1968 ರಿಂದ 2020ರವರೆಗೆ ಕಾರ್ಯನಿರತ ಪತ್ರಕರ್ತನಾಗಿ ಕಾರ್ಯನಿರ್ವಹಿಸಿ, ಪತ್ರಕರ್ತರ ವಿವಿಧ ಸಂಘಟನೆಗಳ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಐ ಎಫ್ ಡಬ್ಲೂ ಜೆ ಕಾರ್ಯಕಾರಿ ಸಮಿತಿ ಸದಸ್ಯನಾಗಿ, ಕೆ ಯು ಡಬ್ಲ್ಯೂ ಜೆ ಯಿಂದ ಮ.ರಾಮಮೂರ್ತಿಪ್ರಶಸ್ತಿ ಹಾಗೂ ಎಚ್.ಕೆ. ವೀರಣ್ಣ ಗೌಡ ಪ್ರಶಸ್ತಿ , ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ, ಪತ್ರಿಕಾ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರನಾಗಿರುವ ನಾನು ಕವಿ- ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಪತ್ರಕರ್ತರ ಸಾಮಾಜಿಕ ಜವಾಬ್ದಾರಿಯನ್ನು ಕುರಿತು ಬರೆದಿರುವ ಅಭಿಪ್ರಾಯವನ್ನು ಅನುಮೋದಿಸುತ್ತೇನೆ.
ಪತ್ರಕರ್ತರಷ್ಟೇ ಅಲ್ಲ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವರು ಪ್ರತಿಷ್ಠೆ ಮೆರಯುವ ಸಲುವಾಗಿ ಖೊಟ್ಟಿ ಡಾಕ್ಟರೇಟ್ ನೀಡಿ ಹಣ ಮಾಡುವ ದಂಧೆಗೆ ಇಳಿದಿರುವ ಖೊಟ್ಟಿ ವಿಶ್ವವಿದ್ಯಾ ಲಯಗಳಿಂದ ಹಣತೆತ್ತು ಖೊಟ್ಟಿ ಡಾಕ್ಟರೇಟ್ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇಂತಹ ಅಕ್ರಮ ವ್ಯವಹಾರವನ್ನು ಬಯಲು ಮಾಡಿ ಆರೋಗ್ಯಕರ ಸಮಾಜವನ್ನು ಕಟ್ಟುವಾಗ ಹೊಣೆಗಾರಿಕೆ ಹೊಂದಿರುವ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ೪ ನೇ ಅಂಗದ ಜವಾಬ್ದಾರಿಯ ಗೌರವಕ್ಕೆ ಪಾತ್ರರಾಗಿರುವ ಪತ್ರಕರ್ತರು ಖೊಟ್ಟಿ ವಿಶ್ವವಿದ್ಯಾಲಯಗಳ ಇಂಥ ಅವ್ಯವಹಾರಗಳ ಬಗ್ಗೆ
ಜನರಿಗೆ ಎಚ್ಚರಿಸಿ, ಅಂಥವುಗಳು ನಡೆಯದಂತೆ ನಿಗಾವಹಿಸಬೇಕಾದ್ದು ಪರಮ ಕರ್ತವ್ಯ. ಹೀಗಿರುವಾಗ ಪತ್ರಕರ್ತರೇ ಖೊಟ್ಟಿ ಡಾಕ್ಟರೇಟ್ ಗೆ ಹಾತೊರೆಯುವುದು ಅಕ್ಷಮ್ಯ. ಅಂಥ ಪತ್ರಕರ್ತರು ಪತ್ರಿಕೋದ್ಯಮಕ್ಕೆ ಕಳಂಕಪ್ರಾಯ. ಹೀಗಿರುವಾಗ ಮಧುಗಿರಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಖೊಟ್ಟಿ ಡಾಕ್ಟರೇಟ್ ಪಡೆದವರಿಗೆ ಸನ್ಮಾನ ಮಾಡಿರುವುದು ವರದಿಯಾಗಿದೆ. ಇದು ಸಂಘದ ಘನತೆಗೆ ತಕ್ಕುದಲ್ಲ. ಶಿವಾನಂದ ತಗಡೂರರ ನೇತೃತ್ವದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ತನ್ನ ಮಧುಗಿರಿ ಶಾಖೆಯ ಮೇಲೆ ಅಗತ್ಯ ಶಿಸ್ತಿನ ಕ್ರಮ ಕೈಗೊಳ್ಳಬೇಕು. ಮತ್ತು ರಾಜ್ಯದ ಪತ್ರಕರ್ತರು ಸ್ವಾಸ್ಥ್ಯಯುತ ಸಮಾಜದ ನಿರ್ಮಾಣ ಕಡೆಗೆ ನಿಗಾ ವಹಿಸುವುದಕ್ಕೆ ಪತ್ರಕರ್ತರ ಸಂಘ ಮುಂದಾಗಬೇಕು.
ರಾಮಣ್ಣ ಕೋಡಿಹೊಸಹಳ್ಳಿ
ಹಿರಿಯ ಪತ್ರಕರ್ತ, ಬೆಂಗಳೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy