ್ನು ತಪ್ಪಿಸಲು ಸರ್ಕಾರವು ರಾಜ್ಯದ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟಿನ್ ಅನ್ನು ಪ್ರಾರಂಭಿಸಿ 5 ರೂ.ಗಳಿಗೆ ಬೆಳಗಿನ ಉಪಹಾರ ಹಾಗೂ 10 ರೂ.ಗಳಿಗೆ ಮಧ್ಯಾಹ್ನ ಮತ್ತು ಸಂಜೆಯ ಊಟಗಳನ್ನು ಒದಗಿಸುತ್ತಿದೆ.
ನಗರದಲ್ಲಿರುವ ಇಂದಿರಾ ಕ್ಯಾಂಟೀನ್ ಗಳು ಸುಸಜ್ಜಿತ ಮತ್ತು ಆಧುನಿಕವಾದ ಮಾಸ್ಟರ್ ಕಿಚನ್ ಅನ್ನು ಒಳಗೊಂಡಿವೆ. ಪ್ರತಿ ಕ್ಯಾಂಟೀನ್ ಗಳಲ್ಲಿ ಶುದ್ಧ ಹಾಗೂ ಆರೋಗ್ಯಕರ ಕುಡಿಯುವ ನೀರನ್ನು ಸರಬರಾಜು ಮಾಡಲು ಆರ್.ಓ ಪ್ಲಾಂಟ್ ನ್ನು ಅಳವಡಿಸಲಾಗಿದೆ.
ನಗರ ಸೇರಿದಂತೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದಿಂದ ನಗರಕ್ಕೆ ಆಗಮಿಸುವ ಬಡಜನರು, ಅಸಂಘಟಿತ ವಲಯದ ಕಾರ್ಮಿಕರು, ವಿದ್ಯಾರ್ಥಿಗಳು, ಕಟ್ಟಡ ಕಾರ್ಮಿಕರು ಇಂದಿರಾ ಕ್ಯಾಂಟೀನಿನ ಪ್ರಯೋಜನ ಪಡೆಯುತ್ತಿದ್ದಾರೆ.
ಸಾರ್ವಜನಿಕರನ್ನು ಆಕರ್ಷಿಸಲು ನಗರದ ಇತರೆ ಖಾಸಗಿ ಹೋಟೆಲ್ ಗಳಿಗಿಂತ ವಿಭಿನ್ನ ರೀತಿಯಲ್ಲಿ ಕ್ಯಾಂಟೀನುಗಳನ್ನು ಹೂಗುಚ್ಛ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಿ ವಿಶಿಷ್ಟ ಮತ್ತು ಮಾದರಿಯಾಗಿ ನಿರ್ವಹಿಸಲಾಗುತ್ತಿದೆ.
ಉತ್ತಮವಾದ ರುಚಿಯಾದ ಆಹಾರವನ್ನು ಕಡಿಮೆ ಬೆಲೆಯಲ್ಲಿ ವಿತರಿಸುತ್ತಿರುವುದರಿಂದ ಗ್ರಾಮೀಣ ಭಾಗದಿಂದ ಆಗಮಿಸುತ್ತಿರುವ ನಗರ ಪ್ರದೇಶಕ್ಕೆ ಆಗಮಿಸುತ್ತಿರುವವರಿಗೆ ಅನುಕೂಲವಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW