ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ಖಾತ್ರಿಯಾಗಿ ಪಾವತಿಯಾಗುತ್ತಿದ್ದ ರೂ. 5,000 ಸಾವಿರದ ಬದಲು ರೂ.7,000 ನೇರ ನಗದು ವರ್ಗಾವಣೆಗೆ ಕ್ರಮ ಕೈಗೊಳ್ಳುವುದಾಗಿ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.
ಆಶಾ ಕಾರ್ಯಕರ್ತೆಯರು ಬೆಂಗಳೂರಿನಲ್ಲಿ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಕರ್ತೆಯರ ಅಹವಾಲುಗಳನ್ನ ಆಲಿಸಿದ ಸಚಿವರು, ಆಶಾ ಕಾರ್ಯಕರ್ತೆಯರ ಪರ ಸರ್ಕಾರವಿದೆ ಎಂದರು.
ಆಶಾ ಕಾರ್ಯಕರ್ತೆಯರ ಕುಂದುಕೊರತೆಗಳ ನಿವಾರಣೆಯ ನಿಟ್ಟಿನಲ್ಲಿ ಸರ್ಕಾರ ಮತ್ತು ಇಲಾಖೆಯು ಮುಕ್ತ ಮನಸ್ಸಿನಲ್ಲಿದ್ದು, ತ್ವರಿತ ಪ್ರತಿಸ್ಪಂದನೆಗೆ ಸದಾ ಸಿದ್ಧವಾಗಿದೆ. ಆಶಾ ಕಾರ್ಯಕರ್ತೆಯರ ಪ್ರೋತ್ಸಾಹಧನದ ವಿತರಣೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ತಾನು ಗಳಿಸಿದ ಪ್ರೋತ್ಸಾಹಧನದ ವಿವರಗಳನ್ನು ಗಮನಿಸಲು ಆಶಾ ನಿಧಿ ತಂತ್ರಾಂಶದಲ್ಲಿ “ASHA View My Incentive” ನ್ನು ಸೃಜಿಸಲಾಗಿದ್ದು, ಆಶಾ ಕಾರ್ಯಕರ್ತೆಯರು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪಡೆದ ಪ್ರೋತ್ಸಾಹಧನದ ವಿವರಗಳನ್ನು ವೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.