ಬೆಂಗಳೂರು: ಬಸ್ ಪ್ರಯಾಣ ದರ ಶೇ.15 ರಷ್ಟು ಏರಿಕೆಗೆ ಹಿಂದಿನ ಬಿಜೆಪಿ ಕಾರಣ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ ನಮ್ಮ ಮೇಲೆ ರೂ. 5,900 ಕೋಟಿ ಸಾಲವನ್ನು ಬಿಟ್ಟು ಹೋಗಿದ್ದಾರೆ ಎಂದು ಸಚಿವರು ಟಿಕೆಟ್ ದರ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ದೈನಂದಿನ ನಿರ್ವಹಣಾ ವೆಚ್ಚ ಮತ್ತು ವೇತನ ಹೆಚ್ಚಾಗಿರುವುದರಿಂದ ದರ ಏರಿಕೆ ಅಗತ್ಯವಾಗಿದೆ. ಪ್ರತಿದಿನ ಡೀಸೆಲ್ ದರ ರೂ. 9 ಕೋಟಿಯಿಂದ ರೂ. 13 ಕೋಟಿಯಾಗುತ್ತದೆ. ಅದೇ ರೀತಿ ವೇತನ ರೂ. 12 ಕೋಟಿಯಿಂದ 18 ಕೋಟಿಯಾಗುತ್ತದೆ. ಪ್ರತಿದಿನ ಸಾರಿಗೆ ನಿಗಮಗಳಿಗೆ ರೂ. 10 ಕೋಟಿಗೂ ಹೆಚ್ಚು ಹೊರೆಯಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ 2020ರಲ್ಲಿ ರೂ. 60 ಇದ್ದ ಡೀಸೆಲ್ ದರವನ್ನು ಈಗ 90 ರೂಪಾಯಿಗೆ ಹೆಚ್ಚಿಸಿದೆ. ಡೀಸೆಲ್ ದರವನ್ನು ಕಡಿಮೆ ಮಾಡಿ ನಂತರ ಬಿಜೆಪಿಯವರು ಟಿಕೆಟ್ ದರ ಏರಿಕೆ ಬಗ್ಗೆ ಮಾತನಾಡಲು ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಸರ್ಕಾರ ಅಷ್ಟು ಮೊತ್ತದ ಸಾಲ ಮಾಡದಿದ್ದರೆ ಕಾಂಗ್ರೆಸ್ ದರ ಏರಿಕೆಗೆ ಹೋಗುತ್ತಿರಲಿಲ್ಲ. 2020 ಜನವರಿಯಲ್ಲಿ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಟಿಕೆಟ್ ದರವನ್ನು ಶೇ. 12 ರಷ್ಟು ಹೆಚ್ಚಳ ಮಾಡಲಾಗಿತ್ತು. ಈಗ ಬಿಜೆಪಿಯವರಿಗೆ ದರ ಏರಿಕೆ ಪ್ರಶ್ನಿಸುವ ಯಾವುದೇ ನೈತಿಕ ಹಕ್ಕಿಲ್ಲ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx