ಕೊರಟಗೆರೆ: ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಹಾಗೂ ಅಸಂಘಟಿತ ಕಾರ್ಮಿಕರಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ನೂತನ ಕಾರ್ಮಿಕ ಕಛೇರಿ ಉದ್ಘಾಟನೆ ಹಾಗೂ ಹಿರಿಯ ಕಟ್ಟಡ ಕಾರ್ಮಿಕರ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಮಿಕ ಇಲಾಖೆಯ ಅಧಿಕಾರಿ ಶ್ರೀಕಾಂತ್ ಮಾತನಾಡಿ, “ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಮಾಡಿಸಿಕೊಂಡರೆ ಶೈಕ್ಷಣಿಕ ನೆರವು, ಮದುವೆ ಸಹಾಯಧನ, ವೈದ್ಯಕೀಯ ಸೌಲಭ್ಯ, ಪಿಂಚಣಿ, ಅಪಘಾತ ಪರಿಹಾರ ಸೇರಿದಂತೆ ಹಲವು ಸೌಲಭ್ಯಗಳು ಸಿಗಲಿವೆ. ಅಸಂಘಟಿತ ಕಾರ್ಮಿಕರು ಕಡ್ಡಾಯವಾಗಿ ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು” ಎಂದು ತಿಳಿಸಿದರು.
ಕಾರ್ಮಿಕರಿಗೆ ಸ್ಥಳೀಯವಾಗಿಯೇ ಸೌಲಭ್ಯ ದೊರೆಯಲಿ ಎಂಬ ಉದ್ದೇಶದಿಂದ ತೆರೆಯಲಾದ ನೂತನ ಕಛೇರಿಯನ್ನು ಗಣ್ಯರು ಉದ್ಘಾಟಿಸಿದರು. ಇದರಿಂದ ನೋಂದಣಿ ಹಾಗೂ ಸೌಲಭ್ಯ ಪಡೆಯಲು ಕಾರ್ಮಿಕರು ಜಿಲ್ಲಾ ಕೇಂದ್ರಕ್ಕೆ ಅಲೆಯುವುದು ತಪ್ಪಲಿದೆ ಎಂದು ಕಾರ್ಮಿಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಆನಂದ್ ಕುಮಾರ್ ಹೇಳಿದರು.
ಐಎನ್ ಟಿಯುಸಿ ರಾಜ್ಯಾಧ್ಯಕ್ಷ ಶಾಮಣ್ಣರೆಡ್ಡಿ ಮಾತನಾಡಿ, “ಅಸಂಘಟಿತ ವಲಯದ ಕಾರ್ಮಿಕರಿಗೆ ಕನಿಷ್ಠ ₹26,000 ವೇತನ ನಿಗದಿ ಮಾಡಬೇಕು. ಗುತ್ತಿಗೆ ಪದ್ಧತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಿ ಎಲ್ಲ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಇಎಸ್‌ಐ, ಪಿಎಫ್ ಸೌಲಭ್ಯವನ್ನು ಎಲ್ಲ ಕಾರ್ಮಿಕರಿಗೆ ವಿಸ್ತರಿಸಬೇಕು ಹಾಗೂ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಸೌಲಭ್ಯ ಕಲ್ಪಿಸಬೇಕು” ಎಂದು ಸರ್ಕಾರವನ್ನು ಒತ್ತಾಯಿಸಿದರು. ಕಾರ್ಮಿಕರು ತಮ್ಮ ಹಕ್ಕುಗಳನ್ನು ತಿಳಿದುಕೊಂಡರೆ ಮಾತ್ರ ಶೋಷಣೆ ತಪ್ಪಿಸಲು ಸಾಧ್ಯ. ಸಂಘಟನೆಯ ಮೂಲಕ ಮಾತ್ರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಐಎನ್‌ಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ,ವಿ.ದಾಸ್, ಫೈರೋಜ್ ಪಾಷ, ಗುರುಮೂರ್ತಿ,ಅರಸಪುರ ರಮೇಶ್, ಗೋವಿಂದರಾಜು, ಕುಂದೂರು ಮುರುಳಿ, ನಾಗೇನಹಳ್ಳಿ ನರಸಿಂಹಮೂರ್ತಿ, ದಾದಪೀರ್, ಮಂಜುನಾಥ್, ಸಿದ್ದರಾಜು, ಮಲ್ಲೇಶ್, ಲೋಕೇಶ್,ಆನಂದ್,ಸಂಪತ್ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ನೂರಾರು ಕಾರ್ಮಿಕರು ಭಾಗವಹಿಸಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


