ತುಮಕೂರು: ಉತ್ತಮ ಬದುಕು ಕಟ್ಟಿಕೊಳ್ಳಲು ಶ್ರೀ ನುಲಿಯ ಚಂದಯ್ಯನವರಂತಹ ಶಿವಶರಣರ ವಿಚಾರಧಾರೆಗಳನ್ನು ಅರಿತುಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಕುಳುವ ಮಹಾಸಂಘದ ವತಿಯಿಂದ ನಗರದ ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ನುಲಿಯ ಚಂದಯ್ಯನವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೋಷಿತ ಮತ್ತು ದಮನಿತ ವರ್ಗಗಳ ಧ್ವನಿಯಾಗಿ ಗುರುತಿಸಿಕೊಂಡ ಶಿವ ಶರಣರ ಆದರ್ಶಗಳನ್ನು ಸಾಕಾರಗೊಳಿಸಲು ಎಲ್ಲರು ವಿದ್ಯಾವಂತರಾಗಬೇಕು. ಶೋಷಿತ ಸಮುದಾಯಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮುದಾಯವನ್ನು ಸಮಾಜದ ಮುನ್ನೆಲೆಗೆ ತರುವ ಕೆಲಸ ಮಾಡಬೇಕು ಎಂದು ತಿಳಿಸಿದ ಅವರು ನಿರಂತರ ಪರಿಶ್ರಮ ಮತ್ತು ಇಚ್ಛಾಶಕ್ತಿಯಿಂದ ಓದಿ ಉನ್ನತ ಅಧಿಕಾರಿಗಳಾಗುವ ಮೂಲಕ ಸಮುದಾಯದಕ್ಕೆ ದೊಡ್ಡ ಅಸ್ತಿಗಳಾಗಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ರಾಜ್ಯ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಮಾತನಾಡಿ, ತಮ್ಮ ಕಾಯಕ ನಿಷ್ಠೆಗೆ ಗುರುತಾಗಿದ್ದ ನುಲಿಯ ಚಂದಯ್ಯನವರ ತತ್ವಾದರ್ಶಗಳು ತಳ ಸಮುದಾಯಗಳಿಗೆ ಮಾರ್ಗದರ್ಶಕವಾಗಿದ್ದು, ತಳ ಸಮುದಾಯಗಳು ಸರ್ಕಾರದ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಬೇಕಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮನೋಭಾವದಿಂದ ಜನರು ಒಟ್ಟಾದಾಗ ಮಾತ್ರ ತಳ ಸಮುದಾಯಗಳು ಸಮಾಜದ ಮುನ್ನೆಲೆಗೆ ಬರುತ್ತವೆ ಎಂದು ತಿಳಿಸಿದರು.
ಸಮಾಜದ ಮುಖ್ಯವಾಹಿನಿಗೆ ಬಾರದೆ ಹಿಂದುಳಿದಿರುವ ಸಮುದಾಯಗಳ ಅಸ್ಮಿತೆ ಶಿವ ಶರಣರು, ಶಿವ ಶರಣರಿಗಿದ್ದ ವೃತ್ತಿ ಗೌರವವನ್ನು ನಾವೂ ಸಹ ಬೆಳೆಸಿಕೊಳ್ಳಬೇಕು. ಪ್ರಜಾ ಪ್ರಭುತ್ವದ ಕಾಲಘಟ್ಟದಲ್ಲಿ ಜೀವನ ಸಾಗಿಸುತ್ತಿರುವ ನಾವು ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ವೃತ್ತಿ, ಜಾತಿ, ಧರ್ಮಗಳ ಕೀಳರಿಮೆಯಿಂದ ಹೊರಗೆ ಬಂದು ಸಾಧನೆ ಮಾಡಬೇಕು ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅಖಿಲ ಕರ್ನಾಟಕ ಕುಳುವ ಮಹಾಸಂಘದ ಜಂಟಿ ಕಾರ್ಯದರ್ಶಿ ಕಿರಣ್ ಕೊತ್ತಗೆರೆ ಮಾತನಾಡಿ ಕುಶಲ ಕರ್ಮಿ ಮತ್ತು ಕಾಯಕ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ 12ನೇ ಶತಮಾನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಬಸವಣ್ಣನವರ ಸಮಕಾಲೀನರಾದ ಶ್ರೀ ನುಲಿಯ ಚಂದಯ್ಯ ಅವರು ಬಿಜಾಪುರ ಜಿಲ್ಲೆಯ ಶಿವಣಗಿಯಲ್ಲಿ ಜನಿಸಿದರು. ನುಲಿಯ ಚಂದಯ್ಯ ಅವರ ವಿಚಾರಧಾರೆಗಳನ್ನು ತಿಳಿದುಕೊಂಡು ಕಾಯಕ ಸಮುದಾಯಗಳು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಸಾಧಕರಾದ ಮಧುಗಿರಿ ತಾಲೂಕು ಬೇಡತ್ತೂರಿನ ಜಗದೀಶ್, ತುಮಕೂರಿನ ಜಾನಪದ ಕಲಾವಿದ ಹನುಮಂತರಾಯಪ್ಪ, ಕೊರಟಗೆರೆ ತಾಲೂಕು ಯಾದಗೆರೆಯ ಮಂಗಳವಾದ್ಯ ಕಲಾವಿದ ನಾಗರಾಜು, ಹರಿಕಥೆ ದಾಸರಾದ ದೊಡ್ಡಸಾರಂಗಿಯ ಮಂಜುನಾಥ್ ಹಾಗೂ ಕುಣಿಗಲ್‌ನ ರಾಮಣ್ಣ ಅವರನ್ನು ಸನ್ಮಾನಿಸಲಾಯಿತು. ಅದೇ ರೀತಿ ಅತೀ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಾದ ವೈ.ಹೆಚ್. ಯಮುನಾ(ಎಸ್‌ಎಸ್‌ಎಲ್‌ಸಿ), ಎಲ್.ಎಸ್. ಮೇಘನಾ(ಪಿಯುಸಿ), ಕೃಪಶ್ರೀ.ಹೆಚ್.ಎ.(ಎಸ್ ಎಸ್ ಎಲ್ ಸಿ), ಸಿಂಚನ.ಎನ್.(ಎಸ್ ಎಸ್ ಎಲ್‌ಸಿ), ಶಬರೀಶ್.ಎ.(ಎಂಎಸ್ಸಿ), ಕಾವ್ಯ(ಬಿಎ) ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು ಮಿರ್ಜಿ, ಭಾರತೀಯ ಆಹಾರ ಅಭಿವೃದ್ಧಿ ನಿಗಮದ ಸದಸ್ಯ ಸೊಗಡು ವೆಂಕಟೇಶ್, ಜಿಲ್ಲಾ ಕುಳುವ ಮಹಾಸಂಘದ ಅಧ್ಯಕ್ಷ ಲೋಕೇಶ್ ಸ್ವಾಮಿ ಬಿ.ಆರ್. ಅಖಿಲ, ಕರ್ನಾಟಕ ಕುಳುವ ಮಹಾಸಂಘದ ಅಧ್ಯಕ್ಷ ಶಿವಾನಂದ ಭಜಂತ್ರಿ, ಮಾಜಿ ಶಿವರಾಮ್ ಹೆಬ್ಬೂರು ಶ್ರೀನಿವಾಸ್ ಮೂರ್ತಿ, ಸೇರಿದಂತೆ ಕುಳುವ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q